ವಾಲ್ಮೀಕಿ ನಿಗಮ ಹಣ ಅಕ್ರಮ ವಿರುದ್ಧ ನಿಷ್ಪಕ್ಷ ತನಿಖೆ ನಡೆಸಿ

KannadaprabhaNewsNetwork |  
Published : Jun 29, 2024, 12:35 AM IST

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರು. ಹಣ ವರ್ಗಾವಣೆ ಗೋಲ್‌ಮಾಲ್‌ ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಲಾಯಿತು.

- ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಮುಖಂಡರ ಆಗ್ರಹ । ಜಿ.ಎಂ.ಸಿದ್ದೇಶ್ವರ, ಗಾಯತ್ರಿ, ಹರೀಶ ನೇತೃತ್ವದಲ್ಲಿ ಪ್ರತಿಭಟನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರು. ಹಣ ವರ್ಗಾವಣೆ ಗೋಲ್‌ಮಾಲ್‌ ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ, ದಾವಣಗೆರೆ ಲೋಕಸಭೆ ಕ್ಷೇತ್ರ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಇತರರ ನೇತೃತ್ವದಲ್ಲಿ ಕಾರ್ಯಕರ್ತರು ಕಚೇರಿ ಮುಂಭಾಗದ ಬ್ಯಾರಿಕೇಡ್‌ಗಳನ್ನು ಎಳೆದಾಡಿ, ಕಚೇರಿಗೆ ಮುತ್ತಿಗೆ ಹಾಕಲು ಗೇಟ್ ಹತ್ತಲು ಯತ್ನಿಸಿದರು. ಇದರಿಂದ ಬಿಗುವಿನ ಸ್ಥಿತಿ ನಿರ್ಮಾಣವಾಗಿ, ಪ್ರತಿಭಟನಾಕಾರರನ್ನು ಪೊಲೀಸರು ನಿಯಂತ್ರಿಸಿದರು.

ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ರು.ಗಳ ಹಣ‍ ಅಕ್ರಮವಾಗಿ ವರ್ಗಾವಣೆಯಾಗಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲಬುರಗಿಯ ಶರಣು ಪಾಟೀಲ ಹೆಸರು ಸಹ ಕೇಳಿ ಬರುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರ, ಹಗರಣಗಳ ವಿರುದ್ಧ ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಪರಿಶಿಷ್ಟ ಪಂಗಡದ ಜನರಿಗೆ ಮೀಸಲಾದ ಹಣ‍ವನ್ನು ಯಾರೇ ಅಕ್ರಮವಾಗಿ ಬಳಸಿಕೊಂಡಿದ್ದರೂ, ದುರುಪಯೋಗ ಮಾಡಿಕೊಂಡಿದ್ದರೂ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಿಗಮದಲ್ಲಿ ಸುಮಾರು ₹187 ಕೋಟಿ ಅಕ್ರಮ ವರ್ಗಾವಣೆ ಅವ್ಯವಹಾರ ನಡೆದ ಬಗ್ಗೆ ಮಾತು ಕೇಳಿಬರುತ್ತಿದೆ. ಈ ಹಣವನ್ನೆಲ್ಲಾ ಕಾಂಗ್ರೆಸ್ ಚುನಾವಣೆ ವೆಚ್ಚಕ್ಕೆಂದು ಬಳಸಿರುವ ಶಂಕೆ ಇದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಹಣದ ಅಕ್ರಮ ವರ್ಗಾವಣೆ ವ್ಯವಹಾರದಲ್ಲಿ ತಮ್ಮ ಸಹಿ ಪೋರ್ಜರಿ ಮಾಡಿರುವ ಬಗ್ಗೆ ದೂರಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಪ್ರಕರಣ ಸಿಬಿಐಗೆ ಒಪ್ಪಿಸಬೇಕು. ಅನ್ಯಾಯಕ್ಕೆ ಒಳಗಾದ ಎಸ್‌ಟಿ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಪರಿಶಿಷ್ಟ ಸಮುದಾಯದ ವಿವಿಧ ಅಭಿವೃದ್ಧಿಗೆ ಮೀಸಲಿಟ್ಟ ಸುಮಾರು ₹24 ಸಾವಿರ ಕೋಟಿಯನ್ನು ಕಾಂಗ್ರೆಸ್ ಸರ್ಕಾರ ತನ್ನ ಇತರೆ ಯೋಜನೆಗಳಿಗೆ ಬಳಸಿದೆ. ಈ ಮೂಲಕ ಪರಿಶಿಷ್ಟರಿಗೂ ಅನ್ಯಾಯ ಮಾಡಿದೆ. ವಾಲ್ಮೀಕಿ ನಿಗಮದ ಚಂದ್ರಶೇಖರ ಆತ್ಮಹತ್ಯೆಗೆ ಮುನ್ನ ಬರೆದಿದ್ದ ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ಸಚಿವರ ಮೌಖಿಕ ಆದೇಶವೆಂದು ಬರೆದಿದ್ದರೂ, ಈವರೆಗೆ ಯಾವುದೇ ತನಿಖಾ ಸಂಸ್ಥೆ ಆ ಸಚಿವನನ್ನು ತನಿಖೆಗೆ ಒಳಪಡಿಸಿಲ್ಲ. ದುರಂತವೆಂದರೆ ಎಸ್‌ಟಿ ಮೀಸಲು ಕ್ಷೇತ್ರದಿಂದ ಗೆದ್ದ ಶಾಸಕರು ಸಮಾಜಕ್ಕೆ ಅನ್ಯಾಯವಾಗಿದ್ದರೂ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ, ಎಚ್.ಎಸ್.ಶಿವಕುಮಾರ ತುಮ್ಕೋಸ್‌, ಎಸ್.ಎಂ.ವೀರೇಶ ಹನಗವಾಡಿ, ಪಿ.ಸಿ.ಶ್ರೀನಿವಾಸ ಭಟ್, ಉಪ ಮೇಯರ್ ಯಶೋಧ ಯೋಗೇಶ, ಅಣಜಿ ಅಣ್ಣೇಶ, ಧನಂಜಯ ಕಡ್ಲೇಬಾಳು, ಬಿ.ಎಸ್.ಜಗದೀಶ, ಶಿವನಹಳ್ಳಿ ರಮೇಶ, ಎಂ.ಹಾಲೇಶ, ಜಿ.ಎಸ್.ಶ್ಯಾಮ ಮಾಯಕೊಂಡ, ಪಾಲಿಕೆ ಸದಸ್ಯರಾದ ಎಸ್.ಟಿ.ವೀರೇಶ, ಬಿ.ಜಿ.ಅಜಯಕುಮಾರ, ಆರ್.ಶಿವಾನಂದ, ಆರ್.ಎಲ್.ಶಿವಪ್ರಕಾಶ, ಬಿ.ಟಿ.ಸಿದ್ದಪ್ಪ, ಫಣಿಯಾಪುರ ಲಿಂಗರಾಜ, ಅತಿಥ್ ಅಂಬರಕರ, ಶಿವನಗೌಡ ಪಾಟೀಲ, ಮಂಜುಳಾ ಮಹೇಶ, ಭಾಗ್ಯ ಪಿಸಾಳೆ, ಚೇತನ ಶಿವಕುಮಾರ, ನೀತು ಬಳ್ಳಾರಿ, ಸವಿತಾ ರವಿಕುಮಾರ, ದಾಕ್ಷಾಯಣಿ, ಕುಮಾರಿ, ಕವಿತಾ, ಮಂಜುಳಾ ಇಟಗಿ, ಆನಂದ, ಶಿವರಾಜ ಪಾಟೀಲ, ಶಂಕರಗೌಡ ಬಿರಾದಾರ್, ಪ್ರಭು ಕಲ್ಬುರ್ಗಿ, ಟಿಂಕರ್ ಮಂಜಣ್ಣ, ಗೌತಮ್ ಜೈನ್, ಎನ್.ಲೋಕೇಶ, ಲೋಹಿತ್‌ ಮಂಗೇನಹಳ್ಳಿ, ಆನಗೋಡು ತಿಪ್ಪಣ್ಣ, ಎಚ್.ಪಿ.ದುರುಗೇಶ, ಗುಮ್ಮನೂರು ಶ್ರೀನಿವಾಸ, ಸಾಲಕಟ್ಟೆ ಸಿದ್ದಪ್ಪ, ಹೊಸಳ್ಳಿ ವೆಂಕಟೇಶ, ಕೃಷ್ಣಮೂರ್ತಿ, ತರಕಾರಿ ಶಿವು, ತ್ಯಾವಣಿಗೆ ದೊಡ್ಡೇಶ, ಕೆಂಚನಗೌಡ ಇತರರು ಇದ್ದರು.

- - -

ಬಾಕ್ಸ್‌

ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು

ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, ಎಸ್‌ಟಿ ನಿಗಮದಲ್ಲಿ ₹187 ಕೋಟಿ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆಯೊಂದೇ ಪರಿಹಾರವಲ್ಲ. ಇಡೀ ಪ್ರಕರಣದ ಹಿಂದೆ ಇರುವಂತಹ ವ್ಯಕ್ತಿಗಳು ಯಾರೆಂಬ ನಿಗೂಢ ಸತ್ಯ ಹೊರಬೀಳಬೇಕು. ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಬಿಡುಗಡೆಯಾದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ, ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಘೋರ ದ್ರೋಹ ಬಗೆದಿದೆ ಎಂದರು. ನಿಗಮದಿಂದ ವರ್ಗಾವಣೆಯಾದ ಹಣವೆಲ್ಲ ಹಣಕಾಸು ಇಲಾಖೆಯಡಿಯೇ ನಡೆದಿದೆ. ಆದರೆ, ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಅವರು ಈ ಪ್ರಕರಣದ ನೈತಿಕ ಹೊಣೆ ಹೊತ್ತು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಡೀ ರಾಜ್ಯ ಸಂಕಷ್ಟದ ಸರಮಾಲೆ ಹಾಸುಹೊತ್ತಿದೆ. ಆದರೆ, ಗ್ಯಾರಂಟಿಗೆ ಹಣ ಹೊಂದಿಸಲು ರಾಜ್ಯದ ಬೊಕ್ಕಸವನ್ನೇ ಖಾಲಿ ಮಾಡಿ, ಮೇಲಿಂದ ಮೇಲೆ ಸರಣಿ ರೂಪದಲ್ಲಿ ಬೆಲೆ ಏರಿಕೆ ಬರೆ ಎಳೆಯುತ್ತಿರುವ ಕಾಂಗ್ರೆಸ್ ಸರ್ಕಾರವ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತ ವೈಫಲ್ಯಕ್ಕೂ ತುತ್ತಾಗಿದೆ ಎಂದು ಅವರು ಟೀಕಿಸಿದರು.

- - - -(ಪೋಟೋ ಇದೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರ್ದು ಮುಸ್ಲಿಂರಿಗಷ್ಟೇ ಸೀಮಿತವಲ್ಲ ಜನಸಾಮಾನ್ಯರ ಭಾಷೆ
2 ಕೋಟಿ ವಂಚನೆ ಪ್ರಕರಣ: ಶರವಣ ಅಂದರ್