ಧಾರವಾಡ:
ಸಿವಿಲ್ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಆರ್‌ಪಿಸಿ ಹಾಗೂ ಕಲ್ಯಾಣ ಕರ್ನಾಟಕ ಪರೀಕ್ಷೆಗಳನ್ನು ಬರೆಯುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಬೆಳಗ್ಗೆ ಹಾಗೂ ಮಧ್ಯಾಹ್ನ ಬೇರೆ ಬೇರೆ ಊರುಗಳಲ್ಲಿ ಪರೀಕ್ಷಾ ಕೇಂದ್ರ ನೀಡಲಾಗಿದೆ. ಒಂದು ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ಹೋಗಲು ಹಲವೆಡೆ ಎರಡು ಗಂಟೆಗಿಂತ ಹೆಚ್ಚು ಸಮಯ ಬೇಕು ಹಾಗೂ ಬೆಂಗಳೂರಿನಂತ ಟ್ರಾಫಿಕ್ ನಗರದಲ್ಲಿ ಬಹಳ ಅಂತರದಲ್ಲಿ ಎರಡು ಕೇಂದ್ರ ನೀಡಲಾಗಿದೆ. ಅಭ್ಯರ್ಥಿಗಳು ಪ್ರಯಾಣಿಸಲು ಸಮಯ ಸಿಗುವುದಿಲ್ಲ. ಆದರೆ, ಸೂಚನೆಗಳಲ್ಲಿ ಪರೀಕ್ಷಾ ಕೇಂದ್ರದಲ್ಲಿ ಎರಡು ಗಂಟೆ ಮೊದಲು ಇರಲು ತಿಳಿಸಲಾಗಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಿ 2 ಗಂಟೆ ಮುಂಚೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗುವುದು ಅಸಾಧ್ಯ. ಇದು ಅಭ್ಯರ್ಥಿಗಳಲ್ಲಿ ಆತಂಕ, ಒತ್ತಡ ಉಂಟು ಮಾಡಿದೆ. ಆದ್ದರಿಂದ ಈ ಕೂಡಲೇ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದನ್ನು ಸರಿಪಡಿಸಿ ಅಭ್ಯರ್ಥಿಗಳಿಗೆ ಬೆಳಗ್ಗೆ ಪರೀಕ್ಷೆ ಬರೆದ ಕೇಂದ್ರಗಳಲ್ಲಿಯೇ ಮಧ್ಯಾಹ್ನದ ಪರೀಕ್ಷೆಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಲಾಯಿತು.
ಪರೀಕ್ಷೆಗೆ ಕೇವಲ ನಾಲ್ಕು ದಿನ ಇರುವುದರಿಂದ ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಪ್ರಾಧಿಕಾರವನ್ನು ಆಗ್ರಹಿಸಲಾಯಿತು. ನಿಯೋಗದಲ್ಲಿ ಸಂಚಾಲಕರಾದ ಭವಾನಿಶಂಕರ ಎಸ್. ಗೌಡ, ವೀರೇಶ ನರೇಗಲ್, ಯಲ್ಲಪ್ಪ ದೊರೆ, ನಾಮದೇವ ಕೊಣೂರು, ಮಲ್ಲೇಶ ಚೌಹಾಣ್, ಆಕಾಶ ಇದ್ದಾರೆ.