ಬಳ್ಳಾರಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಬಸವಾದಿ ಶರಣರ ತತ್ವಗಳನ್ನು ಪಾಲಿಸಿಕೊಂಡು ನಡೆಯುತ್ತಿದೆ. ಶೋಷಿತ ವರ್ಗಗಳ ಧ್ವನಿಯಾಗಿ, ಅಸಮಾನತೆ ಹೋಗಲಾಡಿಸಲು ಮತ್ತು ಮಹಿಳೆಯರನ್ನು ಪ್ರೋತ್ಸಾಹಿಸಲು, ಅವರ ಸಬಲಿಕರಣಕ್ಕಾಗಿಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ತಿಳಿಸಿದರು.
12ನೇ ಶತಮಾನದಲ್ಲಿ ಜಾತೀಯತೆ, ಅಸಮಾನತೆ, ಸ್ವಜನಪಕ್ಷ ಪಾತಗಳು ತಾಂಡವವಾಡುತ್ತಿದ್ದವು. ವಚನ ಚಳುವಳಿಯ ಸಂದರ್ಭದಲ್ಲಿ ಕಾಯಕದ ಮಹತ್ವವನ್ನು ಸಾರಿದ ಶರಣರ ತ್ಯಾಗ ಮತ್ತು ಸೇವೆಯನ್ನು ನಾವೆಲ್ಲರೂ ಇಂದು ಅರಿತುಕೊಳ್ಳಬೇಕಿದೆ ಎಂದರು.
ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ ಮತ್ತು ಉರಿಲಿಂಗ ಪೆದ್ದಿಯಂತಹ ಮಹಾನ್ ಶರಣರ ಕಾಯಕ ನಿಷ್ಠೆ ಮತ್ತು ಸಮಾನತೆಯ ತತ್ವಗಳನ್ನು ಸ್ಮರಿಸಲು ರಾಜ್ಯ ಸರ್ಕಾರ ಈ ಜಯಂತ್ಯುತ್ಸವ ಆಚರಿಸುತ್ತಿದೆ ಎಂದರು.ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಎನ್.ಡಿ. ವೆಂಕಮ್ಮ ಅವರು 12ನೇ ಶತಮಾನ ಕರ್ನಾಟಕದ ಇತಿಹಾಸದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ತಿಕ ಕ್ರಾಂತಿಯ ‘ಸುವರ್ಣ ಯುಗ’ವಾಗಿತ್ತು. ಬಸವಣ್ಣ ಮತ್ತು ಶರಣರು ವಚನಗಳ ಮೂಲಕ ಜಾತಿ, ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳನ್ನು ಎತ್ತಿಹಿಡಿದ್ದರು ಎಂದು ಹೇಳಿದರು.
ಇನ್ನೋರ್ವ ವಿಶೇಷ ಉಪನ್ಯಾಸಕರಾಗಿದ್ದ ಕೊಟ್ಟೂರುಸ್ವಾಮಿ ಬಿಇಡಿ ಕಾಲೇಜಿನ ನಿವೃತ್ತ ಉಪನ್ಯಾಸಕಿ ಸುಶೀಲಾ ಶಿರೂರ ಮಾತನಾಡಿ, 12ನೇ ಶತಮಾನದಲ್ಲಿ ಕೇವಲ ಶರಣರು ಮಾತ್ರವಲ್ಲದೇ, ಶರಣೆಯರೂ ಇದ್ದರು. ಅವರು ಜೀವಂತವಾಗಿದ್ದ ಸಾಮಾಜಿಕ ಅಸಮಾನತೆ, ಜಾತೀಯತೆ ನಿರ್ಮೂಲನೆ ಮಾಡಲು ಅನೇಕ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಇದಕ್ಕೂ ಮುನ್ನ ಕಂಪ್ಲಿ ತಾಲೂಕಿನ ಎಂ.ರಾಜು ಎಮ್ಮಿಗನೂರು ತಂಡ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಸೇರಿದಂತೆ ಶಿಕ್ಷಕರು-ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.