ಕನ್ನಡಪ್ರಭ ವಾರ್ತೆ ಮಡಿಕೇರಿದೇಶದ ಸಂಸತ್ತಿನೊಳಗೆ ಕಿಡಿಗೇಡಿಗಳು ನಡೆಸಿದ ಹೊಗೆ ಬಾಂಬ್ ದಾಳಿ ಇಡೀ ದೇಶವನ್ನೇ ಆತಂಕಕ್ಕೀಡುಮಾಡಿದ್ದು, ಈ ಭದ್ರತಾ ಲೋಪ ಹೆಚ್ಚು ಆಘಾತಕಾರಿ ಘಟನೆಯಾಗಿದೆ ಎಂದು ಹೇಳಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ.ಎ. ಹನೀಫ್, ದಾಳಿ ನಡೆಸಿದ ಯುವಕರಿಗೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿರುವುದು ಅತ್ಯಂತ ಕಳವಳಕಾರಿ ವಿಚಾರವಾಗಿದೆ. ಆದ್ದರಿಂದ ಈ ಘಟನೆಯ ನೈತಿಕ ಹೊಣೆ ಹೊತ್ತು ಪ್ರತಾಪ್ ಸಿಂಹ ಅವರು ಇನ್ನಾದರೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಸತ್ತಿಗೆ ರಕ್ಷಣೆ ನೀಡಲಾಗದವರು, ಬಿಜೆಪಿಯ ನಡೆಯನ್ನು ಪ್ರಶ್ನಿಸಿದ ಸಂಸದರನ್ನು ಅಮಾನತುಗೊಳಿಸಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಮೂಲಕ ಪೌರುಷ ಮೆರೆಯುತ್ತಿದ್ದಾರೆ. ಕರ್ತವ್ಯ ಲೋಪದ ನೆಪದಲ್ಲಿ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡುತ್ತಿದ್ದಾರೆ. ಆದರೆ ಈ ಭದ್ರತಾ ವೈಫಲ್ಯಕ್ಕೆ ಮೂಲ ಕಾರಣರಾಗಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಇದುವರೆಗೂ ಏಕೆ ಕ್ರಮ ಜರುಗಿಸಿಲ್ಲ. ಪಾಸ್ ನೀಡಿದ್ದರಿಂದಲೇ ಈ ಎಲ್ಲ ಅನಾಹುತಗಳಿಗೆ ಅವರೇ ಕಾರಣವಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಜೋಕಿಂ ರಾಡ್ರಿಗಸ್, ಅಲ್ಪಸಂಖ್ಯಾತ ಘಟಕದ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಳುಮಂಡ ರಫೀಕ್ ಮತ್ತು ವಿರಾಜಪೇಟೆ ನಗರ ಅಧ್ಯಕ್ಷ ಆಶೀಫ್ ಉಪಸ್ಥಿತರಿದ್ದರು.