ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರ ಸ್ಥಾನ ರದ್ದು ।
ನಾಲ್ಕೂವರೆ ವರ್ಷಗಳ ಸುದೀರ್ಘ ಅವಧಿಯ ಕಾನೂನು ಹೋರಾಟದ ಬಳಿಕ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವುದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಈವರೆಗೆ ವಿಧಾನಪರಿಷತ್ ಸದಸ್ಯರಾಗಿದ್ದ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರ ಸ್ಥಾನ ರದ್ದಾಗಿದೆ.2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರ ವಿರುದ್ಧ ಕೇವಲ ಆರು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ವೇಳೆ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಮತ ದಾನ ಮಾಡುವ ಹಕ್ಕಿಲ್ಲ ಎಂದು ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅಂದಿನಿಂದನೂ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ಮುಂದಿವರಿದಿತ್ತು. ಅಂತಿಮವಾಗಿ ಶುಕ್ರವಾರ 2021ರ ಚುನಾವಣೆಯ ಮತಗಳ ಮರು ಎಣಿಕೆ ನಡೆಸಿದ್ದು, 9 ಮತದಿಂದ ಕಾಂಗ್ರೆಸ್‌ನ ಗಾಯತ್ರಿ ಶಾಂತೇ ಗೌಡ ಗೆಲುವು ಸಾಧಿಸಿದ್ದಾರೆ ಎಂದು ಆದೇಶಿಸಿದೆ. ಹೀಗಾಗಿ ಗಾಯತ್ರಿ ಶಾಂತೇಗೌಡ ಅವರು ಮುಂದಿನ ಒಂದೂವರೆ ವರ್ಷದ ಅವಧಿಗೆ ನೂತನ ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ಚಲಾಯಿಸಲಿದ್ದಾರೆ.
2021ರ ಡಿಸೆಂಬರ್ 10ರಂದು ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು ಮತದಾನ ಮಾಡಿದ್ದರು. ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಲ್ಲದೆ ಪುರಸಭೆ, ಪಟ್ಟಣಪಂಚಾಯಿತಿಯ 12 ಮಂದಿ ನಾಮನಿರ್ದೇಶನ ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು.
ಇದರಿಂದ ಮರು ಮತ ಎಣಿಕೆಗೆ ಗಾಯಿತ್ರಿ ಶಾಂತೇಗೌಡ ಮನವಿ ಸಲ್ಲಿಸಿದ್ದರು. ಆದರೆ ಆಗ ಜಿಲ್ಲಾ ಚುನಾವಣಾಧಿ ಕಾರಿಯಾಗಿದ್ದ ಕೆ.ಎನ್.ರಮೇಶ್ ಚುನಾವಣಾ ಆಯೋಗದ ಸೂಚನೆ ಮೇರೆಗೆ ಫಲಿತಾಂಶ ಪ್ರಕಟಿಸಿದ್ದರು. ಇದರಿಂದ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಕ ಸದಸ್ಯರಿಗೆ ಮತದಾನ ಮಾಡುವ ಅವಕಾಶವಿಲ್ಲ ಎಂದು ಗಾಯತ್ರಿಶಾಂತೇಗೌಡ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕೊನೆಗೂ ಸತ್ಯವೇ ಗೆದ್ದಿದೆ
- ಗಾಯತ್ರಿ ಶಾಂತೇಗೌಡ, ವಿಧಾನ ಪರಿಷತ್ ನೂತನ ಸದಸ್ಯೆಫೋಟೋ: