ಹೊಸಪೇಟೆ: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಜೂ.3ಕ್ಕೆ ನಿಗದಿಯಾಗಿದ್ದು, ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಚಂದ್ರಶೇಖರ್ ಪಾಟೀಲ್ ಅವರನ್ನು ಪಕ್ಷ ಘೋಷಿಸಿದೆ. ಈ ಬಾರಿ ಅಧಿಕ ಮತದಿಂದ ಕಾಂಗ್ರೆಸ್ ಅಭ್ಯರ್ಥಿ ಜಯಶೀಲರಾಗಲಿದ್ದಾರೆ ಎಂದು ಕೆಪಿಸಿಸಿ ಶಿಕ್ಷಕರ ಮತ್ತು ಪದವೀಧರ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಬಿ. ಶ್ರೀನಿವಾಸ್ ರೆಡ್ಡಿ ಹೇಳಿದರು.
ಕಳೆದ ಬಾರಿ ಬಿಜೆಪಿಯಿಂದ ಈ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಈ ಬಾರಿ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿರುವೆ. ಹೈಕಮಾಂಡ್ ಈಗಾಗಲೇ ಚಂದ್ರಶೇಖರ್ ಪಾಟೀಲ್ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಿದೆ. ಅವರ ಗೆಲುವು ನಿರೀಕ್ಷಿಸಲಾಗಿದೆ. ಚುನಾವಣೆಯಲ್ಲಿ ನಾನು ಕೆಲಸ ಮಾಡುವೆ ಎಂದರು.
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏಳು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸವನ್ನು ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಮಾಡಲಿದ್ದಾರೆ. ಈ ಹಿಂದೆಯೂ ಅವರು ಈಶಾನ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಪಕ್ಷದ ವರಿಷ್ಠರು ಈ ಬಾರಿಯೂ ಮತದಾರರು ಅವರನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮುಖಂಡರಾದ ಎಚ್.ಎನ್. ಮೊಹ್ಮಮದ್ ಇಮಾಮ್ ನಿಯಾಜಿ, ಎನ್.ರಾಮಕೃಷ್ಣ, ವಿನಾಯಕ್ ಶೆಟ್ಟರ್, ವೀರಾಂಜನೇಯ, ವಿಜಯಕುಮಾರ್, ಜಾವೇದ್ ಮತ್ತಿತರರಿದ್ದರು.