- ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣಫೋಟೋ- 27ಎಂವೈಎಸ್10
----
ಕನ್ನಡಪ್ರಭ ವಾರ್ತೆ ಮೈಸೂರುಮತದಾರರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ ಎಂಬ ವಿಶ್ವಾಸ ಇದೆ. ಈ ಬಾರಿ ಶೇ.100 ಗೆಲುವಿನ ವಿಶ್ವಾಸ ಇದೆ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು, ಅಷ್ಟೇ ಅಲ್ಲದೆ ಜಾತಿ, ಭೇದ ಮರೆತು ಜನ ಅಭಿವೃದ್ಧಿಯ ಮುಖ ನೋಡಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆಂಬ ವಿಶ್ವಾಸವಿದೆ. ಚುನಾವಣೆಗಾಗಿ ಬಿಜೆಪಿ ಬಹಳಷ್ಟು ಕಸರತ್ತು ನಡೆಸಿತು. ಮಹಾರಾಜರ ನೆಪದಲ್ಲಿ ಜನರನ್ನು ಸೆಳೆಯುವ ಕುತಂತ್ರ ನಡೆಸಿದರು. ಮೈಸೂರಿನ ಚುನಾವಣಾ ಪ್ರಚಾರ ಸಭೆಗೆ ಬಂದಿದ್ದ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅನ್ನು ಬೈಯುವದರಲ್ಲೇ ತಮ್ಮ ಭಾಷಣದ ಹೆಚ್ಚಿನ ಸಮಯವನ್ನು ಕಳೆದರು ಎಂದು ಅವರು ಕಿಡಿಕಾರಿದರು.
ನನ್ನ ಬೆಂಬಲಿಸಿದ ಪಕ್ಷದ ಮುಖಂಡರು, ತೆರೆಮರೆಯಲ್ಲಿ ದುಡಿದ ಕಾರ್ಯಕರ್ತರನ್ನು ಸ್ಮರಿಸುತ್ತೇನೆ. ಅಹಿತಕರ ಘಟನೆ ನಡೆಯದಂತೆ ಚುನಾವಣೆ ನಡೆಸಿದ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಸಿಬ್ಬಂದಿ, ಭದ್ರತೆ ಒದಗಿಸಿದ ಪೊಲೀಸರಿಗೂ ಧನ್ಯವಾದವನ್ನು ಅವರು ತಿಳಿಸಿದರು.
ಸಂಸದನಾಗಿ ಆಯ್ಕೆಯಾದ ಬಳಿಕ ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ಕಚೇರಿ ತೆರೆಯುತ್ತೇನೆ. ಸ್ಥಳೀಯ ಶಾಸಕರೊಂದಿಗೆ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡಲು ಬದ್ಧನಾಗಿದ್ದೇನೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದ್ದು, ಕರ್ನಾಟಕಕ್ಕೆ ದೊರಕಬೇಕಾದ ತೆರಿಗೆ ಹಣವನ್ನು ತೆಗೆದುಕೊಂಡು ಬರುತ್ತೇವೆ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಎಂ. ಶಿವಣ್ಣ, ಎನ್.ಆರ್. ನಾಗೇಶ್, ಕೆ. ಮಹೇಶ್, ಗಿರೀಶ್ ಇದ್ದರು.
ಗೆದ್ದ ಮೇಲೆ ಪ್ರತಾಪ್ ಸಿಂಹ ಭೇಟಿ
ನಾನು ಗೆದ್ದ ಮೇಲೆ ಪ್ರತಾಪ್ ಸಿಂಹ ಮನೆಗೆ ಹೋಗ್ತೀನಿ. ಹಾರ ಹಾಕಿ ಸುಳ್ಳು ಹೇಳೋದು ಹೇಗೆ ಅಂತಾ ಸಲಹೆ ಕೇಳ್ತೀನಿ. ಪ್ರತಾಪ್ ಸಿಂಹ ಎಲ್ಲಿಯೂ ಕಾಣ್ತಾ ಇಲ್ಲ. ಚುನಾವಣೆ ಸಂದರ್ಭದಲ್ಲಿ ಒಮ್ಮೆ ಬೆಂಗಳೂರಲ್ಲಿ ಪ್ರತಾಪ್ ಸಿಂಹ ನಾನು ಭೇಟಿಯಾಗಿದ್ದೇವು. ಇಬ್ಬರೂ ಕಾಫಿ ಕುಡಿದಿದ್ದೇವು. ಏಕೆ ನಿಮಗೆ ಟಿಕೆಟ್ ಮಿಸ್ ಆಯ್ತು ಅಂತಾ ನಾನೇ ಕೇಳ್ದೆ. ಅವರು ಆಮೇಲೆ ಹೇಳ್ತೀನಿ ಬಿಡಿ ಅಂತಾ ಹೇಳಿದರು ಎಂದರು.