ಕನ್ನಡಪ್ರಭ ವಾರ್ತೆ ಶಿವಮೊಗ್ಗಪ್ರಧಾನಿ ಮೋದಿ ಅವರ ಗ್ಯಾರಂಟಿಗಳು ಹುಸಿಯಾಗಿದ್ದು, ಕಾಂಗ್ರೆಸ್ ಗ್ಯಾರಂಟಿಗಳು ನಿಜವಾಗಿರುವುದರಿಂದ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.
ಚುನಾವಣೆಗೂ ಮೊದಲು ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳುತ್ತಿದ್ದರು. ಯಾವ ಆಧಾರದಲ್ಲಿ ಹಾಗೆ ಹೇಳುತ್ತಿದ್ದರೋ ಗೊತ್ತಿಲ್ಲ. ಆದರೆ, ಈಗ 20 ರಿಂದ 24 ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದಾರೆ ಈಗ ಅವರ ವಿಶ್ವಾಸ ಕುಂದು ಹೋಗಿದೆ ಎಂದು ಹೇಳಿದರು.ನಗರಕ್ಕೆ ಖರ್ಗೆ, ರಾಗಾ: ಗುರುವಾರ ನಗರಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಎಂಎಲ್ಸಿ ಇನಾಯತ್ ಅಲಿ, ಪ್ರಮುಖರಾದ ಯು. ಶಿವಾನಂದ, ವಿಜಯ್‍ಕುಮಾರ್(ದನಿ), ಹಬೀಬ್ ಉಲ್ಲಾ, ದೇವಿಕುಮಾರ್, ಮೂರ್ತಿ, ಲಕ್ಷ್ಮಿ ವೆಂಕಟೇಶ್ ಇನ್ನಿತರರು ಇದ್ದರು.ಬಿಜೆಪಿಗೆ ಹೆಚ್ಚೆಂದರೆ 200 ಸ್ಥಾನ : ಚುನಾವಣೆ ಘೋಷಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬಾರಿ 400 ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದರು. ಎರಡು ಹಂತದ ಚುನಾವಣೆ ಬಳಿಕ ಅದರ ಬಗ್ಗೆ ಮಾತೇ ಆಡುತ್ತಿಲ್ಲ. ಅವರಿಗೂ ಮತದಾನದ ಮಾಹಿತಿ ಸಿಕ್ಕಿರುತ್ತದೆ. ಬಿಜೆಪಿ ಹೆಚ್ಚೆಂದರೆ 200 ಸ್ಥಾನ ಗಳಿಸಬಹುದು ಎಂಬುದು ಅವರು ಗೊತ್ತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.