ಚಾಮರಾಜನಗರ: ಚಾಮರಾಜನಗರದಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭರ್ಜರಿ ರೋಡ್ ಶೋ ನಡೆಸಿದರು. ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಜಿಲ್ಲಾಡಳಿತ ಭವನದ ತನಕ ವಿಜಯೇಂದ್ರ ರೋಡ್ ಶೋ ಕೈಗೊಂಡರು. ಬಿಜೆಪಿ ಮುಖಂಡರಾದ ಅರವಿಂದ ಲಿಂಬಾವಳಿ, ಡಿ.ವಿ.ಸದಾನಂದಗೌಡ, ಎಸ್.ಎ.ರಾಮದಾಸ್, ಎನ್.ಮಹೇಶ್, ಜೆಡಿಎಸ್ ಮುಖಂಡರಾದ ಜಿ.ಟಿ.ದೇವೇಗೌಡ, ಎಂ.ಆರ್.ಮಂಜುನಾಥ್, ಅಶ್ವಿನ್ ಈ ವೇಳೆ ಸಾಥ್ ನೀಡಿದರು.
ಕಾಂಗ್ರೆಸ್ ಬ್ಯಾಟರಿ ಡೌನ್: ರೋಡ್ ಶೋನಲ್ಲಿ ವಿಜಯೇಂದ್ರ ಮಾತನಾಡಿ, ಬಿಜೆಪಿ- ಜೆಡಿಎಸ್ ಮೈತ್ರಿಯಾದ ಬಳಿಕ ಕಾಂಗ್ರೆಸ್ ಬ್ಯಾಟರಿ ಡೌನ್ ಆಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಗಾಬರಿಯಾಗಿ ಉಸಿರಾಡಲು ಕಷ್ಟ ಪಡುತ್ತಿದ್ದಾರೆ. ಬಾಲರಾಜು ಅವರನ್ನು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕರೆ ನೀಡಿದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ದುಡ್ಡಿನ ಅಹಂಕಾರ, ಹಣದ ಮದದಿಂದ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. 1 ಲಕ್ಷ ಅಂತರದಿಂದ ಗೆಲ್ಲಿಸಿ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡಿ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ ಆವರಿಸುತ್ತದೆ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದ ವೇಳೆ ಕೆರೆ-ಕಟ್ಟೆಗಳು ಕೋಡಿ ಬಿದ್ದು ಪ್ರವಾಹ ಸ್ಥಿತಿ ಎದುರಾಗಿತ್ತು. ಜನರು ಕಾಂಗ್ರೆಸ್ ವಿರುದ್ಧ ಶಾಪ ಹಾಕುತ್ತಿದ್ದಾರೆ. ರೈತರ ಸಮಸ್ಯೆ ಪರಿಹರಿಸುವ ಬದಲು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಜನರು ಗೆಲ್ಲಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕರುಣೆ ಇಲ್ಲವೇ, ರಾಜ್ಯದಲ್ಲಿ 800 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಲಿತರ ವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರವನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೊಡಬೇಕು ಎಂದರು.