ಶಿವಾನಂದ ಗೊಂಬಿ
ಹುಬ್ಬಳ್ಳಿ: ರಾಜ್ಯದ 2ನೆಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಪೌರಕಾರ್ಮಿಕರು, ಡಿ ಗ್ರೂಪ್ ನೌಕರರು ಸಂಬಳ ನೀಡಿ ಪುಣ್ಯಕಟ್ಕೊಳ್ಳಿ ಎಂದು ಗೋಗರೆಯುತ್ತಿದ್ದರೆ, ಗಣತಿ ಕಾರ್ಯ ಮುಗಿಯುವವರೆಗೂ ಸಾಧ್ಯವೇ ಇಲ್ಲ ಎಂದು ಹೇಳುತ್ತಿದೆ ಅಧಿಕಾರಿ ವರ್ಗ!ಪಾಲಿಕೆಯಲ್ಲಿ ಪೌರಕಾರ್ಮಿಕರು, ಒಂದಿಬ್ಬರು ಅಂಗವಿಕಲ ಸಿಬ್ಬಂದಿ, ಗ್ರೂಪ್ ಡಿ ನೌಕರರ ವರ್ಗ ಅವರನ್ನು ಬಿಟ್ಟು ಉಳಿದ ಎಲ್ಲ ನೌಕರ, ಅಧಿಕಾರಿ ವರ್ಗವೆಲ್ಲ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ನಿರತರಾಗಿದ್ದಾರೆ. ತಮ್ಮ ಕೆಲಸಗಳಿಗಾಗಿ ಸಾರ್ವಜನಿಕರು ಕಚೇರಿಗೆ ಅಲೆಯುವುದೂ ತಪ್ಪುತ್ತಿಲ್ಲ.
ಎಷ್ಟು ಸಿಬ್ಬಂದಿ?: ಹಾಗೆ ನೋಡಿದರೆ ಪಾಲಿಕೆಯಲ್ಲಿ 3794 ಸಿಬ್ಬಂದಿ ಇರಬೇಕು. ಬರೋಬ್ಬರಿ 2723 ಹುದ್ದೆಗಳು ಖಾಲಿಯೇ ಇವೆ. ಬರೀ 1071 ಸಿಬ್ಬಂದಿಯೇ ಎಲ್ಲ ಕೆಲಸವನ್ನೂ ನಿಭಾಯಿಸುತ್ತಾರೆ. ಒಬ್ಬೊಬ್ಬರು ಮೂರು ಜನರ ಕೆಲಸ ಮಾಡುತ್ತಾರೆ. ಇದೀಗ ಈ 1071 ಹುದ್ದೆಗಳ ಪೈಕಿ 402 ಜನ ಸಿಬ್ಬಂದಿ ಗಣತಿ ಕಾರ್ಯದಲ್ಲಿ ನಿಯೋಜಿತರಾಗಿದ್ದಾರೆ. ಇದರಲ್ಲಿ 75 ಜನ ಗ್ರೂಪ್ ಎ ಹಾಗೂ ಬಿ ವರ್ಗ ಅಧಿಕಾರಿ ವರ್ಗವಾದರೆ, 327 ಜನ ಸಿ ಗ್ರೂಪ್ ಸಿಬ್ಬಂದಿ.ಸದ್ಯ ಪಾಲಿಕೆಯಲ್ಲಿ 669 ಜನ ಮಾತ್ರ ಪಾಲಿಕೆ ಕೆಲಸದಲ್ಲಿ ನಿರತರಾಗಿದ್ದಾರೆ. ಇದರಲ್ಲಿ 478 ಜನ ಪೌರಕಾರ್ಮಿಕರು, 50 ಜನ ಅಟೆಂಡರ್, 14 ಜನ ವಾಲ್ವ್‌ಮನ್, 17 ಜನ ಲೋಡರ್, ವಿಕಲಚೇತನ ಇಬ್ಬರು ಹೀಗೆ ಎಲ್ಲರೂ ಗ್ರೂಪ್ ಡಿ ನೌಕರರು ಮಾತ್ರ ಇದ್ದಾರೆ. ಉಳಿದಂತೆ ಎಲ್ಲ ಸಿಬ್ಬಂದಿ ಗಣತಿ ಕಾರ್ಯದಲ್ಲಿ ನಿಯೋಜನೆಗೊಂಡಿರುವುದರಿಂದ ಪಾಲಿಕೆ ಮುಖ್ಯ ಕಚೇರಿ, 12 ವಲಯ, ಧಾರವಾಡ ಸೇರಿದಂತೆ ಎಲ್ಲ ಕಚೇರಿಗಳು ಸಿಬ್ಬಂದಿ ಇಲ್ಲದೇ ಖಾಲಿ ಖಾಲಿಯಾಗಿವೆ.
ಸಂಪೂರ್ಣ ಸ್ಥಗಿತ: ಎಲ್ಲರೂ ಗಣತಿ ಕಾರ್ಯದಲ್ಲೇ ನಿರತರಾಗಿರುವುದರಿಂದ ಸಾರ್ವಜನಿಕ ಕೆಲಸಗಳೂ ಆಗುತ್ತಿಲ್ಲ. ಸಿಬ್ಬಂದಿಯ ಸಂಬಳ ಮಾಡಲು ಅಕೌಂಟ್ ಡಿಪಾರ್ಟ್‌ಮೆಂಟ್‌ನಲ್ಲಿ ಒಬ್ಬರೂ ಇಲ್ಲ. ಹೀಗಾಗಿ 10ನೆಯ ತಾರೀಕು ಆದರೂ ಯಾವ ಸಿಬ್ಬಂದಿಗೂ ಸಂಬಳ ಕೊಟ್ಟಿಲ್ಲ. ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆಯುವ ಸಾರ್ವಜನಿಕರಿಗೆ ಖಾಲಿ ಕುರ್ಚಿಗಳೇ ಸ್ವಾಗತ ಕೋರುತ್ತಿವೆ. ಅಲ್ಲಿರುವ ಅಟೆಂಡರ್, ವಾಚ್‌ಮನ್‌ಗಳು ಗಣತಿ ಕೆಲಸ ಮುಗಿದ ಮೇಲೆ ಬನ್ನಿ. ಅಲ್ಲಿಯವರೆಗೂ ನಿಮ್ಮ ಕೆಲಸ ಆಗಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಪಾಲಿಕೆಯ ಎಲ್ಲ ಕೆಲಸಗಳು ಪೆಂಡಿಂಗ್ ಉಳಿಯುತ್ತವೆ. ಗಣತಿ ಕೆಲಸ ಇನ್ನು 8-10 ದಿನ (ಅ.18) ನಡೆಯಲಿದೆ. ಅಲ್ಲಿವರೆಗೂ ಪಾಲಿಕೆಯಲ್ಲಿ ಕೆಲಸಗಳು ಆಗುವುದಿಲ್ಲ ಎಂದರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರದ್ದು.ಸರ್ಕಾರ ಗಣತಿ ಕೆಲಸ ಮಾಡಿಕೊಳ್ಳಲಿ. ಆದರೆ ಇದ್ದ ಬದ್ದ ಸಿಬ್ಬಂದಿಯನ್ನೆಲ್ಲ ಅದೇ ಕೆಲಸಕ್ಕೆ ನಿಯೋಜಿಸಿದರೆ ನಮ್ಮ ಕಷ್ಟ ಕೇಳುವವರು ಯಾರು ಎಂಬ ಸಾರ್ವಜನಿಕರ ಪ್ರಶ್ನೆಗೆ ಅಧಿಕಾರಿ ವರ್ಗದ ಬಳಿ ಉತ್ತರವಿಲ್ಲ. ಏನೇ ಆಗಲಿ, ಪಾಲಿಕೆ ಆಡಳಿತವಂತೂ ಸಂಪೂರ್ಣ ಸ್ಥಗಿತಗೊಂಡಿರುವುದಂತೂ ಸತ್ಯ.
ತರಾತುರಿ ಏನಿತ್ತು?: ಪಾಲಿಕೆಯಲ್ಲಿ ಯಾವುದೇ ಕೆಲಸಕ್ಕೆ ಹೋದರೂ ಗಣತಿ ಕೆಲಸಕ್ಕೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಸರ್ಕಾರಿ ಕೆಲಸ ಸ್ಥಗಿತಗೊಳಿಸಿ, ಸಾರ್ವಜನಿಕರಿಗೆ ತೊಂದರೆ ಕೊಟ್ಟು ಮಾಡುವ ಅಗತ್ಯವಾದರೂ ಏನು? ಗಣತಿ ಕಾರ್ಯಕ್ಕೆ ಇಷ್ಟೊಂದು ತರಾತುರಿ ಏಕೆ? ಅರ್ಧ ಸಿಬ್ಬಂದಿ ಬಳಸಿ; ಎರಡ್ಮೂರು ತಿಂಗಳು ಸಮಯ ನೀಡಿ ಮಾಡಿಸಿದ್ದರೆ ಸಮಸ್ಯೆ ಏನಾಗುತ್ತಿತ್ತು? ಎಂದು ಸ್ಥಳೀಯ ನಿವಾಸಿ ಬಸವರಾಜ ಮೆಣಸಗಿ ಕೇಳಿದರು.10ನೆಯ ತಾರೀಕಾದರೂ ನಮಗೆ ಸಂಬಳ ಬಂದಿಲ್ಲ. ಕೇಳಿದರೆ ಗಣತಿ ಮುಗಿದ ಮೇಲೆ ಕೊಡ್ತೇವೆ ಅಂತ ಹೇಳ್ತಾರೆ. ನಮ್ಮಂಥ ಬಡವ್ರೂ ಏನ್ಮಾಡಬೇಕು ಸಾರ್? ಎಂದು ಪೌರಕಾರ್ಮಿಕರಾದ ಅನಿತಾ ಈನಗೊಂಡ ಹೇಳಿದರು.