ಒಳಮೀಸಲು ಜಾರಿಯಲ್ಲಿ ಕಾಂಗ್ರೆಸ್‌ನದ್ದು ಪೂರ್ವಾಗ್ರಹ ಮನಸ್ಥಿತಿ: ಭಾಸ್ಕರ್

KannadaprabhaNewsNetwork | Published : Apr 11, 2025 12:34 AM

ಸಾರಾಂಶ

ಚುನಾವಣಾ ಪೂರ್ವದ ಪ್ರಣಾಳಿಕೆಯಲ್ಲಿ ಮೊದಲ ಅಧಿವೇಶನದಲ್ಲಿಯೇ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿದ ರಾಜ್ಯ ಸರ್ಕಾರ ಇಂದು ಮಾತು ತಪ್ಪಿದೆ. ಅಲ್ಲದೇ, ಸದಾಶಿವ ಆಯೋಗ ನೀಡಿದ ವರದಿ ಬಗ್ಗೆ ಇಲ್ಲಸಲ್ಲದ ನೆಪ ಹೇಳಿಕೊಂಡು ಮೀಸಲಾತಿ ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಒಳ ಮೀಸಲಾತಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಕಾಂಗ್ರೆಸ್ ಸರ್ಕಾರ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದಾಗಿ ಒಳಮೀಸಲಾತಿ ಜಾರಿ ಮಾಡಿಲ್ಲ ಎಂದು ಕ್ರಾಂತಿಕಾರಿ ಪಾದಯಾತ್ರೆಯ ರೂವಾರಿ ಬಿ.ಆರ್.ಬಾಸ್ಕರ್ ಪ್ರಸಾದ್ ಆಕ್ರೋಶ ವ್ಯಕ್ತ ಪಡಿಸಿದರು.

ಒಳಮೀಸಲಾತಿ ಜಾರಿಗಾಗಿ ೩೫ ವರ್ಷಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬರಲಾಗುತ್ತಿದ್ದು, ಈ ಹೋರಾಟದಲ್ಲಿ ಹಲವು ಮಂದಿ ಪೊಲೀಸರ ಪ್ರತಿರೋಧದಿಂದ ಅಂಗವಿಕಲರಾಗಿರುವುದಲ್ಲದೇ ಜೀವ ಕಳೆದುಕೊಂಡಿದ್ದಾರೆ. ಮೀಸಲಾತಿ ಜಾರಿಗಾಗಿ ಇದೀಗ ಬೀದರ್‌ನಿಂದ ಕ್ರಾಂತಿಕಾರಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚುನಾವಣಾ ಪೂರ್ವದ ಪ್ರಣಾಳಿಕೆಯಲ್ಲಿ ಮೊದಲ ಅಧಿವೇಶನದಲ್ಲಿಯೇ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿದ ರಾಜ್ಯ ಸರ್ಕಾರ ಇಂದು ಮಾತು ತಪ್ಪಿದೆ. ಅಲ್ಲದೇ, ಸದಾಶಿವ ಆಯೋಗ ನೀಡಿದ ವರದಿ ಬಗ್ಗೆ ಇಲ್ಲಸಲ್ಲದ ನೆಪ ಹೇಳಿಕೊಂಡು ಮೀಸಲಾತಿ ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.

ದತ್ತಾಂಶದ ನೆಪ ಹೇಳುವ ರಾಜ್ಯ ಸರ್ಕಾರಕ್ಕೆ ಹಾವನೂರು, ಕಾಂತರಾಜು, ಸದಾಶಿವ, ಮಹದೇವಸ್ವಾಮಿ ಆಯೋಗಗಳ ವರದಿಯಿದ್ದರೂ ಮೀಸಲಾತಿ ಜಾರಿ ಮಾಡಲು ಮುಂದಾಗಿಲ್ಲ, ಇದೀಗ ನಾಗಮೋಹನ್‌ದಾಸ್ ಅವರ ಮಧ್ಯಂತರ ವರದಿಯ ಪರಿಶೀಲನೆಗೆ ಮುಂದಾಗಿದೆ. ಮಧ್ಯಂತರ ವರದಿ ಸಲ್ಲಿಸಿರುವ ನಾಗಮೋಹನ್‌ದಾಸ್ ಅವರು ಕಾಲಾವಕಾಶ ಕೇಳಿ ಸಲ್ಲಿಸಿರುವುದು ಸರಿಯಾದ ನಡೆಯಲ್ಲ ಎಂದು ಕಿಡಿಕಾರಿದರು.

೨೦೨೪ರ ಅಕ್ಟೋಬರ್‌ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೀಸಲಾತಿ ಜಾರಿಯಾಗುವವರಗೆ ಬಡ್ತಿ ನೀಡಬಾರದು ಎಂದು ನಿರ್ಣಯ ಕೈಗೊಂಡು, ಮುಂದಿನ ತಿಂಗಳು ನಡೆಯುವ ಸಂಪುಟ ಸಭೆಗೂ ಮುನ್ನ ೭೦ಕ್ಕೂ ಹೆಚ್ಚು ಬಡ್ತಿ ಮಾಡಿ, ಉನ್ನತ ಹುದ್ದೆ ಭರ್ತಿ ಮಾಡಿದ್ದಾರೆ. ಒಳಮೀಸಲಾತಿಗಾಗಿ ಕಾಯುತ್ತಿರುವ ಸಮುದಾಯಗಳಿಗೆ ಅದೇ ಸಮುದಾಯದವರೇ ಆದ ಸಚಿವ ಎಚ್.ಸಿ. ಮಹದೇವಪ್ಪ ಅನ್ಯಾಯ ಮಾಡುತ್ತಿದ್ದು, ಸಮುದಾಯದ ಪರ ನಿಲ್ಲದ ಸಮುದಾಯದ ಸಚಿವರು ನಾಲಾಯಕ್ ಎಂದು ಕ್ರೋಧ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಸಿ.ಕೆ.ಪಾಪಯ್ಯ, ಸಿ.ಅಂದಾನಿ, ಬಿ.ಕೃಷ್ಣ, ಮಂಜು, ಶ್ರೀನಿವಾಸ್, ಶಿವಕುಮಾರ್ ಇತರರಿದ್ದರು.

Share this article