ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರದ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ಗೌರಿ ಬಿದನೂರು ವಿಧಾನಸಭಾ ಕ್ಷೇತ್ರದ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿದರು.ಪ್ರಚಾರ ಸಭೆಗಳಿಗೆ ಜನಸ್ತೋಮವೇ ಹರಿದು ಬಂತು. ಪ್ರಚಾರ ಸಭೆಗಳು. ಪಾದಯಾತ್ರೆ ಮತ್ತು ರೋಡ್ ಶೋನಲ್ಲಿ ಗ್ರಾಮೀಣ ಹಳ್ಳಿಗಾಡಿನ ಜನ ಸಮೂಹ ಅಪಾರ ಸಂಖ್ಯೆಯಲ್ಲಿ ಭಾಗಿಯಾಯಿತು. ರಕ್ಷಾ ರಾಮಯ್ಯ ಅವರಿಗೆ ಎಲ್ಲೆಡೆ ಹೂ ಮಳೆ ಸ್ವಾಗತ ದೊರೆಯಿತು. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡರು, ಮಾಜಿ ಸಚಿವ ಎಚ್.ಎನ್. ಶಿವಶಂಕರ ರೆಡ್ಡಿ ನೇತೃತ್ವದಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯಿತು.
ಗುಡಿಬಂಡೆ ತಾಲೂಕಿನ ಶ್ರೀ ಕ್ಷೇತ್ರ ಎಲ್ಲೋಡು ಶ್ರೀ ಲಕ್ಷ್ಮಿ ಆದಿನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ನಂತರ ಗೌರಿಬಿದನೂರು ತಾಲೂಕಿನ ಹೊಸೂರು ಹೊಬಳಿಯ ವಿವಿಧ ಭಾಗದಲ್ಲಿ ರಕ್ಷಾ ರಾಮಯ್ಯ ಸಂಚರಿಸಿದರು. ಹೊಸೂರು ಬಸ್ ನಿಲ್ದಾಣದಲ್ಲಿ ಮತಯಾಚಿಸಿದರು. ನಗರಗೆರೆ ಹೊಬಳಿಯ ವಾಟದ ಹೊಸಳ್ಳಿ ಬಸ್ ನಿಲ್ದಾಣದಲ್ಲಿ ತಮಗೆ ಮತದಾನ ಮಾಡುವಂತೆ ಮನವಿ ಮಾಡಿದರು.ಡಿ ಪಾಳ್ಯದಲ್ಲಿ ಬಸ್ ನಿಲ್ದಾಣದಲ್ಲಿ ಮಾತನಾಡಿದ ರಕ್ಷಾ ರಾಮಯ್ಯ, ಬಿಜೆಪಿಯವರು ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸುತ್ತಿದ್ದು, ಇದಕ್ಕೆ ಕ್ಷೇತ್ರದ ಮತದಾರರು ಅವಕಾಶ ಕಲ್ಪಿಸಬಾರದು. ಕೇಂದ್ರ ಸರ್ಕಾರ ರಾಜ್ಯಕ್ಕೆ ಭಾರೀ ಅನ್ಯಾಯ ಮಾಡುತ್ತಿದ್ದು, ಬಿಜೆಪಿ ಸಂಸದರು ಈ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಕೆ.ಜಿ ಯಿಂದ ಪಿಜಿಯ ವರೆಗೆ ಶಿಕ್ಷಣ ಸಂಸ್ಥೆಗಳನ್ನು, ಐಐಟಿ, ಐಐಎಂಗಳನ್ನು ನಿರ್ಮಿಸಿದೆ. ಬಿಜೆಪಿಯವರು ಒಂದು ರಾಮಮಂದಿರ ಕಟ್ಟಿದ್ದಾರೆ. ಸಂತೋಷ. ಆದರೆ ನಾವು ಲಕ್ಷಾಂತರ ಶಾಲೆ, ಕಾಲೇಜುಗಳನ್ನು ನಿರ್ಮಿಸಿದ್ದೇವೆ. ಕಾಂಗ್ರೆಸ್ ಲಕ್ಷಾಂತರ ಶಿಕ್ಷಣ ಮಂದಿರಗಳನ್ನು ನಿರ್ಮಿಸಿ ದೇಶದ ಪ್ರಜೆಗಳನ್ನು ಪ್ರಜ್ಞಾವಂತರನ್ನಾಗಿ ಮಾಡಿದೆ ಎಂದರು. ಪ್ರತಿಯೊಂದಕ್ಕೂ ಬಿಜೆಪಿ ತೆರಿಗೆ ವಿಧಿಸಿದೆ:ಬಿಜೆಪಿ ಸರ್ಕಾರ ಪ್ರತಿಯೊಂದರ ಮೇಲೂ ತೆರಿಗೆ ವಿಧಿಸುತ್ತಿದ್ದು, ಮಜ್ಜಿಗೆ, ಉಪ್ಪು, ರೈತರ ಪೈಪ್ ಗಳನ್ನು ಸಹ ಬಿಟ್ಟಿಲ್ಲ. ಜಿಎಸ್‌ಟಿ ಮೂಲಕ ರೈತರ ಹೊಟ್ಟೆ ಮೇಲೆ ಒಡೆಯುವ ಕೆಲಸ ಮಾಡಿದೆ. ಲಕ್ಷಾಂತರ ಮಂದಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು, ಅವರಿಗೆ ಸ್ಪಂದಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಲ್ಲ. ನಮ್ಮ ಕಾಂಗ್ರೆಸ್ ಆಡಳಿತ ಬಡವರು. ಮಹಿಳೆಯರು, ಹಿರಿಯರ ಹಿತರಕ್ಷಣೆ ಮಾಡುತ್ತಿದ್ದು, ಗ್ಯಾರೆಂಟಿ ಯೋಜನೆಯಿಂದ ಪ್ರತಿ ತಿಂಗಳು ಪ್ರತಿಯೊಂದು ಕುಟುಂಬಕ್ಕೆ ಐದರಿಂದ ಆರು ಸಾವಿರ ರೂ ದೊರೆಯತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಪ್ರತಿಯೊಂದು ಮನೆಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿ ದೊರೆಯಲಿದೆ. ನಾವು ಅಧಿಕಾರಕ್ಕೆ ಬಂದಲ್ಲಿ ಕೃಷಿ ಮೇಲಿನ ಜಿಎಸ್‌ಟಿ ರದ್ದು ಮಾಡುತ್ತೇವೆ. ಬಿಜೆಪಿ ಸರ್ಕಾರ ಅಂಬಾನಿ, ಅದಾನಿ ಸಾಲ ಮನ್ನಾ ಮಾಡುತ್ತಿದೆ. ಬಿಜೆಪಿ ಶ್ರೀಮಂತರ ಪಕ್ಷ. ನಮ್ಮ ಕಾಂಗ್ರೆಸ್ ಪಕ್ಷ ಎಲ್ಲಾ ಜನರ ಪರವಾಗಿದೆ ಎಂದರು.
ಕಾಂಗ್ರೆಸ್ ಯುವಕನಾದ ನನಗೆ ಅವಕಾಶ ಮಾಡಿಕೊಟ್ಟಿದ್ದು, ಮತದಾರರು ನನಗೆ ಆಶಿರ್ವಾದ ಮಾಡಿ ಗೆಲ್ಲಿಸಬೇಕು. ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯವಾವಾಗದಂತೆ ನೋಡಿಕೊಳ್ಳುತ್ತೇವೆ. ಉತ್ತರ ಭಾರತಕ್ಕೆ ರಾಜ್ಯದ ಸಂಪನ್ಮೂಲ ಹೆಚ್ಚಿನ ಪಾಲು ನೀಡುವುದನ್ನು ತಡೆಗಟ್ಟಿ ರಾಜ್ಯಕ್ಕೆ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದರು.ಜನಸಾಮಾನ್ಯರು ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕೆಲಸ ನೋಡಿ ಒಗ್ಗಟ್ಟಾಗಿ ಕ್ಷೇತ್ರದೆಲ್ಲಡೆ ಶಕ್ತಿ ತುಂಬುತ್ತಿರುವುದನ್ನು ನೋಡಿ ತಮಗೆ ಸಂತಸವಾಗುತ್ತಿದೆ. ಬಿಜೆಪಿ ಪಕ್ಷಕ್ಕೆ ನೀವು ಈ ಬಾರಿ ತಕ್ಕ ಪಾಠ ಕಲಿಸಿ, ಬಡವರ, ರೈತರ, ಮಹಿಳೆಯರ ರಕ್ಷಣೆಗಾಗಿ ಇವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನಗೆ ಆಶೀರ್ವದಿಸಬೇಕು. ಈ ಬಾರಿ ನನಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಪ್ರಚಾರ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಾಘವೇಂದ್ರಹನುಮಾನ್, ಹನುಮಂತ್, ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾ.ಪಂ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು, ಮಹಿಳೆಯರು ಇದ್ದರು.