ಜೂ.15ರೊಳಗೆ ಸಣ್ಣ ನೀರಾವರಿ ಗಣತಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ

KannadaprabhaNewsNetwork |  
Published : Jun 10, 2026, 02:15 AM IST
ಫೋಟೋವಿವರ- (9ಎಚ್‌ಪಿಟಿ2) ಹೊಸಪೇಟೆ ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಅಂಕಿ ಸಂಖ್ಯೆ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸಭೆ ನಡೆಸಿದರು | Kannada Prabha

ಸಾರಾಂಶ

ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಹಸಿಲ್ದಾರರೊಂದಿಗೆ ಸೂಕ್ತ ಸಮನ್ವಯ ಸಾಧಿಸಿ, ನಿಗದಿತ ಅವಧಿಯೊಳಗೆ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು.

ಹೊಸಪೇಟೆ: ಜಿಲ್ಲೆಯಲ್ಲಿ ಪ್ರಗತಿ ಕುಂಠಿತಗೊಂಡಿರುವ 7ನೇ ಸಣ್ಣ ನೀರಾವರಿ ಹಾಗೂ 2ನೇ ನೀರಿನಾಸರೆ ಗಣತಿಯನ್ನು ಸರ್ಕಾರದ ನಿರ್ದೇಶನದಂತೆ ಜೂ.15ರ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಡೆದ ಅಂಕಿ ಸಂಖ್ಯೆ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಹಸಿಲ್ದಾರರೊಂದಿಗೆ ಸೂಕ್ತ ಸಮನ್ವಯ ಸಾಧಿಸಿ, ನಿಗದಿತ ಅವಧಿಯೊಳಗೆ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು. ಪ್ರಕೃತಿ ವಿಕೋಪ, ಬರಗಾಲ ಅಥವಾ ಕೀಟಬಾಧೆಯಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ಸೌಲಭ್ಯ ಮತ್ತು ಪರಿಹಾರ ಸಿಗಬೇಕಾದರೆ ಬೆಳೆ ಕಟಾವು ಪ್ರಯೋಗ ಅಂಕಿ-ಅಂಶಗಳು ನಿಖರವಾಗಿರಬೇಕು. ತಪ್ಪು ಲೆಕ್ಕಾಚಾರಗಳಿಂದಾಗಿ ಯಾವೊಬ್ಬ ರೈತನಿಗೂ ಅನ್ಯಾಯವಾಗಬಾರದು ಎಂದು ಅವರು ಎಚ್ಚರಿಸಿದರು.

ಜಿಲ್ಲೆಯಾದ್ಯಂತ ಬೆಳೆ ಕಟಾವು ಪ್ರಯೋಗಗಳನ್ನು ನಿಯಮಾನುಸಾರ ಅತ್ಯಂತ ಪಾರದರ್ಶಕವಾಗಿ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ಸಹಾಯಕ ಕೃಷಿ ಅಧಿಕಾರಿಗಳು, ಕೃಷಿ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿಗಳು ತಮಗೆ ಸಂಬಂಧಿಸಿದ ವಿಮಾ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ಜಂಟಿಯಾಗಿ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಬೇಕು. ಬೆಳೆ ಕಟಾವಿನ ಪ್ರಕ್ರಿಯೆಗಾಗಿ ನಿಗದಿಪಡಿಸಲಾಗಿರುವ ತಾಂತ್ರಿಕ ಆ್ಯಪ್‌ನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಬೆಳೆ ಕಟಾವು ನಡೆಯುವ ಸಮಯದಲ್ಲಿ ಸಂಬಂಧಪಟ್ಟ ವಿಮಾ ಕಂಪನಿಯ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳದಲ್ಲಿ ಹಾಜರಿರಬೇಕು. ಇದರೊಂದಿಗೆ, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ನಮೂನೆ 1 ಮತ್ತು 2ರ ದಾಖಲೀಕರಣ ಕೂಡಲೇ ಪೂರ್ಣಗೊಳಿಸಬೇಕು. ರೈತರ ಬೆಳೆ ವಿಮೆ ಪ್ರಕ್ರಿಯೆಗೆ ಪೂರಕವಾಗಿರುವುದರಿಂದ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿತನ ತೋರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್. ಕೆ.ಪತ್ರಿಬಸಪ್ಪ, ರೇಷ್ಮೆ ಇಲಾಖೆ ಉಪನಿರ್ದೇಶಕ ಶ್ರೀಹರ್ಷ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಭುರಾಜ, ಜಿ.ಪಂ.ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆ
ಅಪರಿಚಿತ ಮಹಿಳೆ ಅತ್ಯಾಚಾರವೆಸಗಿ ಕೊಲೆಗೈದು ಸುಟ್ಟಿರುವ ಶಂಕೆ