ನುಗ್ಗೇಹಳ್ಳಿ: ದಿಡಗ ಭಾಗದ ಹತ್ತಾರು ವರ್ಷಗಳ ಕನಸಾಗಿದ್ದ ಏತ ನೀರಾವರಿ ಯೋಜನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ 74 ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ರೈತರ ಕನಸನ್ನು ನನಸು ಮಾಡಿದೆ ಎಂದು ವಿಧಾನ ಪರಿಷತ್ ಮಾಜಿ ಶಾಸಕ ಎಂ ಎ ಗೋಪಾಲಸ್ವಾಮಿ ಹೇಳಿದರು.ಹೋಬಳಿಯ ಸಮೀಪದ ಕೆ ವಡ್ಡರಹಳ್ಳಿ ನೂತನ ಸಮುದಾಯ ಭವನ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದಿಡಗ ಭಾಗದ ರೈತರು ದಿಡಗ ಮತ್ತು ದಿಡಗ ತುಮಕೂರು ಗ್ರಾಮದ ಕೆರೆ ತುಂಬಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರು. ತಾವು ಈ ಬಗ್ಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ಈ ಭಾಗದ ರೈತರೊಂದಿಗೆ ತೆರಳಿ ಮನವಿ ಮಾಡಲಾಗಿತ್ತು. ಇದಕ್ಕೆ ಸರ್ಕಾರ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿ ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.ಅನೇಕ ವರ್ಷಗಳಿಂದ ಈ ಭಾಗದಲ್ಲಿ ಕೆರೆಗಳು ತುಂಬದೇ ರೈತರು ಸಮಸ್ಯೆ ಎದುರಿಸುತ್ತಿದ್ದರು. ಈ ಭಾಗದ ಜನ, ಜಾನುವಾರುಗಳಿಗೆ ಕೂಡ ಕುಡಿಯುವ ನೀರಿಗೂ ಸಮಸ್ಯೆಯಾಗಿತ್ತು. ನಾಗಮಂಗಲ ಭಾಗದ ಹೇಮಾವತಿ ನಾಲೆಯಿಂದ ಏತ ನೀರಾವರಿ ಯೋಜನೆ ಮೂಲಕ ಈ ಭಾಗದ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ ಎಂದರು. ಕೆ ವಡ್ಡರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಮುದಾಯ ಭವನಕ್ಕೆ ನಾನು ಸುಮಾರು 7 ಲಕ್ಷ ಹಣ ನೀಡಿದ್ದೇನೆ. ನನ್ನ ವಿಧಾನಪರಿಷತ್ ಸದಸ್ಯರ ಅವಧಿಯಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ನೀರಾವರಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಶ್ರಮ ವಹಿಸಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ವಡ್ಡರಹಳ್ಳಿ ಮೋಹನ್, ನಟೇಶ್, ಪ್ರಮೋದ್, ರಮೇಶ್, ವಿಎನ್ ಬೋರೇಗೌಡ, ವಿ. ಎಚ್ ಹನುಮಂತೇಗೌಡ, ಸೇರಿದಂತೆ ಇತರರು ಹಾಜರಿದ್ದರು.