ಅಧಿಕಾರಿಗಳ ಬೆವರಿಳಿಸಿದ ಮಹಾನಗರ ಪಾಲಿಕೆ ಸದಸ್ಯರು

KannadaprabhaNewsNetwork |  
Published : Feb 11, 2026, 02:30 AM IST
ಮಹಾನಗರ ಪಾಲಿಕೆ | Kannada Prabha

ಸಾರಾಂಶ

ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ಕರೆದಿದ್ದ ವಿಶೇಷ ಸಭೆಯಲ್ಲಿ ಯಾವುದೇ ಗಟ್ಟಿ ನಿರ್ಧಾರಕ್ಕೆ ಬರಲಿಲ್ಲ. ಅಧಿಕಾರಿಗಳು ಮಾ. 31ರಿಂದ 3 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರೂ ಈ ಬಗ್ಗೆ ಮೇಯರ್‌ಗೆ ವಿಶ್ವಾಸ ಮೂಡಲಿಲ್ಲ. ಹೀಗಾಗಿ ಅವರೇ ದಿನಾಂಕ ಪ್ರಕಟಿಸಲಿಲ್ಲ.

ಹುಬ್ಬಳ್ಳಿ:

ಕಲುಷಿತ ನೀರು ಬರುತ್ತೆಂತ ಎಷ್ಟ ಸಲ ಹೇಳಬೇಕ್ರಿ... ನಾಲ್ಕು ವರ್ಷದಿಂದ ರೋಡ್‌ ಕಟ್ಟಿಂಗ್‌ಗೆ ಅನುಮತಿ ಸಿಕ್ಕಿಲ್ಲ ಅಂದ್ರೆ ಏನ್ರಿ...ನಿಮ್ಮ ಕಡೆ ಆಗಲಿಲ್ಲ ಅಂದ್ರ ಹೇಳ್ರಿ... ನಾವು ಬೇರೆ ಪ್ಲ್ಯಾನ್‌ ಮಾಡ್ತೇವೆ...!

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಿರಂತರ ನೀರು ಯೋಜನೆ ಹಾಗೂ ಸಮಸ್ಯೆ ಕುರಿತು ಎಲ್‌ ಆ್ಯಂಡ್‌ ಟಿ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ನಡೆದ ವಿಶೇಷ ಸಭೆಯಲ್ಲಿ ಅಧಿಕಾರಿಗಳನ್ನು ಪಾಲಿಕೆ ಸದಸ್ಯರು ತರಾಟೆಗೆ ತೆಗೆದುಕೊಂಡು ಬೆವರಿಳಿಸಿದರು.

ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ಕರೆದಿದ್ದ ವಿಶೇಷ ಸಭೆಯಲ್ಲಿ ಯಾವುದೇ ಗಟ್ಟಿ ನಿರ್ಧಾರಕ್ಕೆ ಬರಲಿಲ್ಲ. ಅಧಿಕಾರಿಗಳು ಮಾ. 31ರಿಂದ 3 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರೂ ಈ ಬಗ್ಗೆ ಮೇಯರ್‌ಗೆ ವಿಶ್ವಾಸ ಮೂಡಲಿಲ್ಲ. ಹೀಗಾಗಿ ಅವರೇ ದಿನಾಂಕ ಪ್ರಕಟಿಸಲಿಲ್ಲ. ಆದರೆ, ಎಲ್‌ ಆ್ಯಂಡ್‌ ಟಿ ಹಾಗೂ ಕೆಯುಐಡಿಯುಸಿ ಅಧಿಕಾರಿಗಳ ಬಗ್ಗೆ ಇಷ್ಟು ವರ್ಷದ ಆಕ್ರೋಶ ಹೊರಹಾಕಲು ಸಭೆ ವೇದಿಕೆಯಾಗಿತ್ತು.

ಬಾರದ ಅಧಿಕಾರಿ;

ಸಭೆ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ಅಭಿಯಂತರ ಬಾರದಿರುವುದಕ್ಕೆ ಪಾಲಿಕೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯ ಅಭಿಯಂತರ ಕಲಬುರಗಿಗೆ ಹೋಗಿದ್ದಾರೆ. ಹೀಗಾಗಿ ತಾವು ಬಂದಿರುವುದಾಗಿ ನಿಗಮದ ಅಧಿಕಾರಿ ಹೇಳಿದರು. ಆಗ ಗದ್ದಲ ಜೋರಾಗಿದ್ದರಿಂದ ಎರಡು ಸಲ ಸಭೆಯನ್ನು ಮೇಯರ್‌ ಮುಂದೂಡಿದರು. ಆ ಬಳಿಕ ಶುರುವಾದ ಸಭೆಯಲ್ಲಿ ಪ್ರತಿಯೊಬ್ಬರೂ, ತಮ್ಮ ತಮ್ಮ ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಬಿಚ್ಚಿಟ್ಟು ಎಲ್‌ ಆ್ಯಂಡ್‌ ಟಿ ಅಧಿಕಾರಿ ಹಾಗೂ ನೋಡಲ್‌ ಜವಾಬ್ದಾರಿ ಹೊತ್ತಿರುವ ಕೆಯುಐಡಿಎಫ್‌ಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

4 ವರ್ಷ ಆಯ್ತು?:

ಈ ನಡುವೆ ಮಹ್ಮದ ಇಕ್ಬಾಲ್‌ ನವಲೂರು ಮಾತನಾಡಿ, ಕುಡಿಯುವ ನೀರಿನಲ್ಲಿ ಕೊಳಚೆ ಮಿಶ್ರಣವಾಗುತ್ತದೆ. 4 ವರ್ಷವಾದರೂ ಕ್ರಮ ಕೈಗೊಳ್ಳುತ್ತಿಲ್ಲ. ಇದೇ ತರಹ ನಜೀರ್‌ ಅಹ್ಮದ ಹೊನ್ಯಾಳ, ರಾಧಾಬಾಯಿ ಸಫಾರಿ, ಶಿವು ಮೆಣಸಿನಕಾಯಿ ಸೇರಿದಂತೆ ಹಲವು ಸದಸ್ಯರು, ಕಲುಷಿತ ನೀರಿನ ಬಗ್ಗೆ ಸಭೆ ಗಮನಕ್ಕೆ ತಂದರು. ಅದಕ್ಕೆ ಅಧಿಕಾರಿ ಹರಿಪ್ರಸಾದ, ರೋಡ್‌ ಕಟ್ಟಿಂಗ್‌ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಿಲ್ಲ. ಹೀಗಾಗಿ ಕಲುಷಿತ ನೀರು ಸರಬರಾಜು ಆಗುತ್ತಿದೆ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡರು. ಆದರೆ, ಅದರ ನಿವಾರಣೆಗೆ ಕ್ರಮ ಕೈಗೊಂಡಿರುವುದನ್ನು ತಿಳಿಸಲಿಲ್ಲ. ಇದರಿಂದ ಕೆಂಡಮಂಡಲವಾದ ಮೇಯರ್‌ ಜ್ಯೋತಿ ಪಾಟೀಲ, ಏನ್ರಿ.. ಅನುಮತಿ ಪಡೆಯಲು ನಾಲ್ಕು ವರ್ಷ ಬೇಕಾ? ನಿಮಗೆ ಅನುಮತಿ ಪಡೆಯೋದು ಸಾಧ್ಯವಿಲ್ಲ ಅಂದರೆ ತಿಳಿಸಿ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅನುಮತಿ ಕೊಡಿಸಲಾಗುವುದು. ಎರಡು ದಿನದೊಳಗೆ ಕ್ರಮ ಕೈಗೊಳ್ಳಿ. ನಾಳೆಯೇ ಅಲ್ಲಿನ ನೀರನ್ನು ಟೆಸ್ಟಿಂಗ್‌ಗೆ ಕಳುಹಿಸಿ ಎಂದು ತಾಕೀತು ಮಾಡಿದರು.

ಸದಸ್ಯ ವೀರಣ್ಣ ಸವಡಿ ಮಾತನಾಡಿ, ಮಾರ್ಚ್‌ 31ರೊಳಗೆ 3 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಸದಸ್ಯ ತಿಪ್ಪಣ್ಣ ಮಜ್ಜಗಿ, ಮೊದಲು ಪಾಲಿಕೆಯೇ ಈ ಜವಾಬ್ದಾರಿ ನಿಭಾಯಿಸುತ್ತಿದ್ದಾಗ 3 ದಿನಕ್ಕೊಮ್ಮೆ ಸರಿಯಾಗಿ ಕೊಡುತ್ತಿತ್ತು ಅಲ್ವಾ? ಎಂದರು.

ಸಭೆ ಆರಂಭವಾದಾಗಿನಿಂದ ಮುಗಿಯುವ ವರೆಗೂ ಪ್ರತಿಯೊಬ್ಬ ಸದಸ್ಯರು, ನೀರಿನ ಸಮಸ್ಯೆ, ಎಲ್‌ ಆ್ಯಂಡ್‌ ಟಿ ನಿರ್ಲಕ್ಷ್ಯ, ಕೆಯುಐಡಿಎಫ್‌ಸಿ ಅಧಿಕಾರಿಗಳ ಬೇಜವಾಬ್ದಾರಿ, ನೀರು ಪೋಲಾಗುತ್ತಿರುವುದು ಕಾಮಗಾರಿಗಳಲ್ಲಿನ ಲೋಪದೋಷಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು. ಅಧಿಕಾರಿಗಳು ಕೊಟ್ಟಂತಹ ಅಂಕಿ- ಅಂಶಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ ಸದಸ್ಯರು, ದೇವರ ಮೇಲೆ ಪ್ರಮಾಣ ಮಾಡಿ ಹೇಳಿ ಎಂದು ಸವಾಲೆಸೆದರು.

ಹೀಗೆ ಒಬ್ಬರಿಲ್ಲ ಒಬ್ಬರು ಸದಸ್ಯರಿಂದ ತೂರಿ ಬರುತ್ತಿದ್ದ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಲಾಗದೇ ಕಕ್ಕಾಬಿಕ್ಕಿಯಾಗುತ್ತಿದ್ದ ಅಧಿಕಾರಿ ವರ್ಗ, ಏನೋ ಹೇಳಿ ಜಾರಿಗೊಳ್ಳಲು ಮಾಡುತ್ತಿದ್ದ ಪ್ರಯತ್ನವೂ ಗೋಚರವಾಗುತ್ತಿತ್ತು.

ನೀರಲ್ಲೂ ರಾಜಕೀಯ: ಜಟಾಪಟಿ

ನೀರಿನ ವಿಶೇಷ ಸಭೆಯಲ್ಲೂ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಚರ್ಚೆ ನಡುವೆ ರಾಜಕಾರಣ ನುಸುಳಿ ಪರಸ್ಪರ ಜಟಾಪಟಿಗೆ ಕಾರಣವೂ ಆಯಿತು.

ವಿರೋಧ ಪಕ್ಷದ ನಾಯಕ ಇಮ್ರಾನ್‌ ಎಲಿಗಾರ, ಮಾರ್ಚ್‌ 31ರ ಬಳಿಕ ಎಲ್ಲ ವಾರ್ಡ್‌ಗಳಿಗೆ 3 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದು ಎಲ್‌ ಆ್ಯಂಡ್‌ ಟಿ ಅವರೇ ಭರವಸೆ ನೀಡಿದ್ದಾರೆ. ಒಂದು ವೇಳೆ ಅದಾಗದಿದ್ದರೆ ಪಾಲಿಕೆ ಎಲ್ಲ ಸದಸ್ಯರು ಸೇರಿಕೊಂಡು ಎಲ್‌ ಆ್ಯಂಡ್‌ ಟಿ ಕಚೇರಿಗೆ ಮುತ್ತಿಗೆ ಹಾಕೋಣ ಎಂದರು. ಆಗ ಮಧ್ಯೆ ಪ್ರವೇಶಿಸಿದ ಸಭಾನಾಯಕ ಈರೇಶ ಅಂಚಟಗೇರಿ, ಎಲ್‌ ಆ್ಯಂಡ್‌ ಟಿ ಕಚೇರಿಗೆ ಬೇಡ. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮುತ್ತಿಗೆ ಹಾಕೋಣ. ಅವರೇನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಆ ವೇಳೆ ಎರಡು ಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಇದೇ ರೀತಿ ಎರಡ್ಮೂರು ಬಾರಿ ಕಾಂಗ್ರೆಸ್‌- ಬಿಜೆಪಿ ನಡುವೆ ಚರ್ಚೆ ವೇಳೆ ರಾಜಕಾರಣ ನುಸುಳಿ ಪರಸ್ಪರ ಆರೋಪ- ಪ್ರತ್ಯಾರೋಪವನ್ನೂ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೇಶ್ವರ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಲಲಿತಾ ಕೆರಿಮನಿಗೆ ಅಧಿಕೃತ ಆಹ್ವಾನ
ನಿಸ್ವಾರ್ಥ ಕಾಯಕವೇ ಶರಣತ್ವದ ಮಾರ್ಗ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ