ಅಳ್ನಾವರ:
ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಗ್ರಾಮದ ರೈತರಿಗೆ ಕೃಷಿ ಮಾಡಲು ಆಗಿನ ಸರ್ಕಾರ ಗ್ರಾಮದ 1000ಕ್ಕೂ ಅಧಿಕ ಕೃಷಿ ಜಮೀನನ್ನು ಸಾಗುವಳಿಗೆ ನೀಡಿತ್ತು. ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಅಂದಿನಿಂದ ಸಾಗುವಳಿ ಮಾಡುತ್ತಿರುವ ರೈತ ಕುಟುಂಬಗಳಿಗೆ ಸರ್ಕಾರ ಈ ಭೂಮಿಯನ್ನು ಮಂಜೂರು ಮಾಡಲು ಮುಂದಾಗಿತ್ತು. ನಿಜವಾದ ಫಲಾನುಭವಿಗಳು ಅರ್ಜಿ ಸಹ ಸಲ್ಲಿಸಿದ್ದರು. ಆದರೆ, ಜಮೀನು ಉಳಿಮೆ ಮಾಡದೇ ಇರುವ ಹಾಗೂ ಭೂಮಿಗಾಗಿ ಅರ್ಜಿ ಸಹ ಸಲ್ಲಿಸದ ಅನೇಕರು ಸಾಗುವಳಿ ಭೂಮಿಯಲ್ಲಿ ಬೆಳೆದ ಬೆಳೆ ಹಾಳು ಮಾಡಿದ ಘಟನೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಕೆಲ ದಿನಗಳಿಂದ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು.
ಪ್ರಕರಣ ದಾಖಲು:ಈ ಕುರಿತು ಪರ-ವಿರೋಧವಾಗಿ ಅಳ್ನಾವರ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣ ಸಹ ದಾಖಲಾಗಿದ್ದವು. ಈ ಪೈಕಿ ಗ್ರಾಮಸ್ಥರ ಮೇಲೆ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣವೂ ದಾಖಲಾಗಿತ್ತು. ಮಂಗಳವಾರ ಗ್ರಾಮದಲ್ಲಿ ಗದ್ದಲ ಆಗುವ ಸನ್ನಿವೇಶ ಉಂಟಾಗಿತ್ತು. ಇದನ್ನರಿತ ಪ್ರಭಾರಿ ಜಿಲ್ಲಾಧಿಕಾರಿ ಭುವನೇಶ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸಂಜೆ ಗ್ರಾಮದಲ್ಲಿ ಎಸ್ಸಿ-ಎಸ್ಟಿ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ, ಜಮೀನು ಮಂಜೂರಿ ಬೇಡಿಕೆ ವಿಚಾರವಾಗಿ ಗ್ರಾಮದಲ್ಲಿ ಶಾಂತಿ ಕದಡಲು ಮುಂದಾದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎಸ್ಪಿ ಗುಂಜನ್ ಆರ್ಯ ಮಾತನಾಡಿ, ಸಾರ್ವಜನಿಕರು ನ್ಯಾಯಯುತ ಹೋರಾಟ ನಡೆಸಬೇಕೆ ಹೊರತು ದಬ್ಬಾಳಿಕೆ ಮಾಡಿದರೆ ಕಾನೂನು ಕ್ರಮ ಅನಿವಾರ್ಯ. ಸಮಸ್ಯೆಗಳಿಗೆ ಪರಿಹಾರ ಇರಲಿದ್ದು, ಸುಳ್ಳು ಆರೋಪಗಳ ಪ್ರವೃತ್ತಿ ಬೇಡ. ಮುಂದಿನ ದಿನಗಳಲ್ಲಿ ಯಾರಲ್ಲಿಯೂ ಮನಸ್ಥಾಪ ಇಟ್ಟುಕೊಳ್ಳದೆ ಶಾಂತಿಯಿಂದ ಇರುವಂತೆ ತಿಳಿಸಿದರು.
ದಲಿತ ಸಮುದಾಯದ ಮುಖಂಡರಾದ ಅಶೋಕ ದೊಡಮನಿ, ವೆಂಕಟೇಶ ಸಗಬಾಲ, ಪ್ರವೀಣ ಪವಾರ ಮಾತನಾಡಿ, ಜಾತಿ ನಿಂದನೆ ಪ್ರಕರಣವನ್ನು ವೈಯಕ್ತಿಕ ಉದ್ದೇಶಕ್ಕಾಗಿ ಬಳಸಿಕೊಳ್ಳದೇ ಸಮಾಜದ ಸುಧಾರಣೆಗೆ ಉಪಯೋಗಿಸುವುದು ಸೂಕ್ತ ಎಂಬ ಸಲಹೆ ನೀಡಿದರು.
ಕುಂಬಾರಕೊಪ್ಪ ಗ್ರಾಮದ 390 ರೈತರು ಈ ಜಮೀನನ್ನು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ಈ ಪೈಕಿ 354 ಜನರು ಫಾರ್ಮ ನಂ. 57ರಲ್ಲಿ ಹಕ್ಕು ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಬಗರಹುಕುಂ ಕಾಯ್ದೆಯ ಪ್ರಕಾರ ಪರಿಶೀಲನೆ ಮಾಡಿ ಜಮೀನು ಮಂಜೂರಿಗೆ ಸಮಿತಿ ಕ್ರಮಕೈಗೊಳ್ಳಲಿದೆ. ಆದರೆ, ಜಮೀನು ಸಾಗುವಳಿ ಮಾಡದಿರುವ ಹಾಗೂ ಅರ್ಜಿ ಸಲ್ಲಿಸದ ಕೆಲವರು ಈಗ ನಮಗೂ ಜಮೀನು ನೀಡುವಂತೆ ಒತ್ತಾಯಿಸಿ ಹೋರಾಟಕ್ಕೆ ಮುಂದಾಗಿರುವುದೇ ಈ ಘಟನೆಗೆ ಮೂಲ ಕಾರಣ ಎನ್ನಲಾಗಿದೆ.