ಜಿಲ್ಲೆಯ 60 ಗ್ರಾಮಗಳಲ್ಲಿ ಕುಡಿವ ನೀರಿನ ಆತಂಕ

KannadaprabhaNewsNetwork |  
Published : Nov 08, 2023, 01:00 AM IST

ಸಾರಾಂಶ

ರಾಮನಗರ: ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿದ ಪರಿಣಾಮ ಜಿಲ್ಲೆಯಲ್ಲಿ ಬೆಳೆ ಹಾನಿ ಜೊತೆಗೆ ಕೆರೆಕಟ್ಟೆಗಳು ಬರಿದಾಗುತ್ತಿದ್ದು, ಮಳೆ ಬಾರದಿದ್ದರೆ 62 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ.ಜಿಲ್ಲೆಯ ರಾಮನಗರ ಟೌನ್‌ ನ ಕೆಲ ವಾರ್ಡುಗಳು ಹಾಗೂ ಮಾಗಡಿ ತಾಲೂಕಿನ ತಗ್ಗಿಕುಪ್ಪೆ, ವಿಠಲಪುರ, ಮತ್ತಾ ಗ್ರಾಮಗಳಿಗೆ ಈಗಾಗಲೇ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಇಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ 62 ಗ್ರಾಮಗಳನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಗುರುತಿಸಿದೆ.

ರಾಮನಗರ: ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿದ ಪರಿಣಾಮ ಜಿಲ್ಲೆಯಲ್ಲಿ ಬೆಳೆ ಹಾನಿ ಜೊತೆಗೆ ಕೆರೆಕಟ್ಟೆಗಳು ಬರಿದಾಗುತ್ತಿದ್ದು, ಮಳೆ ಬಾರದಿದ್ದರೆ 62 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ.

ಜಿಲ್ಲೆಯ ರಾಮನಗರ ಟೌನ್‌ ನ ಕೆಲ ವಾರ್ಡುಗಳು ಹಾಗೂ ಮಾಗಡಿ ತಾಲೂಕಿನ ತಗ್ಗಿಕುಪ್ಪೆ, ವಿಠಲಪುರ, ಮತ್ತಾ ಗ್ರಾಮಗಳಿಗೆ ಈಗಾಗಲೇ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಇಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ 62 ಗ್ರಾಮಗಳನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಗುರುತಿಸಿದೆ.

ರಾಮನಗರದ ಕೆಲ ವಾರ್ಡುಗಳಿಗೆ ನಗರಸಭೆ ಟ್ಯಾಂಕರ್‌ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದೆ. ಇನ್ನು ಮಾಗಡಿ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವ ಮೂರು ಗ್ರಾಮಗಳಿಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಟ್ಯಾಂಕರ್‌ ನೀರಿನ ವ್ಯವಸ್ಥೆ ಮಾಡಿದ್ದು, ಆ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲು ಸಿದ್ಧತೆ ಮಾಡಿಕೊಂಡಿದೆ.

ರಾಮನಗರ ಜಿಲ್ಲೆ ಬಯಲುಸೀಮೆಯ ಪ್ರದೇಶವಾಗಿದ್ದು, ಯಾವುದೇ ನದಿ ಮೂಲವನ್ನು ಹೊಂದಿಲ್ಲ. ಹೀಗಾಗಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಸದ್ಯಕ್ಕೆ ಜಲಮೂಲವಾಗಿರುವ ಸಣ್ಣ ಜಲಾಶಯಗಳು ಮತ್ತು ಕೆರೆಕಟ್ಟೆಗಳು ಬರಿದಾಗುತ್ತಿವೆ. ಇದರಿಂದಾಗಿ ಜನ ಜಾನುವಾರುಗಳಿಗೆ ಸಂಕಷ್ಟ ಎದುರಾಗುವ ಆತಂಕ ಸೃಷ್ಟಿಯಾಗಿದೆ.

ಜಿಲ್ಲೆಯಲ್ಲಿನ ಕೆರೆಕಟ್ಟೆಗಳಲ್ಲಿ ನೀರು ಸಂಪೂರ್ಣ ಸಂಗ್ರಹವಾಗದೆ ಕಾಡುಪ್ರಾಣಿ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುತ್ತಿವೆ. ಮುಂಗಾರು ಮಳೆಯ ಪ್ರಮಾಣ ವಾಡಿಕೆಗಿಂತ ಸಂಪೂರ್ಣ ಕುಸಿತ ಕಂಡಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡಬಹುದಾದ ಕನಕಪುರ ತಾಲೂಕಿನಲ್ಲಿ 22, ಚನ್ನಪಟ್ಟಣ ತಾಲೂಕಿನಲ್ಲಿ 10, ರಾಮನಗರ ತಾಲೂಕಿನಲ್ಲಿ 26 ಹಾಗೂ ಮಾಗಡಿ ತಾಲೂಕಿನಲ್ಲಿ 4 ಹಳ್ಳಿಗಳು ಸೇರಿದಂತೆ ಒಟ್ಟು 62 ಗ್ರಾಮಗಳನ್ನು ಗುರುತಿಸಿದ್ದು, ಅಲ್ಲಿ ಬೋರ್‌ ವೆಲ್‌ ಗಳನ್ನು ಕೊರೆಸಿ ನೀರು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

274 ಕೋಟಿ ರುಪಾಯಿ ನಷ್ಟ:

ಜಿಲ್ಲೆಯ ಕನಕಪುರ, ರಾಮನಗರ, ಹಾರೋಹಳ್ಳಿ ತಾಲೂಕುಗಳನ್ನು ಪ್ರಸಕ್ತ ಮುಂಗಾರಿನಲ್ಲಿ ತೀವ್ರ ಬರ ಪೀಡಿತ ಹಾಗೂ ಚನ್ನಪಟ್ಟಣ, ಮಾಗಡಿ ತಾಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಬರಪೀಡಿತ ತಾಲೂಕುಗಳಲ್ಲಿ ಬೆಳೆ ಹಾನಿಯಾಗಿರುವ ಸಂಬಂಧ ಸರ್ಕಾರದ ಸೂಚನೆಯಂತೆ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿದ್ದು, 44,128 ಹೆಕ್ಟೇರ್ ಬೆಳೆ ಹಾನಿ ಹಾಗೂ ಅದರಿಂದ ಒಟ್ಟಾರೆ 274 ಕೋಟಿ ರುಪಾಯಿಗಳ ನಷ್ಟದ ಅಂದಾಜನ್ನು ಮಾಡಲಾಗಿದೆ.

ಜಿಲ್ಲಾಡಳಿತ ಈ ಕ್ರೋಢೀಕೃತ ವರದಿಯನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಿದಾಗ 1496 ಕೆರೆಗಳ ಪೈಕಿ 2 ಕೆರೆಗಳು

ಮಾತ್ರ ಭರ್ತಿಯಾಗಿದ್ದರೆ, 4 ಕೆರೆಗಳು ಸಂಪೂರ್ಣ‍ವಾಗಿ ಖಾಲಿಯಾಗಿದ್ದವು.

ಸಣ್ಣ ನೀರಾವರಿ ಇಲಾಖೆ - 110 ಕೆರೆಗಳು , ಪಂಚಾಯತ್‌ ರಾಜ್ ಇಲಾಖೆ - 1322 ಕೆರೆಗಳು ,ನಗರ ಸ್ಥಳೀಯ ಸಂಸ್ಥೆಗಳು - 61 ಕೆರೆಗಳು ಹಾಗೂ ಕಾವೇರಿ ನೀರಾವರಿ ನಿಗಮ 03 ಕೆರೆಗಳ ಉಸ್ತವಾರಿ ನೋಡಿಕೊಳ್ಳುತ್ತಿವೆ.

ಸಣ್ಣ ನೀರಾವರಿ ವಿಭಾಗದ ವ್ಯಾಪ್ತಿಯಲ್ಲಿ 101 ಕೆರೆಗಳು 4911.67 ಎಂಸಿಎಫ್‌ ಟಿಯಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 2 ಕೆರೆಗಳು ಮಾತ್ರ ಭರ್ತಿಯಾಗಿದ್ದು, 4 ಕೆರೆಗಳು ಸಂಪೂರ್ಣವಾಗಿ ಬರಿದಾಗಿದ್ದರೆ 41 ಕೆರೆಗಳು ಶೇ.1ರಿಂದ ಶೆ.30ರಷ್ಟು ನೀರಿದ್ದರೆ, 36 ಕೆರೆಗಳಲ್ಲಿ ಶೇ.31ರಿಂದ ಶೇ.50ರಷ್ಟು ಹಾಗೂ 18 ಕೆರೆಗಳು ಶೇ.51ರಿಂದ ಶೇ.99ರಷ್ಟು ನೀರು ಸಂಗ್ರಹವಾಗಿದೆ.

ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗ ವ್ಯಾಪ್ತಿಯ 393 ಕೆರೆಗಳು 2208.36 ಎಂಸಿಎಫ್‌ ಟಿಯಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಯಾವ ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ, ಖಾಲಿಯೂ ಆಗಿಲ್ಲ. 224 ಕೆರೆಗಳು ಶೇ.1 ರಿಂದ ಶೇ.30ರಷ್ಟು ನೀರು ಸಂಗ್ರಹವಾಗಿದ್ದರೆ, 136 ಕೆರೆಗಳು ಶೇ.31ರಿಂದ ಶೇ.50ರಷ್ಟು ಹಾಗೂ 32 ಕೆರೆಗಳು ಶೇ.51ರಿಂದ ಶೇ.99ರಷ್ಟು ನೀರು ಸಂಗ್ರಹವಾಗಿತ್ತು.

ಕಳೆದ ಜನವರಿಯಿಂದಲೇ ಜಿಲ್ಲೆಯಲ್ಲಿ ಉಷ್ಣಾಂಶದ ಪ್ರಮಾಣ ಏರುಗತಿಯಲ್ಲಿತ್ತು. ಹೆಚ್ಚುತ್ತಿರುವ ಬಿಸಿಲಿನಿಂದ ಜಲಮೂಲಗಳಾದ ಕೆರೆಕಟ್ಟೆಗಳು ಬರಿದಾಗುತ್ತಿವೆ. ಅಂತರ್ಜಲ ಮಟ್ಟವೂ ಗಂಭೀರ ಸ್ಥಿತಿಗೆ ತಲುಪುವಂತಾಗಿದೆ. ಸಮಸ್ಯೆ ಕಂಡುಬರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ.

ಬಾಕ್ಸ್ .......

7.50 ಕೋಟಿ ರು. ಅನುದಾನ

ಬರ ಸನ್ನಿವೇಶವನ್ನು ಸೂಕ್ತವಾಗಿ ನಿಭಾಯಿಸುವ ಉದ್ದೇಶದಿಂದ ರಾಮನಗರ ಜಿಲ್ಲೆಗೆ ಕೇವಲ 7 ಕೋಟಿ 50 ಲಕ್ಷ ರುಪಾಯಿ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

2023ನೇ ಮುಂಗಾರು ಹಂಗಾಮಿನ ಬರ ಪರಿಹಾರ ಕಾರ್ಯಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ (SDRF) ಅಡಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಕುಡಿಯುವ ನೀರು ಪೂರೈಕೆಗೆ ವಿನಿಯೋಗಿಸಲಾಗುತ್ತದೆ.ಬಾಕ್ಸ್ .............

ಬರ ಪೀಡಿತ ಪ್ರದೇಶಕ್ಕೆ ಸಚಿವರ ಭೇಟಿ

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯವರು ಬುಧವಾರ (ನ.8) ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆದೇಶದ ಹಿನ್ನೆಲೆಯಲ್ಲಿ ಸಚಿವ ರಾಮಲಿಂಗಾರೆಡ್ಡಿರವರು ಜಿಲ್ಲೆಯ 5 ತಾಲೂಕುಗಳಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಮೊದಲು ಹಾರೋಹಳ್ಳಿ ತಾಲೂಕಿಗೆ ಭೇಟಿ ನೀಡಲಿರುವ ಸಚಿವರು ಕನಕಪುರ, ಚನ್ನಪಟ್ಟಣ, ರಾಮನಗರ ಹಾಗೂ ಮಾಗಡಿ ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ.(ಮೇಲಿನ ಬಾಕ್ಸ್‌ಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮಗ್‌ಶಾಟ್‌ ಬಳಸಿ)(ಫೋಟೋ ಬರಲಿದೆ)

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ