ಕುಕನೂರು: ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜರುಗಿ ಬರೋಬ್ಬರಿ 9 ತಿಂಗಳ ನಂತರ ಮತ ಎಣಿಕೆ ಕಾರ್ಯ ಜರುಗಿದೆ. ಸಂಘದ ಚುನಾವಣೆಯ 12 ಸ್ಥಾನದಲ್ಲಿ 11 ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು, ಕುಕನೂರು ಸೊಸೈಟಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗದ್ದುಗೆ ಆಗಲಿದೆ.
ಕಳೆದ 2024ರ ಡಿ.29ರಂದು ಸೊಸೈಟಿಯ ಚುನಾವಣೆ ಜರುಗಿತ್ತು. ಅಂದೇ ಮತ ಎಣಿಕೆ ಆಗಬೇಕಿತ್ತು. ಆದರೆ ಮತ ಎಣಿಕೆ ಆಗದೆ ಉಳಿದು ಬಿಟ್ಟಿತು. ಸೊಸೈಟಿ ಚುನಾವಣೆಯಲ್ಲಿ ಕೆಲವರಿಗೆ ಮಾತ್ರ ಮತದಾನದ ಹಕ್ಕು ನೀಡಿದ್ದಾರೆ. ಎಲ್ಲ ಷೇರುದಾರರಿಗೆ ನೀಡಿಲ್ಲ ಎಂದು ಸೊಸೈಟಿ ಚುನಾವಣೆಯ ಮತದಾರರ ಪಟ್ಟಿ ಪ್ರಶ್ನಿಸಿ ಕೆಲವರು ಕೋರ್ಟಿನಿಂದ ತಮಗೂ ಮತದಾನದ ಅವಕಾಶ ನೀಡಬೇಕು ಎಂದು ಮೋರೆ ಹೋಗಿದ್ದರು.ಕೋರ್ಟ ಸಹ ಎಲ್ಲ ಷೇರುದಾರರಿಗೂ ಮತದಾನದ ಅವಕಾಶ ನೀಡಿ ಎಂದು ಕೋರ್ಟನಿಂದ ಅರ್ಹತೆ ಪಡೆದ ಮತದಾರರು ಸಹ ಮತದಾನ ಮಾಡಬಹುದು ಎಂದು ಅವಕಾಶ ನೀಡಿತ್ತು. ಅವರಿಗಾಗಿ ಪ್ರತ್ಯೇಕ ಮತದಾನದ ಪೆಟ್ಟಿಗೆ ಸಹ ತೆರಲಾಗಿತ್ತು. ಹಾಗೇ ಸೊಸೈಟಿಯ ಅರ್ಹತೆಯಲ್ಲಿರುವ ಮತದಾರರಿಗೂ ಇನ್ನೊಂದು ಮತದಾನದ ಪೆಟ್ಟಿಗೆ ಇಡಲಾಗಿತ್ತು. ಚುನಾವಣೆ ನಂತರ ಮತ ಎಣಿಕೆ ಎರಡು ಪೆಟ್ಟಿಗೆಯಿಂದ ಮಾಡಬೇಕು ಎಂದು ಹಲವರು ಪಟ್ಟು ಹಿಡಿದರು, ಇನ್ನೂ ಕೆಲವು ಸೊಸೈಟಿ ನೀಡಿದ ಮತದಾರರ ಪಟ್ಟಿಯ ಮತದಾನ ಮಾತ್ರ ಎಣಿಕೆ ಮಾಡಲಿ ಎಂದು ಪಟ್ಟು ಹಿಡಿದರು. ಹಾಗಾಗಿ ಎರಡು ತಂಡಗಳ ನಡುವೆ ಜಿದ್ದು ಬಿದ್ದಿದ್ದರಿಂದ ಮತ ಎಣಿಕೆ ಆಗಿರಲಿಲ್ಲ. ಅಲ್ಲದೆ ಇದನ್ನು ಪ್ರಶ್ನಿಸಿ ಬಿಜೆಪಿಯವರು ಸಹ ಅಹೋರಾತ್ರಿ ಧರಣಿ ಮಾಡಿದ್ದು ಸಹ ಉಂಟು.
ಸಹಕಾರ ಸಂಘದ ಸಾಲಗಾರ ಮೀಸಲು ಕ್ಷೇತ್ರದಿಂದ 11ಹಾಗೂ ಸಾಲಗಾರ ಅಲ್ಲದ 1 ಕ್ಷೇತ್ರದಿಂದ ಒಂದು ಒಟ್ಟು 12 ಸದಸ್ಯರಿಗೆ ಚುನಾವಣೆಯಾಗಿದ್ದು, ಸುಮಾರು 24 ಸ್ಪರ್ಧಿಗಳು ಅಖಾಡದಲ್ಲಿ ಇದ್ದು ಚುನಾವಣೆಯನ್ನು ಎದುರಿಸಿದ್ದರು.ಗುರುವಾರ ಮತ ಎಣಿಕೆ ಜರುಗಿದ್ದು, ಸಿದ್ದಯ್ಯ ಕಳ್ಳಿಮಠ(283), ಕಳಕಪ್ಪ ಕುಂಬಾರ(266), ದಸ್ತಗೀರಿಸಾಬ್ ರಾಜೂರು(262), ರಾಮಣ್ಣ ಭಜಂತ್ರಿ(252), ಶ್ರೀನಿವಾಸರಾವ ದೇಸಾಯಿ(248), ಗುದ್ನೇಪ್ಪ ಚಲವಾದಿ(267), ಭರಮಪ್ಪ ತಳವಾರ(287), ಬಸವರಾಜ ನೋಟಗಾರ(271), ಮಲ್ಲಿಕಾರ್ಜುನ ಹಾದಿಯವರು(265), ಶಂಶಾದಾಬೇಗಂ ಕಟ್ಟಿಮನಿ(241), ರತ್ನಮ್ಮ ಸಂಗಪ್ಪ ಗದಗ(291), ಬಸಪ್ಪ ಈಬೇರಿ(37) ಜಯಗಳಿಸಿದ್ದಾರೆ.