ಕೊಂಕಣಿ ಅಕಾಡೆಮಿ ಸದಸ್ಯರ ನೇಮಕದಲ್ಲಿ ಗೊಂದಲ

KannadaprabhaNewsNetwork | Published : Jun 17, 2024 1:33 AM

ಸಾರಾಂಶ

ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರು ಹಾಗೂ ಇತರೆ 10 ಮಂದಿ ಸದಸ್ಯರನ್ನು ನೇಮಕ ಮಾಡಿ ಮಾರ್ಚ್‌ 15ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ(ಅಧಿಸೂಚನೆ ಸಂಖ್ಯೆ-ಕಸಂವಾ 204 ಕಸಧ 2023 ದಿನಾಂಕ 15-3-2024) ಹೊರಡಿಸಿತ್ತು.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ರಾಜ್ಯ ಸರ್ಕಾರ ಮೂರು ತಿಂಗಳ ಹಿಂದೆಯೇ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಆದೇಶ ಹೊರಡಿಸಿದ ಒಂದು ತಿಂಗಳಲ್ಲಿ ನೇಮಕಗೊಂಡ ಸದಸ್ಯರೊಬ್ಬರ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಒಂದೇ ಹೆಸರಿನ ಇಬ್ಬರು ಇರುವುದರಿಂದ ಅಸಲಿ ಸದಸ್ಯರು ಯಾರು ಸ್ಪಷ್ಟಪಡಿಸಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿಗೆ ಪತ್ರ ಬರೆಯಲಾಗಿದೆ. ಈಗ ಅಕಾಡೆಮಿ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ್ದು, ಇಲಾಖೆಯಿಂದ ಸೂಕ್ತ ಸ್ಪಷ್ಟನೆ ಸಿಗದೆ ಗೊಂದಲ ಮುಂದುವರಿಯುವಂತಾಗಿದೆ.

ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರು ಹಾಗೂ ಇತರೆ 10 ಮಂದಿ ಸದಸ್ಯರನ್ನು ನೇಮಕ ಮಾಡಿ ಮಾರ್ಚ್‌ 15ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ(ಅಧಿಸೂಚನೆ ಸಂಖ್ಯೆ-ಕಸಂವಾ 204 ಕಸಧ 2023 ದಿನಾಂಕ 15-3-2024) ಹೊರಡಿಸಿತ್ತು. ಈ ನೇಮಕ ಪತ್ರವನ್ನು ಪ್ರತಿಯೊಬ್ಬರ ಸದಸ್ಯರಿಗೂ ಇಲಾಖೆ ಅಂಚೆ ಮೂಲಕ ರವಾನಿಸಿತ್ತು. ಅದರಲ್ಲಿ ಮೂರನೇ ಕ್ರಮಾಂಕದಲ್ಲಿ ಡಾ.ವಿಜಯಲಕ್ಷ್ಮಿ ನಾಯಕ್‌ ಅವರ ಹೆಸರೂ ಸೇರಿತ್ತು.

ಸೃಷ್ಟಿಯಾದ ಗೊಂದಲ:

ಇಲಾಖೆಯ ಆದೇಶ ಹೊರಡಿಸಿದ ಒಂದು ತಿಂಗಳ ಬಳಿಕ ಏಪ್ರಿಲ್‌ 15ರಂದು ಅಕಾಡೆಮಿ ರಿಜಿಸ್ಟ್ರಾರ್‌ ಮನೋಹರ ಕಾಮತ್‌ ಅವರು ಡಾ.ವಿಜಯಲಕ್ಷ್ಮಿ ನಾಯಕ್‌ ಅವರಿಗೆ ಪ್ರತ್ಯೇಕ ಅಭಿನಂದನಾ ಪತ್ರವನ್ನು ಬರೆದಿದ್ದರು. ಇದಾದ ಕೆಲವೇ ದಿನಗಳಲ್ಲಿ ಡಾ.ವಿಜಯಲಕ್ಷ್ಮಿ ನಾಯಕ್‌ ನೇಮಕದ ಬಗ್ಗೆ ಜಿಜ್ಞಾಸೆ ವ್ಯಕ್ತಪಡಿಸಿ ಸ್ಪಷ್ಟೀಕರಣ ನೀಡುವಂತೆ ಕೋರಿ ಇಲಾಖೆಗೆ ರಿಜಿಸ್ಟ್ರಾರ್‌ ಪತ್ರ ಬರೆದಿದ್ದಾರೆ. ಅಲ್ಲದೆ ಈ ಬಗ್ಗೆ ಡಾ.ವಿಜಯಲಕ್ಷ್ಮಿ ನಾಯಕ್‌ ಅವರಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ ರಿಜಿಸ್ಟ್ರಾರ್‌ ಅವರು ಮೇ 28ರಂದು ನಿವೃತ್ತಿಯಾಗಿದ್ದು, ಅಲ್ಲಿವರೆಗೆ ಪ್ರತಿ ವಾರ ಎಂಬಂತೆ ಐದು ಬಾರಿ ಸ್ಪಷ್ಟನೆ ನೀಡುವಂತೆ ಕೋರಿ ಇಲಾಖೆಗೆ ಪತ್ರ ರವಾನಿಸಿದ್ದಾರೆ.

ಇಬ್ಬರದೂ ಒಂದೇ ಹೆಸರು:

ಡಾ.ವಿಜಯಲಕ್ಷ್ಮಿ ನಾಯಕ್‌ ಹೆಸರಿನ ಇಬ್ಬರು ಇದ್ದಾರೆ. ಇಬ್ಬರು ಕೂಡ ಉಪನ್ಯಾಸಕರು. ಅಕಾಡೆಮಿಗೆ ನೇಮಕಗೊಂಡ ಡಾ.ವಿಜಯಲಕ್ಷ್ಮಿ ನಾಯಕ್‌ ಪ್ರಸ್ತುತ ಸುರತ್ಕಲ್‌ ಕಾಲೇಜಿನಲ್ಲಿ ಉಪನ್ಯಾಸಕಿ. ಇದೇ ಹೆಸರಿನ ಇನ್ನೋರ್ವರು ಮಂಗಳೂರು ಕಾಲೇಜಿನಲ್ಲಿ ಉಪನ್ಯಾಸಕಿ. ಇಬ್ಬರದೂ ಒಂದೇ ಹೆಸರಾಗಿದ್ದರೂ ವಿಳಾಸ ಮಾತ್ರ ಬೇರೆ. ಸುರತ್ಕಲ್‌ ಕಾಲೇಜಿನ ಉಪನ್ಯಾಸಕಿ ಬಂಟ್ವಾಳದವರಾದರೆ, ಮಂಗಳೂರು ಕಾಲೇಜಿನ ಉಪನ್ಯಾಸಕಿ ಮಂಗಳೂರಿನವರು. ಸುರತ್ಕಲ್‌ ಕಾಲೇಜಿನ ಉಪನ್ಯಾಸಕಿ ಅಕಾಡೆಮಿ ಸದಸ್ಯರಾಗಲು ಪ್ರಯತ್ನ ನಡೆಸಿದರೆ, ಮಂಗಳೂರು ಕಾಲೇಜಿನ ಉಪನ್ಯಾಸಕಿ ಅಂತಹ ಪ್ರಯತ್ನ ನಡೆಸಿರಲಿಲ್ಲ.

ಗೊಂದಲ ಹೇಗೆ?:

ಇಲಾಖೆ ಸುರತ್ಕಲ್‌ ಕಾಲೇಜು ಉಪನ್ಯಾಸಕಿಯಾದ ಡಾ.ವಿಜಯಲಕ್ಷ್ಮಿ ನಾಯಕ್‌ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿತ್ತು. ಆದೇಶದ ಪ್ರತಿಯನ್ನು ಈ ಉಪನ್ಯಾಸಕಿಯ ಮನೆ ವಿಳಾಸಕ್ಕೂ ಕಳುಹಿಸಿತ್ತು. ಅಲ್ಲದೆ ರಿಜಿಸ್ಟ್ರಾರ್‌ ಕೂಡ ಈ ಉಪನ್ಯಾಸಕಿಯನ್ನು ಅಭಿನಂದಿಸಿ ಪತ್ರ ಕೂಡ ಬರೆದಿದ್ದರು. ಅದೇ ರಿಜಿಸ್ಟ್ರಾರ್‌ ಏಕಾಏಕಿ ಇಲಾಖೆಗೆ ಪತ್ರ ಬರೆದು ಅಕಾಡೆಮಿಗೆ ನೇಮಕಗೊಂಡ ಡಾ.ವಿಜಯಲಕ್ಷ್ಮಿ ನಾಯಕ್‌ ಬಗ್ಗೆ ಸ್ಪಷ್ಟನೆ ಕೋರುವ ಮೂಲಕ ಇಲ್ಲದ ಗೊಂದಲ ಎಳೆದು ತಂದಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನೋರ್ವ ಉಪನ್ಯಾಸಕಿ ಡಾ.ವಿಜಯಲಕ್ಷ್ಮಿ ನಾಯಕ್‌ಗೆ ಇಲಾಖೆಯಿಂದ ಕರೆ ಮಾಡಿದಾಗ ತನ್ನ ನೇಮಕವಾಗಿಲ್ಲ ಎಂದಿದ್ದರು. ಮಾತ್ರವಲ್ಲ ಸದಸ್ಯ ಸ್ಥಾನದ ಬಗ್ಗೆ ಆಸಕ್ತಿಯನ್ನೂ ತೋರ್ಪಡಿಸಿರಲಿಲ್ಲ, ನೇಮಕದ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿರಲಿಲ್ಲ ಎನ್ನಲಾಗಿದೆ. ಆದರೆ ರಿಜಿಸ್ಟ್ರಾರ್‌ಗೆ ಮಾತ್ರ ಡಾ.ವಿಜಯಲಕ್ಷ್ಮಿ ನಾಯಕ್‌ ಹೆಸರಿನ ಬಗ್ಗೆ ಇಲ್ಲದ ಗೊಂದಲ ಸೃಷ್ಟಿಯಾಗಿರುವುದು ವ್ಯಾಪಕ ಸಂದೇಹಕ್ಕೆ ಕಾರಣವಾಗಿದೆ. ಈ ಗೊಂದಲ ಬಗೆಹರಿಯದಿದ್ದರೆ ಕೋರ್ಟ್‌ ಮೆಟ್ಟಿಲೇರುವ ಸಿದ್ಧತೆಯಲ್ಲಿದೆ ಎಂದು ಹೇಳಲಾಗಿದೆ. -----

ಸದಸ್ಯರೊಬ್ಬರ ನೇಮಕ ವಿಚಾರದಲ್ಲಿ ಗೊಂದಲ ಇರುವುದು ನಿಜ. ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೋರಿ ಹಿಂದಿನ ರಿಜಿಸ್ಟ್ರಾರ್‌ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದಿದ್ದಾರೆ. ಅಲ್ಲಿಂದ ಶೀಘ್ರವೇ ಇತ್ಯರ್ಥಗೊಳ್ಳುವ ನಿರೀಕ್ಷೆ ಇದೆ.

-ಜೋಕಿಂ ಸ್ಟಾನ್ಲಿ ಆಲ್ವಾರಿಸ್‌, ಅಧ್ಯಕ್ಷರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ

Share this article