ರಾಜಕಾಲುವೆ ಮೇಲೆ ನಿರ್ಮಿಸಿದ್ದ ಕಾಂಕ್ರೀಟ್ ಸ್ಲ್ಯಾಬ್ ತೆರವು

KannadaprabhaNewsNetwork |  
Published : Oct 10, 2026, 01:15 AM IST
9ಕೆಆರ್ ಎಂಎನ್ 1.ಜೆಪಿಜಿರಾಮನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ಶ್ರೀ ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್ ನವರು ರಾಜಕಾಲುವೆ ಮೇಲೆ ನಿರ್ಮಿಸಿರುವ ಸ್ಲ್ಯಾಬ್ ತೆರವು ಕಾರ್ಯಾಚರಣೆ ವೇಳೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಅಧಿಕಾರಿಗಳು ಹಾಗೂ ಮಾಜಿ ಶಾಸಕ ಕೆ.ರಾಜು ಚರ್ಚೆ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ಖಾಸಗಿ ಸ್ಪೋರ್ಟ್ ಕ್ಲಬ್ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಕ್ರೀಟ್ ಸ್ಲ್ಯಾಬ್ ಅನ್ನು ಕ್ಲಬ್ ಸದಸ್ಯ ಹಾಗೂ ಮಾಜಿ ಶಾಸಕ ಕೆ.ರಾಜು ಮತ್ತಿತರರ ತೀವ್ರ ವಿರೋಧದ ನಡುವೆಯೂ ನಗರಸಭೆ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು

ರಾಮನಗರ: ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ಖಾಸಗಿ ಸ್ಪೋರ್ಟ್ ಕ್ಲಬ್ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಕ್ರೀಟ್ ಸ್ಲ್ಯಾಬ್ ಅನ್ನು ಕ್ಲಬ್ ಸದಸ್ಯ ಹಾಗೂ ಮಾಜಿ ಶಾಸಕ ಕೆ.ರಾಜು ಮತ್ತಿತರರ ತೀವ್ರ ವಿರೋಧದ ನಡುವೆಯೂ ನಗರಸಭೆ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.

ಶ್ರೀ ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಸೆಂಟರ್‌ನವರು ಕ್ಲಬ್‌ಗೆ ಹೊಂದಿಕೊಂಡಿರುವ ರಾಜಕಾಲುವೆಯನ್ನು ಸುಮಾರು 175 ಅಡಿಗೂ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದಲ್ಲದೆ ಅದರ ಮೇಲೆ ಸ್ಲ್ಯಾಬ್ ನಿರ್ಮಿಸಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ನಗರಸಭೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ರಾಜಕಾಲುವೆ ಮೇಲೆ ನಿರ್ಮಿಸಿದ್ದ ಸ್ಲ್ಯಾಬ್ ಅನ್ನು ತೆರವುಗೊಳಿಸಲು ಮುಂದಾದರು. ಆಗ ಸ್ಥಳಕ್ಕೆ ಆಗಮಿಸಿದ ಕ್ಲಬ್ ಸದಸ್ಯರಾಗಿರುವ ಮಾಜಿ ಶಾಸಕ ಕೆ.ರಾಜು ಮತ್ತು ಉಪಾಧ್ಯಕ್ಷ ಪಿ.ಸಿದ್ದೇಗೌಡ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು.

ಜೆಸಿಬಿಗೆ ಅಡ್ಡಲಾಗಿ ನಿಂತು ತೆರವು ಕಾರ್ಯಾಚರಣೆಗೆ ತಡೆಯೊಡ್ಡಿದ ಕೆ.ರಾಜು, ನಗರಸಭೆ ಕಂದಾಯ ಅಧಿಕಾರಿ ನಾಗರಾಜು ಅವರೊಂದಿಗೆ ವಾಗ್ವಾದಕ್ಕಿಳಿದರು. ನೋಟಿಸ್ ಕೊಡದೇ ಏಕೆ ತೆರವು ಮಾಡುತ್ತಿದ್ದೀರಿ. ಕ್ಲಬ್‌ನಲ್ಲಿ ನಿತ್ಯ ನೂರಾರು ಜನರು ಯೋಗ ಮಾಡುತ್ತಾರೆ. ಅವರಿಗೆಲ್ಲ ರಾಜಕಾಲುವೆಯಿಂದ ಬರುತ್ತಿರುವ ವಾಸನೆಯಿಂದ ತೊಂದರೆಯಾಗುತ್ತಿದೆ. ಹಾಗಾಗಿ ಅದರ ಮೇಲೆ ಕಾಂಕ್ರೀಟ್ ಹಾಕಿದ್ದಾರೆ. ಯಾವ ಕಾರಣಕ್ಕೂ ಸ್ಲ್ಯಾಬ್ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಕೆ.ರಾಜು ಪಟ್ಟು ಹಿಡಿದರು.

ಆಗ ನಾಗರಾಜು ಕ್ಲಬ್‌ನವರಿಗೆ ಎಚ್ಚರಿಕೆ ನೀಡಿದ್ದರೂ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಸ್ಲ್ಯಾಬ್ ಹಾಕಿದ್ದಾರೆ. ಅದಕ್ಕೆಲ್ಲ ನೋಟಿಸ್ ಕೊಡಲು ಬರುವುದಿಲ್ಲ. ಶಾಸಕರಾಗಿ ರಾಮನಗರ ಕ್ಷೇತ್ರ ಪ್ರತಿನಿಧಿಸಿದ್ದ ನೀವೇ ಅದನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ರಾಜಕಾಲುವೆ ಒತ್ತುವರಿ ಮಾಡಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ. ಇದು ತಿಳಿದಿದ್ದರೂ ನೀವು ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸುವುದು ನಿಮ್ಮ ಘನತೆಗೆ ಶ್ರೇಯಸ್ಸಲ್ಲ. ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಬೇಡಿ ಎಂದು ವಿನಂತಿಸಿದರು. ಆದರೂ ಕೆ.ರಾಜುರವರು ತೆರವು ಕಾರ್ಯಾಚರಣೆಗೆ ಅವಕಾಶ ನೀಡದೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು.

ಈ ಗಲಾಟೆ ವಿಚಾರ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮತ್ತು ಆಯುಕ್ತ ಜಯಣ್ಣರವರು ರಾಜಕಾಲುವೆ ಒತ್ತುವರಿ ಮತ್ತು ಅದರಿಂದಾಗುವ ಅನಾಹುತಗಳ ಕುರಿತು ಮನವರಿಕೆ ಮಾಡಿಕೊಟ್ಟ ಬಳಿಕ ಕೆ.ರಾಜುರವರು ಮೌನವಾದರು. ಆದರೆ, ಕ್ಲಬ್ ಉಪಾಧ್ಯಕ್ಷ ಪಿ.ಸಿದ್ದೇಗೌಡ ಕ್ಲಬ್ ಸಾರ್ವಜನಿಕರಿಗೆ ಸೇರಿದ್ದು ಎಂದು ವಾದಿಸಲು ಮುಂದಾದಾಗ ಸ್ಥಳೀಯರಾದ ಲಕ್ಷ್ಮೀಕಾಂತ್ (ಪತಿ) ಮತ್ತು ಪ್ರವೀಣ್ ರವರು ಅವರೊಂದಿಗೆ ಮಾತಿನ ಚಕಮಕಿ ನಡೆಸಿ ಕೈ ಕೈ ಮಿಲಾಯಿಸಲು ಮುಂದಾದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲಿದ್ದವರು ಮೂವರನ್ನು ಸಮಾಧಾನ ಪಡಿಸಿದರು.

ಆನಂತರ ನಗರಸಭೆ ಅಧಿಕಾರಿಗಳು ಸ್ಲ್ಯಾಬ್ ಅನ್ನು ತೆರವುಗೊಳಿಸುವ ಕಾರ್ಯ ಮುಂದುವರೆಸಿದರು.

ಕೋಟ್ .................

ರಾಜಕಾಲುವೆ ಒತ್ತುವರಿ ಮಾಡಿಕೊಳ್ಳುವುದು ಅಪರಾಧ ಎಂದು ಮಾಜಿ ಶಾಸಕ ಕೆ.ರಾಜು ಅವರಿಗೆ ಮನವರಿಕೆ ಮಾಡಿಕೊಟ್ಟ ಮೇಲೆ ಒಪ್ಪಿಕೊಂಡರು. ಬೋಳಪ್ಪನ ಕೆರೆಯಿಂದ ನೀರು ಹರಿಯಲಿದ್ದು, ಅಡತಡೆಯಾದರೆ ನೀರು ಮನೆಗಳಿಗೆ ನುಗ್ಗಿ ಅನಾಹುತ ಸಂಭವಿಸುತ್ತದೆ. ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು ಅಕ್ರಮವಾಗಿ ಸ್ಲ್ಯಾಬ್ ನಿರ್ಮಾಣ ಮಾಡುತ್ತಿದ್ದು, ಕ್ಲಬ್ ಗೆ ದಂಡ ಕೂಡ ವಿಧಿಸುತ್ತೇವೆ. ಕಾಂಪೌಂಡ್ ಮತ್ತು ಪಾರ್ಕ್ ಒತ್ತುವರಿಯಾಗಿದ್ದು, ಪರಿಶೀಲಿಸಿ ಕ್ರಮ ವಹಿಸುತ್ತೇವೆ.

-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ

ಕೋಟ್ ...............

ಶ್ರೀ ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಸೆಂಟರ್ ಗೆ ಹೊಂದಿಕೊಂಡಿರುವ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಾಂಕ್ರಿಟ್ ಸ್ಲ್ಯಾಬ್ ಹಾಕುತ್ತಿರುವ ಬಗ್ಗೆ ಸಾರ್ವಜನಿಕರು ಮಾತ್ರವಲ್ಲದೆ ಕ್ಲಬ್ ನ ಸದಸ್ಯರು ಮೌಖಿಕವಾಗಿ ದೂರು ಹೇಳಿದ್ದರು. ಈ ಕ್ಲಬ್ ನ ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಇದೀಗ ಪಾರ್ಕ್ ಜಾಗವೂ ಒತ್ತುವರಿಯಾಗಿದೆ.

- ಆರ್.ನಾಗರಾಜ್, ಕಂದಾಯ ಅಧಿಕಾರಿ, ನಗರಸಭೆ, ರಾಮನಗರ

ಕೋಟ್................

ಕ್ಲಬ್ ನಲ್ಲಿ ಯೋಗ ಮಾಡುವ ಜನರಿಗೆ ರಾಜಕಾಲುವೆಯಿಂದ ಬರುತ್ತಿದ್ದ ವಾಸನೆಯಿಂದ ತೊಂದರೆಯಾಗುತ್ತಿತ್ತು. ಹಾಗಾಗಿ ರಾಜಕಾಲುವೆಗೆ ಸ್ಲ್ಯಾಬ್ ಹಾಕಿದ್ದಾರೆ. ಒಂದು ವಾರ ಕಾಲವಕಾಶ ಕೊಡುವಂತೆ ನಗರಸಭೆ ಅಧಿಕಾರಿಗಳಿಗೆ ಹೇಳಿದೆ. ನೋಟಿಸ್ ಕೊಡದೆ ಸ್ಲ್ಯಾಬ್ ತೆರವು ಮಾಡುತ್ತಿದ್ದಾರೆ. ಕಾನೂನು ಪ್ರಕಾರ ತಪ್ಪಾಗಿದ್ದರೆ ಸ್ಲ್ಯಾಬ್ ಅನ್ನು ತೆರವು ಮಾಡಲಿ, ನಮ್ಮದೇನು ಅಭ್ಯಂತರ ಇಲ್ಲ.

- ಕೆ.ರಾಜು, ಮಾಜಿ ಶಾಸಕರು

9ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ಶ್ರೀ ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್ ನವರು ರಾಜಕಾಲುವೆ ಮೇಲೆ ನಿರ್ಮಿಸಿರುವ ಸ್ಲ್ಯಾಬ್ ತೆರವು ಕಾರ್ಯಾಚರಣೆ ವೇಳೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಅಧಿಕಾರಿಗಳು ಹಾಗೂ ಮಾಜಿ ಶಾಸಕ ಕೆ.ರಾಜು ಚರ್ಚೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರ್ ತಿದ್ದುಪಡಿಗಾಗಿ ಅಂಚೆ ಕಚೇರಿ ಎದುರು ಜನರ ಪರದಾಟ
ಕಲಬುರಗಿ: ಜಿಪಂ ಮೀಸಲಾತಿ ಪ್ರಕಟ