ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ವಿರುದ್ಧವಾಗಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಬೃಹತ್ ಪ್ರತಿಭಟನೆ, ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯಲ್ಲಿ ಬಂಜಾರರು ಬಾದಿ ಹುಲ್ಲು ಮಾರಾಟ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಕಾಲದಲ್ಲಿ ಹೊಟ್ಟೆಪಾಡಿಗಾಗಿ ದಟ್ಟ ಅಡವಿಗಳು ಮತ್ತು ಬೆಟ್ಟಗುಡ್ಡಗಳಲ್ಲಿ ನೈಸರ್ಗಿಕವಾಗಿ ದೊರೆಯುತ್ತಿದ್ದ ಹತ್ತಿ ಹಣ್ಣು, ಕವಳೆ ಹಣ್ಣು ಹಾಗೂ ಬಾದಿ ಹುಲ್ಲು ಮುಂತಾದವುಗಳನ್ನು ಮಾರಾಟ ಮಾಡುತ್ತಿದ್ದ ಬಂಜಾರರು, ಇದೇ ಪದ್ಧತಿಯನ್ನು ರೂಪಕವಾಗಿ ಪುನರಾವರ್ತಿಸಿ, ಬಾದಿ ಹುಲ್ಲು ಮಾರಾಟದ ಮೂಲಕ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ನೀತಿಯನ್ನು ತೀವ್ರವಾಗಿ ವಿರೋಧಿಸಿದರು.ಧರಣಿ ಸತ್ಯಾಗ್ರಹದಲ್ಲಿ ಜಿಲ್ಲೆಯ ವಿವಿಧ ತಾಂಡಾಗಳ ಸಾವಿರಾರು ಜನರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನವನ್ನು ವ್ಯಕ್ತಪಡಿಸಿದರು.ಜಿಲ್ಲೆಯ 72 ತಾಂಡಾಗಳ ಪೈಕಿ ಅವರ ವೇಳಾಪಟ್ಟಿಯಂತೆ ಗದಗ ತಾಲೂಕಿನ ಪಾಪನಾಶಿ ತಾಂಡಾ, ಮುಂಡರಗಿ ತಾಲೂಕಿನ ಕಕ್ಕೂರ ತಾಂಡಾ, ಶಿರಹಟ್ಟಿ ತಾಲೂಕಿನ ವರವಿ ತಾಂಡಾ, ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಮತ್ತು ಮುನಿಯನ್ ತಾಂಡಾ, ಗಜೇಂದ್ರಗಡ ತಾಲೂಕಿನ ಭೈರಾಪುರ ತಾಂಡಾ ಹಾಗೂ ನರಗುಂದ ತಾಲೂಕಿನ ಹಾಲಭಾವಿ ತಾಂಡಾಗಳ ಸಾವಿರಾರು ಬಂಜಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ರವಿಕಾಂತ್ ಅಂಗಡಿ, ಸುರೇಶ್ ಮಹಾರಾಜ್, ಕೆ.ಸಿ. ನಬಾಪುರ, ಚಂದು ನಾಯಕ್, ಟಿ.ಡಿ. ಪೂಜಾರ, ಐ.ಎಸ್. ಪೂಜಾರ, ಧನುರಾಮ್ ತಂಬೂರಿ, ಗಣೇಶ್ ಕಟ್ಟಿಮನಿ, ಕೃಷ್ಣ ಲಮಾಣಿ, ಭೋಜಪ ಲಮಾಣಿ, ರಾಮಪ್ಪ ನಾಯಕ್, ರಮೇಶ ಕಾರಭಾರಿ, ನಾರಾಯಣ ಪೂಜಾರ, ವಸಂತ ನಾಯಕ್, ರಾಜಣ್ಣ ಕಾರಭಾರಿ, ಹನುಮಪ್ಪ ಡಾವ, ತಾವರಪ್ಪ ಲಮಾಣಿ, ಪರಮೇಶ ಲಮಾಣಿ, ಶಂಕರ್ ಕಾರಭಾರಿ ಸೇರಿದಂತೆ ಇತರರು ಇದ್ದರು.