ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ ಜನರ ಬದುಕಿಗೆ ಬೆಳಕು: ಡಾ.ಪುಷ್ಪ ಅಮರನಾಥ್

KannadaprabhaNewsNetwork |  
Published : Jun 19, 2025, 11:48 PM IST
19ಕೆಎಂಎನ್ ಡಿ16 | Kannada Prabha

ಸಾರಾಂಶ

ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿಕೊಟ್ಟು ಪಡಿತರ ವಿತರಣೆ, ತೂಕ ಹಾಗೂ ಗುಣಮಟ್ಟ ಪರಿಶೀಲಿಸಬೇಕು. ಅನ್ನಭಾಗ್ಯ ಯೋಜನೆ ವೈಫಲ್ಯ ಕಾಣಬಾರದು. ನ್ಯಾಯಬೆಲೆ ಅಂಗಡಿ ಅವರಿಗೆ ಕಮಿಷನ್ ನೀಡಬೇಕು ಎಂಬ ಆರೋಪಗಳಿವೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ವಿತರಕರ ಸಭೆ ಕರೆದು ಚರ್ಚಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸರ್ಕಾರದ ಪಂಚ ಗ್ಯಾರಂಟಿಗಳು ಜನರ ಬದುಕಿಗೆ ಬೆಳಕಾಗಿವೆ. ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಗ್ರಾಪಂ ಮಟ್ಟದಲ್ಲಿ ಗ್ಯಾರಂಟಿ ವಿಲೇವಾರಿ ಸಭೆ ನಡೆಸಬೇಕು ಎಂದು ಜಿಲ್ಲಾಡಳಿತಕ್ಕೆ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಗುರುವಾರ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಸರ್ಕಾರ ಬಜೆಟ್‌ನಲ್ಲಿ ಸಿಂಹಪಾಲು ಅನುದಾನವನ್ನು ಗ್ಯಾರಂಟಿ ಯೋಜನೆಗೆ ಮೀಸಲಿಟ್ಟಿದೆ. ಈ ಯೋಜನೆಗಳಿಂದ ಬಡವರ ಹಸಿವು ನೀಗಿದೆ. ಮಹಿಳೆಯರ ಸಬಲೀಕರಣವಾಗಿದೆ ಎಂದರು.

ಅಧಿಕಾರಿಗಳು ಗ್ಯಾರಂಟಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಮುಂದಿನ ದಿನಗಳಲ್ಲಿ ಗ್ರಾಪಂ ಮಟ್ಟದಲ್ಲಿ ಗ್ಯಾರಂಟಿ ವಿಲೇವಾರಿ ಸಭೆ ನಡೆಸಲು ಕ್ರಮ ವಹಿಸುವಂತೆ ಜಿಪಂ ಸಿಇಒ ನಂದಿನಿ ಅವರಿಗೆ ಸೂಚಿಸಿದರು.

ಜಿಎಸ್‌ಟಿ, ಐಟಿ ಸೇರಿದಂತೆ ಕೆಲವು ಸಣ್ಣಪುಟ್ಟ ಲೋಪದೋಷಗಳಿಂದಾಗಿ ಕೆಲವು ಅರ್ಹರಿಗೆ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿದ್ದಾರೆ. ತಾಲೂಕಿನ 734 ಮಂದಿ ಮಹಿಳೆಯರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದು ಕೇವಲ ಮಂಡ್ಯ ಜಿಲ್ಲೆಯಲ್ಲಿ ಮಾತ್ರವಲ್ಲ. ಇಡೀ ರಾಜ್ಯದ ಸಮಸ್ಯೆಯಾಗಿದೆ. ಹಾಗಾಗಿ ಈ ವಿಚಾರವನ್ನು ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿಕೊಟ್ಟು ಪಡಿತರ ವಿತರಣೆ, ತೂಕ ಹಾಗೂ ಗುಣಮಟ್ಟ ಪರಿಶೀಲಿಸಬೇಕು. ಅನ್ನಭಾಗ್ಯ ಯೋಜನೆ ವೈಫಲ್ಯ ಕಾಣಬಾರದು. ನ್ಯಾಯಬೆಲೆ ಅಂಗಡಿ ಅವರಿಗೆ ಕಮಿಷನ್ ನೀಡಬೇಕು ಎಂಬ ಆರೋಪಗಳಿವೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ವಿತರಕರ ಸಭೆ ಕರೆದು ಚರ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.

ಯುವನಿಧಿ ಯೋಜನೆ ಬಗ್ಗೆ ಹೆಚ್ಚು ಪ್ರಚಾರವಾಗಬೇಕು. ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು. ಇನ್ನೂ ಶಕ್ತಿ ಯೋಜನೆ ಹಾಗೂ ಗೃಹಜ್ಯೋತಿ ಯೋಜನೆಯೂ ಸಾಕಷ್ಟು ಅನುಕೂಲವಾಗಿದೆ ಎಂದರು.

ನಮ್ಮ ಸರ್ಕಾರ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಅಧಿಕಾರಿಗಳು ಯಾವುದೇ ಸಭೆ ನಡೆದರೂ ವರದಿಯನ್ನು ಕನ್ನಡದಲ್ಲಿ ನೀಡಬೇಕು. ಜತೆಗೆ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯರ ಸಭೆಯಲ್ಲಿ ಕಡ್ಡಾಯವಾಗಿ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ತಾಕೀತು ಮಾಡಿದರು.

ಗೃಹಲಕ್ಷ್ಮಿ ಯೋಜನೆ ಹಣದಿಂದ ತಾಲೂಕಿನ ರೈಲ್ವೆ ಸ್ಟೇಷನ್ ಬಳಿ ಹಣ್ಣಿನ ಅಂಗಡಿ ಹಾಕಿಕೊಂಡು ಬದುಕು ಕಟ್ಟಿಕೊಂಡಿರುವ ಕೆನ್ನಾಳು ಗ್ರಾಮದ ಜಯಲಕ್ಷ್ಮಿ ಎಂಬ ಮಹಿಳೆ ಡಾ.ಪುಷ್ಪ ಅಮರನಾಥ್ ಅವರನ್ನು ಅಭಿನಂದಿಸಿದರು. ನಿಮ್ಮಂತ ಮಹಿಳೆಯರಿಂದ ಗೃಹಲಕ್ಷ್ಮಿ ಯೋಜನೆಗೆ ಗೌರವ ಬಂದಿದೆ. ನೀವು ಮಹಿಳಾ ಶಕ್ತಿಯಾಗಿದ್ದೀರಾ ಎಂದು ಬಣ್ಣಿಸಿದರು.

ಈ ವೇಳೆ ಮಹಿಳೆ ಜಯಲಕ್ಷ್ಮಿ ಅವರು ಡಾ.ಪುಷ್ಪ ಅಮರನಾಥ್ ಅವರಿಗೆ ಹೂ, ಹಣ್ಣು, ಎಲೆ ಅಡಿಕೆ, ಬಳೆ ಕೊಟ್ಟು ಅಭಿನಂದಿಸಿ ಸೆಲ್ಫಿ ತೆಗೆದುಕೊಂಡರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರಸ್ತುತ ಅಕ್ಕಿಯ ಜೊತೆ ರಾಗಿ ಸಹ ನೀಡಲಾಗುತ್ತಿದೆ. ಇನ್ನೂ ಎರಡು ದಿನದೊಳಗಾಗಿ ಪಡಿತರ ವಿತರಿಸಲಾಗುವುದು. ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ವೇಳೆ ಪ್ಯಾನ್ ಸಂಖ್ಯೆ ಬೇಕಿಲ್ಲ. ಈ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಂದ ಚರ್ಚಿಸಿ ನಿರ್ದೇಶನ ನೀಡಲಾಗುವುದು ಎಂದರು.

ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ತಾಲೂಕು ಅಧ್ಯಕ್ಷ ಎಚ್.ಕೆ.ಕೃಷ್ಣೇಗೌಡ, ಜಿಪಂ ಮುಖ್ಯ ಯೋಜನಾಧಿಕಾರಿ ಧನುಷ್, ತಹಸೀಲ್ದಾರ್ ಸಂತೋಷ್‌ಕುಮಾರ್, ತಾಪಂ ಇಒ ಸೇರಿದಂತೆ ಸಮಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ