ಶಿರಹಟ್ಟಿ: ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು. ಸಮಯಕ್ಕೆ ಸರಿಯಾಗಿ ಎಲ್ಲ ಬಗೆಯ ತೆರಿಗೆ ಹಣ ಪಾವತಿ ಮಾಡಿ ಪಟ್ಟಣದ ಅಭಿವೃದ್ದಿಗೆ ಕೈಜೋಡಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಾಂಭ್ರೆ ತಿಳಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವಿದ್ಯಾನಗರ, ನವನಗರ, ಶಬ್ಬೀರ ನಗರ, ಸಿದ್ದರಾಮೇಶ್ವರ ನಗರ, ಫಕೀರೇಶ್ವರ ನಗರ, ಶಿವಲಿಂಗಪ್ಪ ಪ್ಲಾಟ್ ಸೇರಿದಂತೆ ಹೊಸದಾಗಿ ನಿರ್ಮಾಣಗೊಂಡ ಎಲ್ಲ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ, ಸುಗಮ ಸಂಚಾರಕ್ಕೆ ರಸ್ತೆ, ಬೀದಿದೀಪ ಸೇರಿದಂತೆ ಎಲ್ಲ ರೀತಿಯ ಮೂಲ ಸೌಲಭ್ಯ ಕಲ್ಪಿಸುವುದರ ಜತೆಗೆ ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಸಾರ್ವಜನಿಕರ ಸಲಹೆ ಸೂಚನೆ ಮೇರೆಗೆ ಸಿದ್ದರಾಮೇಶ್ವರ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊಸ ಮನೆಗಳು, ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿವೆ. ಕಳೆದ ನಾಲ್ಕೈದು ವರ್ಷಗಳಿಂದ ಆ ಬಡಾವಣೆಯಲ್ಲಿ ವಾಸವಿರುವ ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಮೊದಲಿಗೆ ಕುಡಿಯುವ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ, ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ಪಟ್ಟಣದ ೧೮ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರಿಂದ ಸಲಹೆ ಪಡೆದುಕೊಂಡು ಹಲವಾರು ಮಹತ್ವದ ಯೋಜನೆಗಳನ್ನು ಹಾಕಿಕೊಳ್ಳಬೇಕು. ಚರಂಡಿ, ರಸ್ತೆ, ಕುಡಿಯುನ ನೀರು, ಬೀದಿದೀಪ ಸೇರಿದಂತೆ ಇನ್ನೂ ಅನೇಕ ಮೂಲ ಸೌಕರ್ಯಗಳನ್ನು ಸಾರ್ವಜನಿಕರಿಗೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.ಸಾರ್ವಜನಿಕರಿಂದ ಮೂಲ ಸೌಭ್ಯ ಒದಗಿಸಿಕೊಡುವಂತೆ ಲಿಖಿತ ಅರ್ಜಿಗಳು ಬರುವ ಮೊದಲೇ ನಾವೇ ವ್ಯವಸ್ಥಿತವಾದ ಎಲ್ಲರ ಸಲಹೆಯೊಂದಿಗೆ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಅಭಿವೃದ್ದಿ ಕೆಲಸ ಹಾಕಿಕೊಳ್ಳಬೇಕು. ಸರ್ಕಾರ ಕೂಡ ವಿವಿಧ ಯೋಜನೆಗಳಿಂದ ಪಟ್ಟಣದ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದು, ಸಮರ್ಪಕ ಬಳಕೆಯಾಗಬೇಕು ಎಂದರು.ಆದ್ಯತೆ ನೀಡಬೇಕು: ಈಗಾಗಲೇ ಬೇಸಿಗೆಯ ಕಾವು ದಿನೇ ದಿನೇ ಏರುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೧೮ ವಾರ್ಡ್‌ಗಳಿಗೆ ನಿಗದಿಯಂತೆ ಸಮಯಕ್ಕೆ ಸರಿಯಾಗಿ ನೀರು ಪೂರೈಕೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಸಾರ್ವಜಕನಿಕರಿಂದ ದೂರುಗಳು ಬರದಂತೆ ಕಾರ್ಯಕ್ರಮ ರೂಪಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಚಾಂದಸಾಬ ಮುಳಗುಂದ, ಹೊನ್ನಪ್ಪ ಶಿರಹಟ್ಟಿ, ಅಲ್ಲಾಭಕ್ಷಿ ನಗಾರಿ, ಮಾಬುಸಾಬ ಲಕ್ಷ್ಮೇಶ್ವರ, ಆನಂದ ಕೋಳಿ, ಅಶರತ್ ಢಾಲಾಯತ್, ಇಸಾಕ್‌ಅಹಮ್ಮದ್ ಆದ್ರಳ್ಳಿ, ಕೆ.ಎ. ಬಳಿಗೇರ, ಎಚ್.ಎಂ. ದೇವಗಿರಿ, ಮುನ್ನಾ ಢಾಲಾಯತ್ ಹಾಗೂ ಅನೇಕರು ಇದ್ದರು.