ಗದಗ: ಜಿಲ್ಲೆಯ ರಾಜಕೀಯದಲ್ಲಿ ಅಲ್ಲೋಲ- ಕಲ್ಲೋಲ ಸೃಷ್ಟಿಸಿದ್ದ ಬಿಜೆಪಿಯ ನಗರಸಭೆ ಮೂವರು ಸದಸ್ಯರನ್ನು ಅನರ್ಹ ಮಾಡಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶವನ್ನು ಮಂಗಳವಾರ ರಾಜ್ಯ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದ್ದು, ಬಿಜೆಪಿ ಸದಸ್ಯರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಸದಸ್ಯತ್ವದ ಅನರ್ಹತೆ ಕುರಿತು ಹಗ್ಗ ಜಗ್ಗಾಟದಲ್ಲಿ ತೊಡಗಿದ್ದ ಕಾಂಗ್ರೆಸ್ ಬಿಜೆಪಿ ನಡುವಿನ ಒಳಮುನಿಸು ಈ ತೀರ್ಪಿನಿಂದಾಗಿ ಬಹಿರಂಗಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಹಿನ್ನೆಲೆ: ನಗರದ ಮಧ್ಯಭಾಗದಲ್ಲಿ ಇರುವ 30ಕ್ಕೂ ಹೆಚ್ಚು ಎಕರೆ ನೂರಾರು ಕೋಟಿ ಬೆಲೆಬಾಳುವ ಭೂಮಿಯನ್ನು ಲೀಸ್ ನೀಡಲು ಮಾಡಿದ್ದ 378ನೇ ಠರಾವು ನಕಲಿ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಹಿಂದೆ ನಗರಸಭೆ ಆಯುಕ್ತರಾಗಿದ್ದ ಪ್ರಶಾಂತ ವರಗ್ಗಪ್ಪನ್ನವರ ಅವರು ನನ್ನ ಸಹಿ ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದರು. ಪ್ರಕರಣದಲ್ಲಿ ಕಾನೂನು ಹೋರಾಟ ನಡೆದು ಮೂವರು ಬಿಜೆಪಿ ನಗರಸಭೆ ಸದಸ್ಯರನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನರ್ಹ ಮಾಡಿದ್ದರು.ಪ್ರಾದೇಶಿಕ ಆಯುಕ್ತರ ಆದೇಶದ ಪ್ರಶ್ನಿಸಿ ಧಾರವಾಡ ವಿಭಾಗೀಯ ಹೈಕೋರ್ಟ ಏಕ ಸದಸ್ಯ ಪೀಠಕ್ಕೆ ನಗರಸಭೆ ಮಾಜಿ ಅಧ್ಯಕ್ಷೆ ಮತ್ತು ಸದಸ್ಯೆ ಉಷಾ ದಾಸರ, ಅನಿಲ ಅಬ್ಬಿಗೇರಿ, ಮುತ್ತು ಮುಷಿಗೇರಿ ಅವರು ಮೇಲ್ಮನವಿ ಸಲ್ಲಿಸಿದ್ದರು. ವರ್ಷದಿಂದ ವಿಚಾರಣೆ ನಡೆದು ಕಳೆದ ಮೂರು ತಿಂಗಳ ಹಿಂದೆ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಮಂಗಳವಾರ ಆದೇಶ ನೀಡಿದ ಏಕ ಸದಸ್ಯ ಪೀಠವು ಪ್ರಾದೇಶಿಕ ಆಯುಕ್ತರ ಆದೇಶ ಎತ್ತಿ ಹಿಡಿದು, ಸದಸ್ಯರ ಮೇಲ್ಮನವಿ ಅಜಿರ್ಯನ್ನು ತಿರಸ್ಕರಿಸಿದೆ.
ಈ ನಡುವೆ ಹೈಕೋರ್ಟ್ ಅನರ್ಹತೆ ಎತ್ತಿ ಹಿಡಿದರೂ ಚುನಾವಣಾ ಅಧಿಕಾರಿಗಳಿಂದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದ್ದ ಕಾರಣ ನಗರಸಭೆಯಲ್ಲಿ ಆಡಳಿತಾಧಿಕಾರಿಯ ಅಧಿಕಾರವೇ ಇನ್ನೂ ಮುಂದುವರಿಯುವುದು ಸ್ಪಷ್ಟವಾಗಿದೆ.