---
25 ಎಂವೈಎಸ್ 14ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಸಾದನ ತಜ್ಞ, ಹಿರಿಯ ರಂಗಕರ್ಮಿ ಡಿ. ಅಶ್ವತ್ಥ್ ಕದಂಬ- ಗಾಯತ್ರಿ ದಂಪತಿಯನ್ನು ಕದಂಬ ಕಲಾಪೀಠದ ವತಿಯಿಂದ ಭಾನುವಾರ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಸನ್ಮಾನಿಸಲಾಯಿತು. ನಟ ಮಂಡ್ಯ ರಮೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ರಂಗಕರ್ಮಿ ನಾ. ನಾಗಚಂದ್ರ, ಬಿ. ವಿದ್ಯಾಸಾಗರ ಕದಂಬ, ಟಿ. ಸತೀಶ್ ಜವರೇಗೌಡ, ಧನಂಜಯ ಇದ್ದಾರೆ.
--------ಕನ್ನಡಪ್ರಭ ವಾರ್ತೆ ಮೈಸೂರು
ಪ್ರಸಾದನ ತಜ್ಞ, ಹಿರಿಯ ರಂಗಕರ್ಮಿ ಡಿ. ಅಶ್ವತ್ಥ್ ಕದಂಬ ಅವರು ವ್ಯಕ್ತಿಪ್ರಜ್ಞೆಯ ಜೊತೆಗೆ ಸಮಷ್ಟಿ ಪ್ರಜ್ಞೆಯಿಂದ ಕೆಲಸ ಮಾಡಿದವರು ಎಂದು ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ನಟ ಮಂಡ್ಯ ರಮೇಶ್ ಬಣ್ಣಿಸಿದರು.ಕದಂಬ ಕಲಾಪೀಠವು ಡಿ. ಬಸಪ್ಪಾಜಿ ಕದಂಬ ಅವರ 95ನೇ ನೆನಪಿನೋತ್ಸವ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಸಾದನ ತಜ್ಞ, ರಂಗಕರ್ಮಿ ಡಿ. ಅಶ್ವತ್ಥ್ ಕದಂಬ ಅವರ 75ನೇ ಜನ್ಮದಿನೋತ್ಸವ ಅಂಗವಾಗಿ ಕಲಾಮಂದಿರದ ಕಿರುರಂಗಮಂದಿರದಲ್ಲಿ ಭಾನುವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕದಂಬ ಅವರ ಇಡೀ ಕುಟುಂಬವನ್ನೇ ಕಲಾಕುಟುಂಬ ಎನ್ನಬಹುದು. ಅವರ ಕಲಾಪ್ರಜ್ಞೆ ರಕ್ತಗತವಾಗಿಯೇ ಬಂದಿದೆ. ಅಶ್ವತ್ಥ್ ಅವರು ಸಜ್ಜನಿಕೆ, ವಿನಯವಂತಿಕೆ ಇರುವ ಅಪರೂಪದ ಪ್ರಸಾದನ ಕಲಾವಿದರು ಎಂದು ಅವರು ಶ್ಲಾಘಿಸಿದರು.ಅಶ್ವತ್ಥ್ ಅವರು ರಂಗಾಯಣ, ಕದಂಬ ರಂಗವೇದಿಕೆ, ನಟನ ಸೇರಿದಂತೆ ಎಲ್ಲಿಯೇ ಕೆಲಸ ಮಾಡಿದರೂ ಅತ್ಯಂತ ಶ್ರದ್ಧೆಯಿಂದ ಪ್ರಸಾದನ ಸೇವೆ ಮಾಡಿದವರು. ಹೊಸತನ್ನು ಪ್ರಯೋಗ ಮಾಡಿದವರು. ಜಾನಪದ ಕಲೆಯ ಬಗ್ಗೆಯೂ ಅಪಾರ ಆಸಕ್ತಿ ಹೊಂದಿದವರು ಎಂದರು
ಕಥೆ ಹೇಳುವವರ ಜೊತೆಗೆ ಕೇಳುವವರಿಗೆ ಆಸಕ್ತಿ ಇರಬೇಕು. ಇಲ್ಲದಿದ್ದಲ್ಲಿ ಆತ ಕಲಾವಿದ ಆಗಲು ಸಾಧ್ಯವೇ ಇಲ್ಲ. ನಾನು ಡಾ.ರಾಜ್‌ಕುಮಾರ್, ಲೀಲಾವತಿ ಮೊದಲಾದವರ ಜೊತೆ ಶೂಟಿಂಗ್ ಸಮಯದಲ್ಲಿ ಕಥೆಗಳನ್ನು ಕೇಳುತ್ತಾ ಬೆಳೆದವನು. ವಿವಿಧ ವರ್ಗಗಳ ಜನರಿಂದ ಎಷ್ಟೇ ಅಡೆತಡೆ ಬಂದರೂ ಕನ್ನಡದ ಜನಪ್ರೀತಿಯಿಂದ ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಉಳಿದುಕೊಂಡು ಬಂದವನು ಎಂದು ಅವರು ಹೇಳಿದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ನಾ. ನಾಗಚಂದ್ರ ಮುಖ್ಯಅತಿಥಿಯಾಗಿದ್ದರು. ಕದಂಬ ಕಲಾಪೀಠದ ಅಧ್ಯಕ್ಷ ಬಿ. ವಿದ್ಯಾಸಾಗರ ಕದಂಬ ಸ್ವಾಗತಿಸಿದರು. ಸ್ಪಂದನ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಇದ್ದರು. ಉಪನ್ಯಾಸಕ ಧನಂಜಯ ನಿರೂಪಿಸಿದರು.
ವಿಷಜ್ಞಾಲೆ ನಾಟಕ ಪ್ರದರ್ಶನನಂತರ ಕದಂಬ ಕಲಾಪೀಠವು ಡಿ. ಅಶ್ವತ್ಥ್ ಕದಂಬ ನಿರ್ದೇಶನದಲ್ಲಿ ಎನ್.ಎಸ್. ರಾವ್ ವಿರಚಿತ ವಿಷಜ್ಞಾಲೆ ನಾಟಕ ಪ್ರದರ್ಶಿಸಿತು. ಬಿ. ವಿದ್ಯಾಸಾಗರ ಕದಂಬ ಕೂಡ ನಿರ್ಮಾಣದ ಜೊತೆಗೆ ಪಾತ್ರವನ್ನು ಕೂಡ ನಿರ್ವಹಿಸಿದರು. ನಾಗಲಿಂಗೇಗೌಡರ ಸಂಗೀತ ಇತ್ತು.
ಇದಕ್ಕೂ ಮೊದಲು ಡಿ. ಅಶ್ವತ್ಥ್ ಕದಂಬ ಅವರ ರಂಗಸೇವೆಯನ್ನು ಕುರಿತು ಅರ್ಧತಾಸುಗಳ ಸಾಕ್ಷ್ಯಚಿತ್ರವನ್ನು ಕೂಡ ಪ್ರದರ್ಶಿಸಲಾಯಿತು.---