ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ರಾಜ್ಯದ ಜನರ ಹಿತದೃಷ್ಠಿಯಿಂದ ಪಂಚ ಗ್ಯಾರಂಟಿಗಳಾದ ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ
ಕಾರಟಗಿ: ಚುನಾವಣೆ ವೇಳೆ ಜನರಿಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದುಕೊಂಡು ಪಂಚ ಗ್ಯಾರಂಟಿ ಜಾರಿ ಮಾಡಿದ್ದು, ಅವುಗಳ ಅನುಷ್ಠಾನದಲ್ಲಿ ಇರುವ ಸಮಸ್ಯೆ ದೂರ ಮಾಡಲು ತಾಲೂಕು ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದರು.
ಪಟ್ಟಣದ ತಾಪಂ ಕಚೇರಿ ಆವರಣದಲ್ಲಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷರ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ರಾಜ್ಯದ ಜನರ ಹಿತದೃಷ್ಠಿಯಿಂದ ಪಂಚ ಗ್ಯಾರಂಟಿಗಳಾದ ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.ಇದರಿಂದ ಬಡವರು ಮತ್ತು ಕಡುಬಡವರ ಬದುಕಿಗೆ ಕೊಂಚ ಆಸರೆಯಾಗುತ್ತಿದೆ. ಪಂಚ ಗ್ಯಾರಂಟಿ ನೆರವು ಬಳಸಿ ಅನೇಕರು ಸ್ವಉದ್ಯೋಗ ಪ್ರಾರಂಭಿಸಿರುವ ಉದಾಹರಣೆಗಳಿವೆ. ಮಹಿಳೆಯರು, ನಿರುದ್ಯೋಗಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವ ಯೋಜನೆಗಳಾಗಿವೆ ಎಂದರು.
ಯೋಜನೆ ಜಾರಿ ಜತೆಗೆ ಅದು ಎಷ್ಟರ ಮಟ್ಟಿಗೆ ಜನರನ್ನು ತಲುಪಿದೆ ಮತ್ತು ಎಲ್ಲಿ ದೋಷಗಳಾಗಿವೆ ಎನ್ನುವುದನ್ನು ಪತ್ತೆ ಹಚ್ಚಿ ಸರಿಪಡಿಸಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ರಾಜ್ಯದ ಪ್ರತಿ ತಾಲೂಕಿನಲ್ಲಿಯೂ ಸಮಿತಿ ರಚನೆ ಮಾಡಿ ಯೋಜನೆ ಅರ್ಹರಿಗೆ ತಲುಪಿಸಲಾಗಿತ್ತಿದೆ ಎಂದು ಹೇಳಿದರು.
ಪಂಚ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದೆ. ಕಳೆದೆರಡು ವರ್ಷದಿಂದ ಪಂಚ ಗ್ಯಾರಂಟಿ ಸವಲತ್ತು ಸರ್ಕಾರ ಯಶಸ್ವಿಯಾಗಿ ನಿರ್ವಹಿಸಿ ಜನತೆಗೆ ತಲುಪಿಸುತ್ತಿದೆ. ರಾಜ್ಯದ ಅಭಿವೃದ್ಧಿಗೂ ಹಲವಾರು ಕಾಮಗಾರಿ ಸರ್ಕಾರ ಹಮ್ಮಿಕೊಂಡಿದೆ ಎಂದರು.
ಗೃಹಲಕ್ಷ್ಮೀ ಯೋಜನೆ ಲಾಭ ಪಡೆದ ಗ್ರಾಮೀಣ ಮಹಿಳೆಯರು ಸೇರಿಕೊಂಡು ಸ್ವಯಂ ಉದ್ಯೋಗ ಗುಡಿಕೈಗಾರಿಕೆ ಸ್ಥಾಪಿಸಿದ ಸಂಜೀವಿನಿ ಒಕ್ಕೂಟದ ಮಹಿಳೆಯರು ತಮ್ಮ ಮನೆಗಳಲ್ಲಿ ತಯಾರಿಸಿದ ತಿನಿಸುಗಳು ಬಗ್ಗೆ ಮಾಹಿತಿ ಪಡೆದು ಚಾಕಲೇಟ್, ಬಿಸ್ಕೆಟ್ ಸೇರಿದಂತೆ ಇನ್ನಿತರ ಸಿಹಿ ತಿನಿಸು ಸವಿದರು. ನಂತರ ಮಹಿಳೆಯರು ಸ್ವಾವಲಂಬನೆ ಜೀವನಕ್ಕೆ ಸಂಜೀವಿನಿ ಯೋಜನೆ ಸಹಕಾರಿಯಾಗಿದೆ ಎಂದರು.
ನಂತರ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಗ್ಯಾರಂಟಿ ಯೋಜನೆಗಳ ಪಲಾನುಭವಿಗಳಿಗೆ ಗೌರವಿಸಿ ಸನ್ಮಾನಿಸಿದರು.
ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಉಪಾಧ್ಯಕ್ಷ ನಾಗರಾಜ್ ಅರಳಿ, ಜಿಲ್ಲಾ ಸದಸ್ಯ ಸೋಮನಾಥ ದೊಡ್ಡಮನಿ, ತಾಲೂಕಾಧ್ಯಕ್ಷ ದೇವಪ್ಪ ದೊಡ್ಡಮನಿ, ಸದಸ್ಯೆ ದೀಪಾ ರಾಥೋಡ್, ತಾಪಂ ಇಓ ಲಕ್ಷ್ಮೀದೇವಿ ಯಾದವ್, ಯೋಜನಾಧಿಕಾರಿ ರಾಘವೇಂದ್ರ ಸೇರಿದಂತೆ ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ಚೆನ್ನಬಸಪ್ಪ ಸುಂಕದ್, ವಿಜಯಕುಮಾರ ಕೋಲ್ಕಾರ್, ಶರಣಯ್ಯಸ್ವಾಮಿ ಯರಡೋಣಿ, ಅಯ್ಯಪ್ಪ ಉಪ್ಪಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಜಿಲ್ಲಾ ಹಾಗೂ ತಾಲೂಕು ಸಮಿತಿಯ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿ,ತಾಪಂ ವಿವಿಧ ಯೋಜನೆಗಳ ವಿಷಯ ನಿರ್ವಾಹಕರು,ಎನ್ ಆರ್.ಎಲ್.ಎಂ ಯೋಜನೆಯ ಸಿಬ್ಬಂದಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.