ಕನ್ನಡಪ್ರಭ ವಾರ್ತೆ ರಾಮನಗರ
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗಾರ್ಬೇಜ್ ಪರಿಸ್ಥಿತಿ ಹೇಗಿದೆಯೋ ಕಾಂಗ್ರೆಸ್ ಸರ್ಕಾರದ ಆಡಳಿತವೂ ಗಾರ್ಬೇಜ್‌ಗೆ (ಕಸಕ್ಕೆ) ಸಮನಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಲಿ ನಡೆಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ 40- 45 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ಎಂದೂ ಕೂಡ ನೋಡಿರಲಿಲ್ಲ. ರಾಜ್ಯದಲ್ಲಿ ಸಂಪೂರ್ಣ ಅಭಿವೃದ್ಧಿ ಶೂನ್ಯ ಹಾಗೂ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅತ್ಯಂತ ಕೆಟ್ಟ ಆಡಳಿತ ವ್ಯವಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಚಯಿಸಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯೇ ಆಗುತ್ತಿಲ್ಲ. ರೈತರ ಸಮಸ್ಯೆಗಳಿಗೆ ಗಮನ ಕೊಡುತ್ತಿಲ್ಲ, ಹಿಂದುಳಿದವರು, ದಲಿತರ ಸಮಸ್ಯೆಗಳಿಗೆ ಪರಿಹಾರ ಕೊಡುವ ಬದಲಾಗಿ ಇವರೆಲ್ಲವನ್ನೂ ಮರೆಮಾಚಿದ್ದಾರೆ. ದುಡ್ಡೆಷ್ಟು ಹೊಡೆದಿರಿ. ಆಸ್ತಿ ಎಷ್ಟು ಮಾಡಿದ್ದೀರಿ. ಜನರಿಗೆ ಎಷ್ಟು ತೆರಿಗೆ ಹಾಕಿದ್ದೀರಿ. ಬೆಲೆ ಏರಿಕೆ ಎಷ್ಟು ಮಾಡಿದಿರಿ. ದಲಿತರ ಹಣ ಎಷ್ಟು ಲೂಟಿ ಮಾಡಿದ್ದೀರಿ. ಎಷ್ಟು ಜನರ ಹನಿಟ್ರಾಪ್ ಮಾಡಿದಿರಿ? ಫೋನ್ ಟ್ಯಾಪಿಂಗ್ ಎಷ್ಟಾಗಿದೆ. ಎಂಬ ಚರ್ಚೆ ಆಗುವಂತಾಗಿದೆ. ಇದು ಆಡಳಿತವೇ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಈ ಸರ್ಕಾರ ಇರಲೇಬಾರದಿತ್ತು. ಇಂಥ ಪರಿಸ್ಥಿತಿಗೆ ರಾಜ್ಯವನ್ನು ತಳ್ಳುವ ಬದಲಾಗಿ ರಾಜೀನಾಮೆ ಕೊಟ್ಟು ಆ ಕಡೆ ಹೊರಟು ಹೋಗಬೇಕಿತ್ತು ಎಂದು ತಿಳಿಸಿದರು.ದಲಿತರ ಹಣವನ್ನು ಸರ್ಕಾರ ತಿಂದು ಹಾಕುತ್ತಿದೆ. ದಲಿತರಿಗೆ ಸರ್ಕಾರ ಅನ್ಯಾಯ ಮಾಡುತ್ತಿದ್ದರೂ ಕಾಂಗ್ರೆಸ್ ದಲಿತ ಸಚಿವರು, ಶಾಸಕರು ಬಾಯಿ ಬಿಡುತ್ತಿಲ್ಲ. ಇಂತಹ ಗುಲಾಮಗಿರಿಯನ್ನು ನಾನು ಎಲ್ಲಿಯೂ ನೋಡಿಲ್ಲ. ದಲಿತರ ಹಣ, ದಲಿತರಿಗೆ ಮೀಸಲಾಗಿ ಇಡಬೇಕು. ಗ್ಯಾರಂಟಿಗಾಗಿ ದಲಿತರ ಹಣ ಬಳಸಿಕೊಳ್ಳಲಾಗಿದೆ ಎಂದು ಟೀಕಿಸಿದರು.
ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಿಸಿ ಧರ್ಮಾಧಾರಿತ ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿಯಾಗಿ ಮುಂದುವರಿಯುವ ನೈತಿಕತೆ ಇಲ್ಲ. ಮುಖ್ಯಮಂತ್ರಿಗಳು ಕೂಡಲೇ ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.ಸಂವಿಧಾನ ಬದಲಾವಣೆ ಬಗ್ಗೆ ಡಿಕೆಶಿ ಮಾತನಾಡಿದರೂ ದಲಿತ ಸಂಘಟನೆಗಳು ಧ್ವನಿ ಎತ್ತುತ್ತಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ದಲಿತರಿಗೆ ಭಯ ಬಂದುಬಿಟ್ಟಿದೆ. ಕಾಂಗ್ರೆಸ್ ಏನೇ ಮಾತನಾಡಿದರೂ ಸುಮ್ಮನಿರುತ್ತಾರೆ. ಕಾಂಗ್ರೆಸ್ ಸುಡುವ ಮನೆ, ಇದರಲ್ಲಿ ಭವಿಷ್ಯ ಇಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ದಲಿತರು ಹೆದರಿಕೊಂಡು ಬದುಕುತ್ತಿದ್ದಾರೆ. ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಯಾರೇ ಮಾತನಾಡಿದರೂ ಧೈರ್ಯವಾಗಿ ವಿರೋಧಿಸಿ. ಯಾವುದೇ ಪಕ್ಷ ಆದರೂ ಸರಿಯೇ ವಿರೋಧಿಸಿ ಎಂದು ಮನವಿ ಮಾಡಿದರು.
ಡಿಕೆಶಿ ರಾಜಕೀಯ ನಿವೃತ್ತಿ ಪಡೆಯಲಿ:ಡಿ.ಕೆ.ಶಿವಕುಮಾರ್ ರಾಜಕೀಯ ನಿವೃತ್ತಿ ಪಡೆಯೋದನ್ನು ಮಾಡಿ ತೋರಿಸಬೇಕು. ತಿರುಚೋದಕ್ಕೆ ಅದೇನು ಡ್ಯಾಂ ನೀರಲ್ಲ. ನೀವು ಒಂದು ಮಾಧ್ಯಮದಲ್ಲಿ ಕೂತು ಮಾತನಾಡಿದ್ದೀರಿ. ಇಡೀ ದೇಶವೇ ನಿಮ್ಮ ಸಂದರ್ಶನ ನೋಡಿದೆ. ನಾವೇನು ನಿಮ್ಮ ನಾಲಿಗೆಗೆ ಹಗ್ಗಕಟ್ಟಿ ತಿರುಚಿದ್ದೇವಾ. ಡಿಕೆಶಿ ಮುಂದೆ ಸಿಎಂ ಆಗುವ ಅವಕಾಶ ಹೊಂದಿರುವವರು. ಆದರೆ, ಇವರ ಮಾತುಗಳನ್ನು ಕೇಳಿದರೆ ಇವರು ಸಿಎಂ ಆಗಬಾರದು. ಅವರು ವಿಚಲಿತರಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಂಡಿದೆ. ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇರಲ್ಲ. ಕರ್ನಾಟಕ ಕಾಮಧೇನು ರೀತಿ ಇದೆ. ಕಾಮಧೇನು ಕೆಚ್ಚಲನ್ನ ಕುಯ್ಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ನಾರಾಯಣಸ್ವಾಮಿ ಕೆಂಡಕಾರಿದರು.ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಆರ್.ವಿ.ಸುರೇಶ್, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಶಿವಾನಂದ, ಜಗನ್ನಾಥ್ ಗೌಡ, ರಾಜಣ್ಣ, ಕಿಶನ್, ಜಯಪ್ರಕಾಶ್ ಇದ್ದರು.
ಸಿಎಂಗೂ ಹನಿಟ್ರ್ಯಾಪ್ ಭಯಹನಿಟ್ರ‍್ಯಾಪ್‌ನಲ್ಲಿ ಬಿಜೆಪಿಯ ಯಾವ ನಾಯಕರೂ ಇಲ್ಲ. ಇದ್ದಿದ್ದರೆ ಸರ್ಕಾರ ಇಷ್ಟೊತ್ತಿಗೆ ತನಿಖೆಗೆ ಮುಂದಾಗುತ್ತಿತ್ತು. ಈಗ ಕಾಂಗ್ರೆಸ್ ನಾಯಕರೇ ಕಾಂಗ್ರೆಸ್‌ನವರ ಹನಿಟ್ರ‍್ಯಾಪ್ ಮಾಡುತ್ತಿದ್ದಾರೆ. ತಮ್ಮ ವಿರುದ್ಧ ಮಾತನಾಡುವವರನ್ನು ಮಟ್ಟ ಹಾಕಲು ಹನಿಟ್ರ‍್ಯಾಪ್ ಮಾಡುವ ಕೆಲಸ ಆಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೇ ಆಡುತ್ತಿಲ್ಲ. ತನಿಖೆ ಮಾಡುತ್ತೇವೆ ಅನ್ನೋದು ಬಿಟ್ಟರೆ ಇನ್ನೇನು ಹೇಳಿಲ್ಲ. ಸಿದ್ದರಾಮಯ್ಯರದ್ದೂ ಹನಿಟ್ರ‍್ಯಾಪ್ ಆಗಿರುವ ಅನುಮಾನ ಇದೆ. ತನಿಖೆಯಾದರೆ ಇವರದ್ದೂ ಎಲ್ಲಿ ಆಚೆ ಬರುತ್ತದೆ ಎಂಬ ಭಯ ಕಾಡುತ್ತಿರಬೇಕು. ಅದಕ್ಕಾಗಿ ಮುಖ್ಯಮಂತ್ರಿಗಳು ತನಿಖೆಗೆ ಸೂಚಿಸುತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.