76 ನಿಗಮ-ಮಂಡಳಿಗೆ ಹೆಸರು ಫೈನಲ್‌ ಮಾಡಿದ ಕಾಂಗ್ರೆಸ್ ಹೈಕಮಾಂಡ್‌

KannadaprabhaNewsNetwork | Updated : Jan 18 2024, 04:40 PM IST

ಸಾರಾಂಶ

37 ಶಾಸಕರು, 39 ಕಾರ್ಯಕರ್ತರಿಗೆ ನಿಗಮ ಮಂಡಳಿ ಹುದ್ದೆಭಾಗ್ಯ ಸಿಗಲಿದ್ದು, ಕೆಪಿಸಿಸಿಗೆ ಪಟ್ಟಿ ಕಳಿಸಿದ ದೆಹಲಿ ವರಿಷ್ಠರು ಅಂತಿಮ ಅಂಕಿತಕ್ಕೆ ಸೂಚನೆ ನೀಡಿದ್ದಾರೆ. ಬಾದರ್ಲಿ ಹೆಸರು ಹೊರಗುಳಿದಿದ್ದಕ್ಕೆ ಪ್ರಕಟ ವಿಳಂಬವಾಗಿತ್ತು ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಡೆ ಕ್ಷಣದಲ್ಲಿ ನಡೆದ ಭಾರಿ ಹಗ್ಗ-ಜಗ್ಗಾಟದ ನಡುವೆಯೂ ಕಾಂಗ್ರೆಸ್‌ ಹೈಕಮಾಂಡ್‌ ಒಟ್ಟು 76 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸಿ ಪಟ್ಟಿಯನ್ನು ಮುಖ್ಯಮಂತ್ರಿ ಕಚೇರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಕಚೇರಿಗೆ ರವಾನಿಸಿದೆ. 

ಹೈಕಮಾಂಡ್ ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಅಚ್ಚರಿಯೆಂಬಂತೆ ಶಾಸಕರಿಗಿಂತ ಹೆಚ್ಚು ಸ್ಥಾನಗಳು ಕಾರ್ಯಕರ್ತರಿಗೆ ದೊರಕಿದೆ. ಈ ಪಟ್ಟಿಯಲ್ಲಿ 37 ಶಾಸಕರು ಹಾಗೂ 39 ಕಾರ್ಯಕರ್ತರಿಗೆ ಅವಕಾಶ ದೊರಕಿದೆ.

ಪಟ್ಟಿಯಲ್ಲಿ ಈಗಾಗಲೇ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕವಾಗಿರುವ ಆರ್‌.ವಿ.ದೇಶಪಾಂಡೆ ಅವರ ಹೆಸರೂ ಇದೆ. ಹೀಗಾಗಿ ಪಟ್ಟಿಯಲ್ಲಿ 76 ಹೆಸರು ಇದ್ದರೂ, ಹೊಸದಾಗಿ 75 ಮಂದಿ ಹುದ್ದೆ ಪಡೆಯಲಿದ್ದಾರೆ.

ವಾಸ್ತವವಾಗಿ ಬುಧವಾರವೇ ಪಟ್ಟಿಯನ್ನು ಪ್ರಕಟಿಸಲು ಎಲ್ಲ ಸಿದ್ಧತೆ ನಡೆಸಲಾಗಿತ್ತು. ಆದರೆ, ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಅವರ ಹೆಸರನ್ನು ಪಟ್ಟಿಯಲ್ಲಿ ಉಳಿಸುವ ಹಾಗೂ ತೆಗೆಸುವ ಬಗ್ಗೆ ರಾಜ್ಯ ನಾಯಕತ್ವ ಮತ್ತು ಪ್ರಭಾವಿ ಸಚಿವರೊಬ್ಬರ ನಡುವೆ ನಡೆದ ಹಗ್ಗ ಜಗ್ಗಾಟದಿಂದಾಗಿ ಪಟ್ಟಿಯ ಅಧಿಕೃತ ಪ್ರಕಟಣೆ ತುಸು ಮುಂದಕ್ಕೆ ಹೋಗಿದೆ.

ಮೂಲಗಳ ಪ್ರಕಾರ, ಪ್ರಭಾವಿ ಸಚಿವರೊಬ್ಬರ ಕೈಚಳಕದಿಂದ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಸೇರಿದಂತೆ 2-3 ಹೆಸರು ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿಯಿಂದ ಹೊರಬಿದ್ದಿದೆ.

ಇದಕ್ಕೆ ಕೆಪಿಸಿಸಿ ನಾಯಕತ್ವ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ಪ್ರಕಟವಾಗಬೇಕಿದ್ದ ನಿಗಮ-ಮಂಡಳಿ ಅಧ್ಯಕ್ಷರ ನೇಮಕ ನಿರ್ಧಾರ ತುಸು ನಿಧಾನಗೊಂಡಿದೆ.

ಇಡೀ ದಿನ ಈ ಪ್ರಹಸನ ನಡೆದು ಅಂತಿಮವಾಗಿ ಹೈಕಮಾಂಡ್‌ 76 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಿದೆ. ಮೂಲಗಳ ಪ್ರಕಾರ ರಾಜ್ಯ ನಾಯಕತ್ವದ ತೀವ್ರ ಪ್ರಯತ್ನದ ನಡುವೆಯೂ ಬಸನಗೌಡ ಬಾದರ್ಲಿ ಅವರಿಗೆ ಪಟ್ಟಿಯಲ್ಲಿ ಅವಕಾಶ ದೊರಕಿಲ್ಲ.

ಸಿದ್ಧತೆ ಮಾಡಿಕೊಳ್ಳುವಂತೆ ಮಾಹಿತಿ ರವಾನೆ: ಹೈಕಮಾಂಡ್‌ನಿಂದ ಪಟ್ಟಿ ದೊರೆಯುತ್ತಿದ್ದಂತೆಯೇ ನಿಗಮ-ಮಂಡಳಿಗೆ ನೇಮಕಗೊಂಡಿರುವವರಿಗೆ ಮಾಹಿತಿ ರವಾನೆಯಾಗಿದೆ ಎಂದು ತಿಳಿದುಬಂದಿದೆ.

Share this article