ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಶಿಥಿಲಾವಸ್ಥೆಗೆ

KannadaprabhaNewsNetwork |  
Published : Jul 29, 2024, 12:57 AM IST
ನೀರಿನಿಂದ ಮುಳುಗಡೆಗೊಂಡಿರುವ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ  | Kannada Prabha

ಸಾರಾಂಶ

ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ.

ಬಿ.ಎಚ್.ಎಂ. ಅಮರನಾಥಶಾಸ್ತ್ರಿ

ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ನೂತನ ಸೇತುವೆ ನಿರ್ಮಿಸಬೇಕೆಂಬ ಸ್ಥಳೀಯರ ಬಹು ವರ್ಷಗಳ ಬೇಡಿಕೆಗೆ ಮಣಿಯದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡೆ ತಾಲೂಕಿನ ಜನತೆಯಲ್ಲಿ ಬೇಸರ ಮೂಡಿಸಿದೆ.

1959ರ ಫೆಬ್ರವರಿ 17ರಂದು ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ನಿರ್ಮಾಣಕ್ಕಾಗಿ ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಎಂ. ಚನ್ನಬಸಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. 1961ರ ಜುಲೈನಲ್ಲಿ ಮೈಸೂರು ಸರ್ಕಾರದ ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಕೆ. ವೀರಣ್ಣಗೌಡ ಸೇತುವೆ ಲೋಕಾರ್ಪಣೆ ಮಾಡಿದ್ದರು. 63 ವರ್ಷಗಳಷ್ಟು ಹಳೆಯದಾದ ಈ ಸೇತುವೆ ಪ್ರವಾಹದ ಭೀಕರತೆಯಿಂದಾಗಿ ಶಿಥಿಲಾವಸ್ಥೆಗೆ ತಲುಪಿದೆ.

ಪ್ರತಿ ಬಾರಿಯೂ ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿಯಬಿಟ್ಟಾಗ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಳ್ಳುವ ಮೂಲಕ ಕಲ್ಯಾಣ ಕರ್ನಾಟಕ ಭಾಗಗಳ ಸಂಪರ್ಕ ಕಡಿತಗೊಳ್ಳುತ್ತದೆ. ಸೇತುವೆ ಮುಳುಗಡೆಗೊಂಡಾಗ ಗಂಗಾವತಿ ಮಾರ್ಗವಾಗಿ ಸಂಚರಿಸಲು ಸುತ್ತು ಬಳಸಿ ಸಂಚರಿಸಬೇಕಾಗಿದೆ.

2022ರ ಜು. 14ರಂದು ಅಂದಿನ ಸಚಿವರಾಗಿದ್ದ ಬಿ. ಶ್ರೀರಾಮುಲು ಪ್ರವಾಹ ಸ್ಥಳಕ್ಕೆ ಭೇಟಿ ನೀಡಿ ನೂತನ ಸೇತುವೆ ನಿರ್ಮಾಣಕ್ಕೆ ₹69 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಸೇತುವೆ ನಿರ್ಮಾಣದ ಭೂಮಿಪೂಜೆ ಮಾಡಿಸುವುದಾಗಿ ತಿಳಿಸಿದ್ದರು. ಬಳಿಕ ಶಾಸಕ ಜೆ.ಎನ್. ಗಣೇಶ್ ಪತ್ರಿಕಾಗೋಷ್ಠಿಯಲ್ಲಿ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಯಾವುದೇ ಅನುದಾನ ಬಿಡುಗಡೆಗೊಂಡಿಲ್ಲ. ಸುಳ್ಳು ಮಾಹಿತಿ ನೀಡುವ ಮೂಲಕ ಮಾಜಿ ಸಚಿವ ಶ್ರೀರಾಮುಲು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದರು.

ಕಂಪ್ಲಿಯ ಜ್ವಲಂತ ಸಮಸ್ಯೆಯಾದ ಸೇತುವೆಯ ವಿಚಾರ ಅಸ್ತ್ರವಾಗಿ ಬಳಕೆಯಾಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ನೂತನ ಸೇತುವೆ ನಿರ್ಮಿಸುವುದಾಗಿ ವಿಧಾನಸಭಾ ಚುನಾವಣೆ ವೇಳೆ ಗಣೇಶ ಭರವಸೆ ನೀಡಿದ್ದರು. ಇದೀಗ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತಾ ಬಂದರೂ ಸೇತುವೆಗೆ ಅನುದಾನ ತರುವ ವಿಷಯ ಒಂದೆಡೆ ಇರಲಿ, ಸೇತುವೆ ವಿಚಾರವನ್ನೇ ಶಾಸಕರು ಮರೆತಂತೆ ವರ್ತಿಸುತ್ತಿದ್ದಾರೆ.

ನೂತನ ಸೇತುವೆ ನಿರ್ಮಾಣ ವಿಚಾರ ಕನಸಾಗಿಯೇ ಉಳಿದಿದೆ. ಶಾಸಕ ಗಣೇಶ್ ಚುನಾವಣೆ ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಸೇತುವೆ ನಿರ್ಮಾಣಕ್ಕೆ ಅನುದಾನ ತರುವುದಾಗಿ ಆಶ್ವಾಸನೆ ನೀಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದರೂ ಈ ವಿಚಾರ ಕುರಿತು ಶಾಸಕರು ಮೌನ ವಹಿಸಿರುವುದು ಶೋಚನೀಯ. ಸರ್ಕಾರ ಇನ್ನಾದರೂ ಎಚ್ಚೆತ್ತು ಸೇತುವೆ ನಿರ್ಮಾಣಕ್ಕೆ ಮುಂದಾಗಲಿ ಎನ್ನುತ್ತಾರೆ ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜು ನಾಯಕ.

ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ನಿರ್ಮಾಣ ಕುರಿತು ಪಿಡಬ್ಲ್ಯೂಡಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಕುರಿತು ಸರ್ಕಾರದ ಗಮನಕ್ಕೆ ತರುವ ಮೂಲಕ ನೂತನ ಸೇತುವೆಗೆ ಅನುದಾನ ಕಲ್ಪಿಸಲು ಪ್ರಯತ್ನಿಸಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ