ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಪುರಭವನ ಆವರಣದಲ್ಲಿ ಬಿಜೆಪಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ- ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರದಲ್ಲಿ ನಮ್ಮ ಬಿಜೆಪಿ ಸರ್ಕಾರ ಮೂರು ಬಾರಿ ಅಧಿಕಾರಕ್ಕೆ ಬಂದಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ದೊಡ್ಡ ಶಕ್ತಿಯಾಗಿ ಪರಿವರ್ತನೆ ಹೊಂದಿದೆ. ಇದನ್ನು ಸಹಿಸಿಕೊಳ್ಳಲು ರಾಹುಲ್ ಗಾಂಧಿ ಅವರಿಗೆ ಆಗುತ್ತಿಲ್ಲ ಎಂದು ದೂರಿದರು.
ರಾಹುಲ್ ಗಾಂಧಿಯವರು ಅನಿವಾಸಿ ವಿರೋಧ ಪಕ್ಷದ ನಾಯಕ. ಏನಾದರೂ ಹೋರಾಟವಿದ್ದರೆ ಭಾರತದಲ್ಲಿ ಇರುತ್ತಾರೆ, ಕಲಾಪವಿದ್ದಾಗ ಬರುತ್ತಾರೆ, ಮತ್ತೆ ಎಲ್ಲಿಗೋ ಹೋಗುತ್ತಾರೆ. ಇವರ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಎನ್.ಡಿ.ಎ ಸರ್ಕಾರವನ್ನು ಹೇಗಾದರೂ ಮಾಡಿ ಕೆಳಗಿಳಿಸಲು ಇವರ ಸಂಚು, ಷಡ್ಯಂತ್ರ ನಡೆಸುತ್ತಿರುವುದಾಗಿ ಅವರು ಆರೋಪಿಸಿದರು.4ನೇ ಬಾರಿಗೆ ಮೋದಿಯವರು ಪ್ರಧಾನಿ ಆಗುವ ಆತಂಕ ಕಾಂಗ್ರೆಸ್ಸಿನವರದು. ಇದಕ್ಕಾಗಿ ದೆಹಲಿ ಮತ್ತಿತರ ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಅರಾಜಕತೆ ಸೃಷ್ಟಿಗೆ ಮುಂದಾಗಿದ್ದಾರೆ. ದೇಶದಲ್ಲಿ ಗೊಂದಲ ನಿರ್ಮಿಸಿ, ಯುವಜನರನ್ನು ಬೀದಿಗೆ ತಂದು ಕೇಂದ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಜಾರ್ಖಂಡ್ ಸಚಿವ ಅನ್ಸಾರಿ ಹೇಳಿಕೆಯನ್ನು ಗಮನಿಸಿ, ರಾಹುಲ್ ಗಾಂಧಿ ಮನಸ್ಸು ಮಾಡಿದರೆ 40 ಲಕ್ಷ ಜನರು ಬೀದಿಗಿಳಿದು ದೇಶಕ್ಕೆ ಬೆಂಕಿ ಹಚ್ಚುತ್ತಾರೆ ಎಂದಿದ್ದಾರೆ. ಇಂಥ ಅರಾಜಕತೆಯ ಕನಸು ಕಾಣುವವರ ವಿರುದ್ಧ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಗಣಪತಿ ಹಬ್ಬ ಆಚರಿಸಲೂ ಕರ್ನಾಟಕದಲ್ಲಿ ಆಗುತ್ತಿಲ್ಲ. ದೀಪಾವಳಿ, ದಸರಾ ಆಚರಣೆ ಸಂದರ್ಭದಲ್ಲಿ ಹಾಲು, ಮೊಸರಿನ ದರ ತೀವ್ರವಾಗಿ ಹೆಚ್ಚಿಸಿದ್ದಾರೆ. ಈಗ ಸಾಲದು ಎಂಬಂತೆ ಬಸ್ ಪ್ರಯಾಣ ದರ ಹೆಚ್ಚಿಸಿದ್ದಾರೆ. ಇದು ಬಡವರ ವಿರೋಧಿ, ಜನವಿರೋಧಿ ಸರ್ಕಾರ. ಇದನ್ನು ಮನೆಗೆ ಕಳುಹಿಸಲು ನಾವೆಲ್ಲರೂ ಸಿದ್ಧರಾಗಬೇಕು. ರೈತ ವಿರೋಧಿ, ಯುವಜನರ ವಿರೋಧಿ, ಹಿಂದೂ ವಿರೋಧಿ ಸರ್ಕಾರವನ್ನು ಕಿತ್ತು ಹಾಕಲು ಮುಂದಾಗೋಣ ಎಂದು ಮನವಿ ಮಾಡಿದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಚಿವ ಸಿ.ಟಿ. ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ವಿಧಾನ ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಕೌಟಿಲ್ಯ ರಘು, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಸುಬ್ಬಣ್ಣ, ಮಾಜಿ ಮೇಯರ್ ಗಳಾದ ಸಂದೇಶ್‌ಸ್ವಾಮಿ, ಶಿವಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ತೋಂಟದಾರ್ಯ, ಗೋ. ಮಧುಸೂದನ್, ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಸೇರಿದಂತೆ ಹಾಸನ, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.