- ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ,
ಕಾಂಗ್ರೆಸ್ ಪಕ್ಷ ಸುದೀರ್ಘವಾಗಿ ದೇಶ ಕಟ್ಟುವ ಕೆಲಸ ಮಾಡಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್. ಶಂಕರ್ ಹೇಳಿದರು. ಜಿಲ್ಲಾ ಕಾಂಗ್ರೆಸ್ ಹಾಗೂ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ನಿಂದ ಸೋಮವಾರ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್‌ನ ಹೋರಾಟ, ತ್ಯಾಗ, ಬಲಿ ದಾನದ ಪ್ರತೀಕವಾಗಿ ಸ್ವತಂತ್ರ ಚಳುವಳಿ ಪ್ರಾಮುಖ್ಯತೆ ಪಡೆಯಿತು. ಇಂದು ಬಿಜೆಪಿ ಆಧಾರ ರಹಿತ ಸುಳ್ಳು ಆರೋಪ ಮಾಡುವುದನ್ನು ಕರಗತ ಮಾಡಿಕೊಂಡು ವಿವಾದಗಳನ್ನು ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿದರು.
ವಂದೇ ಮಾತರಂ ಗೀತೆ, ಅಂಬೇಡ್ಕರ್, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ನೆಹರು ಅವರ ಬಗ್ಗೆ ಗೌರವವಿಲ್ಲದ ಬಿಜೆಪಿ ಜನರಲ್ಲಿ ತಪ್ಪು ಭಾವನೆಗಳು ಮೂಡುವಂತೆ ಮಾಡುತ್ತಿದೆ ಎಂದರು.ಬಿಜೆಪಿ ಅವರ ಸಾಧನೆಗಳ ಬಗ್ಗೆ ಹೇಳಿಕೊಳ್ಳುವಂತ ವಿಷಯಗಳೇ ಇಲ್ಲದಿರುವಾಗ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದಾರೆ. ನೆಹರು ಟೀಕಿಸುವ ಬಿಜೆಪಿಯವರು ಆ ಪಕ್ಷದ ಸ್ಥಾಪಕರಾದ ಶ್ಯಾಮ್ ಪ್ರಸಾದ್ ಅವರು ನೆಹರು ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದವರು ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಜನ ಸಾಮಾನ್ಯರಿಗೂ ಬ್ಯಾಂಕಿಂಗ್ ವ್ಯವಸ್ಥೆ ಸಿಗುವಂತೆ ಮಾಡಲು ಬ್ಯಾಂಕ್ ರಾಷ್ಟ್ರೀಕರಣಗೊಳಿಸಿದ್ದು, ಉಳುವವನೆ ಭೂ ಒಡೆಯ ಯೋಜನೆ ಸೇರಿದಂತೆ ಬಹಳ ಪ್ರಮುಖ ಜನಪರ ಯೋಜನೆಯನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಪಾಕಿಸ್ತಾನವನ್ನು ಸದೆ ಬಡಿಯುವ ಕೆಲಸವನ್ನು ಉಕ್ಕಿನ ಮಹಿಳೆ ಇಂದಿರಾಗಾಂಧಿ ಮಾಡಿದರು ಎಂದರು.ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮಗಳು ದೇಶದ ಸಾಮಾನ್ಯ ಜನರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು, ಗುಜರಾತ್ ಮಾಡೆಲ್ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದ ಬಿಜೆಪಿ ಇದೀಗ ಎಲ್ಲಾ ಕಡೆ ಕರ್ನಾಟಕ ಸರ್ಕಾರದ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಹೆಸರು ಬದಲಾಯಿಸಿ ತಮ್ಮ ಯೋಜನೆ ಎಂದು ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದರು.ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಕೇಂದ್ರ ಸರ್ಕಾರ ನರೇಗಾ ಯೋಜನೆ ಹೆಸರನ್ನಷ್ಟೇ ಬದಲಾಯಿಸಿಲ್ಲ ನರೇಗಾ ಯೋಜನೆಯನ್ನು ಮುಗಿಸಲು ಹೊರಟಿದೆ ಎಂದು ಆರೋಪಿಸಿದರು.ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕಾಂಗ್ರೆಸ್ ಸಾಧನೆಗಳ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ. ದೇಶದ ಉದ್ದಾರಕ್ಕೆ ಯಾವುದೇ ಯೋಜನೆ ರೂಪಿಸದೆ, ಭಾವನಾತ್ಮಕ ವಿಚಾರಗಳಲ್ಲಿ ರಾಜಕಾರಣ ಮಾಡುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಹಾಗೂ ಕಾಡಾ ಅಧ್ಯಕ್ಷ ಕೆ.ಪಿ ಅಂಶುಮಂತ್, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕರಾದ ಬಿ.ಬಿ.ನಿಂಗಯ್ಯ, ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೆಫೆಕ್ ಅಧ್ಯಕ್ಷ ಬಿ.ಎಚ್.ಹರೀಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದ ಸ್ವಾಮಿ, ಚಿಕ್ಕಮಗಳೂರು ಬ್ಲಾಕ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ಎಸ್. ಸಿ ಘಟಕ ಜಿಲ್ಲಾಧ್ಯಕ್ಷ ಮಲ್ಲೇಶ್ ಸ್ವಾಮಿ, ಅನಂತು ಸೇರಿದಂತೆ ಹಲವು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. 29 ಕೆಸಿಕೆಎಂ 2ಚಿಕ್ಕಮಗಳೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಡಾ. ಬಿ.ಎಲ್. ಶಂಕರ್, ಶಾಸಕರಾದ ಎಚ್.ಡಿ. ತಮ್ಮಯ್ಯ, ರಾಜೇಗೌಡ, ಶ್ರೀನಿವಾಸ್, ಬಿ.ಎಂ. ಸಂದೀಪ್, ಮೋಟಮ್ಮ, ಡಾ. ಅಂಶುಮಂತ್ ಹಾಗೂ ಮುಖಂಡರು ಇದ್ದರು.