ಚಿತ್ರದುರ್ಗ: ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಕೋಟೆ ನಾಡು ಚಿತ್ರದುರ್ಗದಲ್ಲಿ ಶುಕ್ರವಾರ ದೇವಸ್ಥಾನಗಳು ಮುಂಭಾಗ ಭಕ್ತಿ ಭಾವಗಳ ಸಂಗಮವಾಗಿ ಗೋಚರಿಸಿದವು. ನಗರದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಈಶ್ವರನ ಮೂರ್ತಿಯನ್ನು ಕಣ್ಣುಕೋರೈಸುವಂತೆ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.
ಬಗೆ ಬಗೆಯ ಹೂವು ಹಾರ, ಬಿಲ್ವಪತ್ರೆ ಹಾಗೂ ತುಳಸಿ ಮಾಲೆಯಿಂದ ಅಲಂಕರಿಸಿ ಪೂಜಿಸಲಾಯಿತು. ಗಾಯತ್ರಿ ಭವನ ಸಮೀಪದಿಂದ ಸರತಿ ಸಾಲಿನಲ್ಲಿ ಬಂದು ಶಿವನ ದರ್ಶನ ಪಡೆಯಲು ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿವರಾತ್ರಿಯ ಜಾಗರಣೆ ನಿಮಿತ್ತ ರಾತ್ರಿಯಲ್ಲಿ ಅತಿಯಾದ ರಶ್ ಇರುತ್ತದೆಂದು ಕೆಲವರು ಸಂಜೆಯೆ ದರ್ಶನ ಪಡೆದರು. ದೇವಸ್ಥಾನದ ಮುಂಭಾಗ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿತ್ತು.ದೇವಸ್ಥಾನದ ಆಸುಪಾಸಿನಲ್ಲಿ ಬಿಲ್ವಪತ್ರೆ, ಹೂವು ಹಣ್ಣುಗಳ ಮಾರಾಟ ಬಿರುಸಿನಿಂದ ಕೂಡಿತ್ತು. ಮಹಿಳೆ, ಮಕ್ಕಳು, ವಯೋವೃದ್ದರಿಂದ ಹಿಡಿದು ಎಲ್ಲರೂ ದೇವಸ್ಥಾನದೊಳಗೆ ಸಾಲಿನಲ್ಲಿ ನಿಂತು ನೀಲಕಂಠೇಶ್ವನಿಗೆ ಶ್ರದ್ಧಾಭಕ್ತಿಯನ್ನು ಸಮರ್ಪಿಸಿದರು. ಕೆಲವರು ಮೊಬೈಲ್‍ಗಳಿಂದ ನೀಲಕಂಠೇಶ್ವರನ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬೇಡರಕಣ್ಣಪ್ಪ ದೇವಸ್ಥಾನ: ಕೆಳಗೋಟೆಯಲ್ಲಿರುವ ಶಿವಭಕ್ತ ಬೇಡರಕಣ್ಣಪ್ಪ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ತುಳಸಿ, ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಸುಗಂಧರಾಜ ಹೂವು ಹಾಗೂ ಹಾರಗಳಿಂದ ಸಿಂಗರಿಸಲಾಗಿತ್ತು. ಬೆಳಗಿನಿಂದ ರಾತ್ರಿಯವರೆಗೆ ನೂರಾರು ಭಕ್ತರು ಧಾವಿಸಿ ಬೇಡರಕಣ್ಣಪ್ಪನಿಗೆ ಭಕ್ತಿ ಸಮರ್ಪಿಸಿದರು.ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಬೇಡರ ಕಣ್ಣಪ್ಪ ದೇವಸ್ಥಾನದಿಂದ ಮಹಾಶಿವರಾತ್ರಿಯ ಪ್ರಯುಕ್ತ ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ದೇವಸ್ಥಾನದ ಅಡ್ಡ ರಸ್ತೆಯಿಂದ ಆರಂಭಗೊಂಡ ಮೆರವಣಿಗೆ ಮುನ್ಸಿಪಲ್ ಕಾಲೋನಿ, ಎಸ್ಪಿ .ಕಚೇರಿ ರಸ್ತೆ, ಆಕಾಶವಾಣಿ ಮುಂಭಾಗದಿಂದ ದೇವಸ್ಥಾನ ತಲುಪಿತು.ಸಾರೋಟಿನಲ್ಲಿ ಶಿವನ ಫೋಟೋದೊಂದಿಗೆ ಹೊರಟ ಮೆರವಣಿಗೆಯಲ್ಲಿ ಮೈಸೂರಿನವರು ಚಂಡೆ ಮೃದಂಗ ಬಾರಿಸುತ್ತಿದ್ದರು. ಮೆರವಣಿಗೆಯುದ್ದಕ್ಕೂ ಕೆಳಗೋಟೆಯ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟರು.ಬೇಡರಕಣ್ಣಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಾಪನಾಯಕ, ನಗರಸಭೆ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಕೆ.ಸುಬ್ರಮಣ್ಯಂ, ಉದ್ಯಮಿ ಮಹೇಶ್, ಮಂಜುನಾಥ್, ಶಿವರಾಜ್, ಚಂದ್ರಶೇಖರ್, ಶ್ರೀನಿವಾಸ್, ಸೋಮಶೇಖರ್, ಮಾರುತಿ, ಸುರೇಶ್ ಇನ್ನು ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪಾತಾಳೇಶ್ವರ ಸ್ವಾಮಿ ದೇವಸ್ಥಾನ: ಐತಿಹಾಸಿಕ ಚಿತ್ರದುರ್ಗ ಕೋಟೆ ರಸ್ತೆಯಲ್ಲಿರುವ ಪಾತಾಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.ಬಗೆ ಬಗೆಯ ಹೂವು ಹಾಗೂ ಹಾರಗಳಿಂದ ಅಲಂಕರಿಸಿ ಪೂಜಿಸಲಾಯಿತು. ಸಂಜೆಯಾಗುತ್ತಿದ್ದಂತೆ ಮಧ್ಯರಾತ್ರಿಯವರೆಗೂ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಪಾತೇಳೇಶ್ವರನ ದರ್ಶನ ಪಡೆದರು.