ಗೋಪಾಲ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಆರಂಭ

KannadaprabhaNewsNetwork |  
Published : Apr 18, 2025, 12:44 AM IST
43 | Kannada Prabha

ಸಾರಾಂಶ

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯು ಈ ಸಂಶೋಧನಾ ಯೋಜನೆಯನ್ನು ಪ್ರಾಯೋಜಿಸಿದ್ದು

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಲ್ಲಿ ಒಂದಾಗಿರುವ, ಗೊಲ್ಲ ಸಮುದಾಯದ ಉಪ ಪಂಗಡವಾಗಿರುವ ಗೋಪಾಲ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನವು ಆರಂಭವಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರೊ. ರೇಖಾ ಜಾದವ್‌ ಅವರ ನೇತೃತ್ವದಲ್ಲಿ ಕುಲಶಾಸ್ತ್ರೀಯ ಅಧ್ಯಯನ ಕಾರ್ಯವು ಆರಂಭವಾಗಿದ್ದು, ಪೂರ್ವಭಾವಿ ಸಿದ್ಧತೆಗಳು ನಡೆಸಿದ್ದಾರೆ. ಈ ಸಂಶೋಧನಾ ಯೋಜನೆಯಲ್ಲಿ ಮೈಸೂರು ವಿವಿ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರದ ಡಾ.ಡಿ.ಸಿ. ನಂಜುಂಡ ಅವರು ಸಹ ಸಂಶೋಧಕರಾಗಿದ್ದಾರೆ.

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯು ಈ ಸಂಶೋಧನಾ ಯೋಜನೆಯನ್ನು ಪ್ರಾಯೋಜಿಸಿದ್ದು, ಇದಕ್ಕೆ ಒಟ್ಟು 13 ಲಕ್ಷ ರು. ಅನುದಾನವನ್ನು ಮೈಸೂರು ವಿವಿಗೆ ಈಗಾಗಲೇ ಬಿಡುಗಡೆ ಮಾಡಿದ್ದು, ಈ ಯೋಜನೆಗೆ ಬೇಕಾದ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿವೆ.

ಈ ಬಾರಿ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯು ಒಟ್ಟು 10 ರಿಂದ 12 ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನವನ್ನು ಆರಂಭಿಸಿದ್ದು, ಇದರಲ್ಲಿ ಗೋಪಾಲ ಸಮುದಾಯವು ಸೇರಿದೆ. ಈ ಸಮುದಾಯದವರು ಸದ್ಯ ರಾಜ್ಯದ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯವಾಗಿ ಗುರುತಿಸಲಾಗಿದೆ ಎನ್ನುತ್ತಾರೆ ಯೋಜನೆಯ ಮುಖ್ಯಸ್ಥೆ ಪ್ರೊ. ರೇಖಾ ಜಾದವ್‌.

ಗೋಪಾಲ ಸಮುದಾಯವು ಮೂಲತಃ ಅರೆ ಅಲೆಮಾರಿ ಸಮುದಾಯವಾಗಿದ್ದು, ಇವರು ಒರಿಸ್ಸಾ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ವಲಸೆ ಬಂದ ಸಮುದಾಯವಾಗಿದೆ. ಕೆಲವೆಡೆ ಇವರನ್ನು ಯಾದವರು ಎಂದು ಕರೆಯಲಾಗುತ್ತದೆ. ಸದ್ಯ ರಾಜ್ಯದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಅಧ್ಯಯನದಲ್ಲಿ ಗೋಪಾಲ ಸಮುದಾಯದ ಇತಿಹಾಸ, ವಲಸೆ, ಸಂಸ್ಕೃತಿ, ಚಲನಶೀಲತೆ, ಅನನ್ಯತೆ ಮುಂತಾದ ಅಂಶಗಳ ಕುರಿತು ಆಳವಾದ ಅಧ್ಯಯನ ಕೈಗೊಳ್ಳುವುದರೊಂದಿಗೆ ಅವರ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಕುರಿತು ಅಧ್ಯಯನ ನಡೆಸಲಾಗುವುದು. ಅಲ್ಲದೆ, ವಿಚಾರಸಂಕೀರ್ಣ, ಸಮೀಕ್ಷೆ, ಮೌಲ್ಯಮಾಪನ ಇತ್ಯಾದಿ ಅಧ್ಯಯನದ ಭಾಗವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.

----

ಕೋಟ್...

ಫೋಟೋ- 17ಎಂವೈಎಸ್43

----

ಪ್ರಸ್ತುತ ಗೋಪಾಲ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನವನ್ನು 18 ರಿಂದ 24 ತಿಂಗಳೊಳಗೆ ಮುಗಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈಗಾಗಲೇ ಅಧ್ಯಯನವನ್ನು ಆರಂಭಿಸಿದ್ದು, ಶೀಘ್ರದಲ್ಲೇ ಕ್ಷೇತ್ರ ಭೇಟಿಗೂ ತೆರಳುತ್ತೇವೆ. ಪ್ರಸ್ತುತ ಜಾತಿ ಗಣತಿಯ ಹಿನ್ನೆಲೆಯಲ್ಲಿ ಈ ಕುಲಶಾಸ್ತ್ರೀಯ ಅಧ್ಯಯನವು ಪ್ರಮುಖ ಪಾತ್ರ ವಹಿಸಲಿದೆ.

- ಪ್ರೊ. ರೇಖಾ ಜಾದವ್‌, ಸಮಾಜಶಾಸ್ತ್ರ ವಿಭಾಗ, ಮಹಾರಾಜ ಕಾಲೇಜು, ಮೈಸೂರು ವಿವಿ

----

ಫೋಟೋ- 17ಎಂವೈಎಸ್44

ಗೋಪಾಲ ಸಮುದಾಯವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದ ಅತ್ಯಂತ ಅಲಕ್ಷಿತ ಅಲೆಮಾರಿ ಸಮುದಾಯವಾಗಿದೆ. ಪ್ರಸ್ತುತ ವರದಿಯ ಅಲೆಮಾರಿ ಸಮುದಾಯಗಳ ಒಳಗೊಳ್ಳುವಿಕೆಯ ಬೆಳವಣಿಗೆಗೆ ಸಹಾಯವಾಗುತ್ತದೆಂಬ ನಿರೀಕ್ಷಿಸಬಹುದು.

- ಡಾ.ಡಿ.ಸಿ. ನಂಜುಂಡ, ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ, ಮೈಸೂರು ವಿವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ