- ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡರ ಮನವಿಗೆ ಉತ್ತರ
----ಕನ್ನಡಪ್ರಭ ವಾರ್ತೆ ಮೈಸೂರು
ಬಹಳಷ್ಟು ವರ್ಷಗಳಿಂದ ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವೆ ನಡೆಯುತ್ತಿದ್ದ ಗಡಿ ವಿವಾದದ ತಿಕ್ಕಾಟಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಗಮನ ಸೆಳೆದ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡರ ಮನವಿಗೆ ಸ್ಪಂದಿಸಿದ ಸಚಿವರು, ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದರು.ನಗರದ ಪ್ರಾದೇಶಿಕ ಆಯುಕ್ತ ಕಚೇರಿಯಲ್ಲಿ ಬುಧವಾರ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಜಿ.ಡಿ. ಹರೀಶ್ಗೌಡ ಮಾತನಾಡಿ, ಬಹಳಷ್ಟು ವರ್ಷಗಳಿಂದ ಹುಣಸೂರು ತಾಲೂಕಿನ ಕಿಕ್ಕೇರಿಕಟ್ಟೆ ಮತ್ತು ಅಕ್ಕ ಪಕ್ಕದ ಗ್ರಾಮಗಳ ಗಡಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿ ರೈತರ ಜಮೀನು ಮತ್ತು ಕಾಡಂಚಿನಲ್ಲಿ ಆನೆ ಕಂದಕ, ರೈಲ್ವೆ ಕಂಬಿ ನಿರ್ಮಿಸುವ ಸಂಬಂಧ ಹಲವಾರು ವರ್ಷಗಳಿಂದ ಅರಣ್ಯ ಮತ್ತು ಕಂದಾಯ ಇಲಾಖೆಯ ಗಡಿ ವಿವಾದ ನಡೆಯುತಿತ್ತು. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಮನವಿ ನೀಡಿದ್ದರು, ಇದನ್ನು ಇಂದು ನಡೆದ ಸಚಿವರ ಸಭೆಯಲ್ಲಿ ಚರ್ಚಿಸಿ ಗಮನ ಸೆಳೆಯಲಾಯಿತು. ಆಗ ಸಚಿವರು ಈ ವಿಷಯವನ್ನು ಮನಗೊಂಡು ಕೂಡಲೇ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸಭೆ ನಡೆಸಿ ಇದಕ್ಕೆ ಅಂತ್ಯವಾಡಲು ಕಂದಾಯ ಸಚಿವ ಕೃಷ್ಣ ಭೈರೇಗೌಡರು ಸಮ್ಮತಿಸಿದ್ದಾರೆ. ಅಲ್ಲಿಯ ತನಕ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಸೂಚಿಸಿದ್ದಾರೆ. ಶೀಘ್ರವೇ ಈ ಬಗ್ಗೆ ತುರ್ತು ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೂ ತಿಳಿಸಿದರು.
ಇದಲ್ಲದೇ ತಾಲೂಕಿನ ಬಿಳಿಕೆರೆ ಹೋಬಳಿಯ ಉಯಿಗೋಂಡನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಜಮೀನು ಅನುಭವ ಮಾಡಿಕೊಂಡು ಬರುತ್ತಿರುವ ರೈತರಿಗೆ ಸಾಗುವಳಿ ವಿತರಣೆ ಮಾಡುವ ಸಂಬಂಧ ಚರ್ಚಿಸಲಾಯಿತು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಪರಿಶೀಲಿಸುವುಧಾಗಿ ಭರವಸೆ ನೀಡಿದರು.ಸಭೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ, ಅಧಿಕಾರಿಗಳು ಇದ್ದರು.