ಕನ್ನಡಪ್ರಭ ವಾರ್ತೆ ತಿಪಟೂರು
ಯುವಕರಿಗೆ ಉದ್ಯೋಗ ಸೃಷ್ಠಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ರಾಜ್ಯದಲ್ಲಿ ಉದ್ಯೋಗ ಸೃಷ್ಠಿಯಾಗದೇ ಹೊಸ ಪೀಳಿಗೆಯ ಯುವಕರು ಉದ್ಯೋಗಕ್ಕಾಗಿ ಹೋರಾಟ ಪ್ರಾರಂಭಿಸಿದ್ದಾರೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ದೂರಿದರು.ನಗರದ ತಮ್ಮ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಉದ್ಯೋಗ ಸೃಷ್ಠಿಸುವ ಯಾವುದೇ ಕೆಲಸವನ್ನು ಮಾಡುತ್ತಿಲ್ಲ. ಕೈಗಾರಿಕೆಗಳು ಸ್ಥಾಪನೆಯಾಗುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ದೊಡ್ಡ-ದೊಡ್ಡ ಕಂಪನಿಗಳು ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಸೂಕ್ತ ಸವಲತ್ತುಗಳಿಲ್ಲದೆ ಬೇರೆ ರಾಜ್ಯಗಳತ್ತ ಮುಖ ಮಾಡುತ್ತಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸದೇ ಅಧಿಕಾರಕ್ಕಾಗಿ ಕಚ್ಚಾಡುತ್ತಿದೆ. ರಾಜ್ಯ ಸರ್ಕಾರ ಯುವಕರ ಉದ್ಯೋಗಕ್ಕೆ ಯಾವುದೇ ಮಾನ್ಯತೆ ನೀಡದಿರುವುದು ಒಂದೇಡೆಯಾದರೆ. ತಾಲೂಕಿನಲ್ಲಿಯೂ ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗದೇ ಯುವಕರೆಲ್ಲರೂ ಕಡಿಮೆ ಸಂಬಳದ ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಎಲ್ಲ ಹಳ್ಳಿಗಳಲ್ಲೂ ನೂರಾರು ಯುವಕರು ಉತ್ತಮ ವಿದ್ಯಾಭ್ಯಾಸ ಮಾಡಿಕೊಂಡು ಕೆಲಸ ಸಿಗದೆ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಕೈಗಾರಿಕೆಗೆ ಮೀಸಲಿಟ್ಟಿರುವ ನೂರಾರು ಎಕರೆ ಜಾಗ ಶಾಸಕರ ನಿರ್ಲಕ್ಷದಿಂದ ನೆನೆಗುದಿಗೆ ಬಿದ್ದಿದೆ ಎಂದು ಆಪಾದಿಸಿದರು. ಕೈಗಾರಿಗೆಗಳ ಸ್ಥಾಪನೆಗಾಗಿ ತಾಲೂಕಿನಲ್ಲಿ ಕೆಐಡಿಬಿ ವತಿಯಿಂದ ೨೧೯ಎಕರೆ ಭೂಮಿ ೮ ವರ್ಷ ಮುಂಚೆಯೇ ನೋಟಿಫಿಕೇಷನ್ ಆಗಿದ್ದರೂ ಮುಂದಿನ ಹಂತದ ನೋಟಿಫಿಕೇಷನ್ ಮಾಡದೇ, ರೈತರಿಗೆ ಕೊಡಬೇಕಾಗಿರುವ ಪರಿಹಾರವನ್ನೂ ಅಂದಾಜು ಮಾಡದೇ, ಮುಂದಿನ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಕೈಗಾರಿಕೆಗಳು ಸ್ಥಾಪನೆಯಾಗದೇ ಒಂದಷ್ಟು ಉದ್ಯೋಗ ಸೃಷ್ಠಿಗೂ ಕಲ್ಲು ಬಿದ್ದಿದೆ. ತಿಪಟೂರು ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದರೆ ಕೇಂದ್ರ ಕೈಗಾರಿಕಾ ಸಚಿವ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮನವೊಲಿಸಿ ಒಂದಷ್ಟು ದೊಡ್ಡ ಕೈಗಾರಿಕೆಗಳ ಸ್ಥಾಪಿಸಲು ಅವಕಾಶವಿತ್ತು. ತಾಲೂಕು ಆಡಳಿತ ಕೈಗಾರಿಕೆ ಸ್ಥಾಪನೆ, ಉದ್ಯೋಗ ಸೃಷ್ಠಿಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಕೆ.ಟಿ.ಶಾಂತಕುಮಾರ್ ದೂರಿದರು.ಜೆಡಿಎಸ್ ಕಾರ್ಯಾಧ್ಯಕ್ಷ ಶಿವಸ್ವಾಮಿ ಮಾತನಾಡಿ ಸರ್ಕಾರದಿಂದ ರೈತರಿಗೆ ಬರಬೇಕಿರುವ ಹಾಲಿನ ಸಬ್ಸಿಡಿ ಹಣ ಆರು ತಿಂಗಳಿಂದ ಬಂದಿಲ್ಲ. ಪ್ರತಿ ಮನೆಯ ರೈತರಿಗೂ ಸುಮಾರು ೨೫ಸಾವಿರ ರು.ಗಳಷ್ಠು ಸಬ್ಸಿಡಿ ಹಣ ಬರಬೇಕಾಗಿದ್ದು ಮನೆಯ ಯಜಮಾನಿಗೆ ಮಾತ್ರ ೨ಸಾವಿರ ಗ್ಯಾರೆಂಟಿ ಹಣ ಹಾಕಿ ಸುಮ್ಮನಿದೆ. ಗ್ಯಾರೆಂಟಿ ಯೋಜನೆಗಳ ಈಡೇರಿಕೆಗೆ ರೈತರ ಹಣವೇ ಬೇಕಾಯಿತಾ? ೨೫ಸಾವಿರ ಬಾಕಿ ಉಳಿಸಿಕೊಂಡು ೨ಸಾವಿರ ಹಣ ಹಾಕಿದರೆ ಸಾಕಾ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಅಧ್ಯಕ್ಷ ನಟರಾಜು ಮೇಲಾಪುರ, ಸಂಘಟನಾ ಕಾರ್ಯದರ್ಶಿ ನಟರಾಜು, ಮುಖಂಡರಾದ ರಾಜಶೇಖರ್, ಸುದರ್ಶನ್, ನಾಗರಾಜು, ನಂಜುಂಡಪ್ಪ, ಸಂತೋಷ್ ಇನ್ನಿತರರು ಉಪಸ್ಥಿತರಿದ್ದರು.