ಕಾಂಗ್ರೆಸ್‌ ಭ್ರಷ್ಟ ಪಕ್ಷ: ಆರೋಪ

KannadaprabhaNewsNetwork |  
Published : Dec 13, 2023, 01:00 AM IST
ಹೊಸಪೇಟೆಯ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಮಂಗಳವಾರ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕೂಡಲೇ ಧೀರಜ್‌ ಸಾಹು ಅವರ ರಾಜ್ಯಸಭೆ ಸದಸ್ಯತ್ವ ರದ್ದುಗೊಳಿಸಬೇಕು. ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡು, ಬಂಧನಕ್ಕೊಳಪಡಿಸಬೇಕು. ರಾಹುಲ್‌ ಗಾಂಧಿ ಅವರು ಕೂಡ ತಮ್ಮ ಸಂಸತ್‌ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಬೇಕು. ರಾಜ್ಯದಲ್ಲಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರ ತೊಲಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮನೆಯಲ್ಲಿ ₹351 ಕೋಟಿ ಅಕ್ರಮ ಹಣ ಸಿಕ್ಕಿದ್ದು, ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ತಕ್ಷಣ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು,

ಪಟೇಲ್‌ ನಗರದ ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು.

ಹುಡಾ ಮಾಜಿ ಅಧ್ಯಕ್ಷ ಅಶೋಕ್ ಜೀರೆ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಳ ಆಪ್ತರಾಗಿರುವ ಜಾರ್ಖಂಡ್‌ನ ಸಂಸದ ಸಾಹು ಅವರ ಮನೆಯಲ್ಲಿ ಸಿಗುತ್ತಿರುವ ಅಕ್ರಮ ಹಣಕ್ಕೆ ಸ್ವತಃ ರಾಹುಲ್ ಅವರೇ ಉತ್ತರ ನೀಡಬೇಕಾಗುತ್ತದೆ. ಕಡುಭ್ರಷ್ಟ ಪಕ್ಷ ಕಾಂಗ್ರೆಸ್ ಎಂಬುದು ಇದೀಗ ಸಾಬೀತಾಗಿದೆ. ರಾಜ್ಯದ ಬಿಜೆಪಿ ಸರ್ಕಾರ ಶೇ. ೪೦ ಕಮಿಷನ್ ಸರ್ಕಾರ ಎಂಬ ಆರೋಪ ಮಾಡಿದ ಕಾಂಗ್ರೆಸ್ ಇದೀಗ ತಾನು ಮಹಾಭ್ರಷ್ಟ ಎಂಬುದನ್ನು ಸಾಬೀತುಪಡಿಸಿದೆ ಎಂದು ದೂರಿದರು.

ಪಕ್ಷದ ಹಿರಿಯ ನಾಯಕ ಸಾಲಿ ಸಿದ್ದಯ್ಯಸ್ವಾಮಿ ಮಾತನಾಡಿ, ರಾಹುಲ್ ಗಾಂಧಿ ಅವರು ಭಾರತ ಜೋಡೋ ಪಾದಯಾತ್ರೆಯ ವೇಳೆ ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದರು. ಆದರೆ ಅವರ ಆಪ್ತರೇ ದೊಡ್ಡ ಭ್ರಷ್ಟ ವ್ಯವಹಾರ ನಡೆಸಿರುವುದು ಈಗ ಅವರ ಮನೆಯಲ್ಲಿ ದೊರೆತಿರುವ ನೋಟುಗಳಿಂದ ಗೊತ್ತಾಗುತ್ತಿದೆ. ಇದಕ್ಕಾಗಿ ರಾಹುಲ್ ಗಾಂಧಿ ಅವರು ತಮ್ಮ ಸಂಸತ್ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಕೂಡಲೇ ಧೀರಜ್‌ ಸಾಹು ಅವರ ರಾಜ್ಯಸಭೆ ಸದಸ್ಯತ್ವ ರದ್ದುಗೊಳಿಸಬೇಕು. ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡು, ಬಂಧನಕ್ಕೊಳಪಡಿಸಬೇಕು. ರಾಹುಲ್‌ ಗಾಂಧಿ ಅವರು ಕೂಡ ತಮ್ಮ ಸಂಸತ್‌ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಬೇಕು. ರಾಜ್ಯದಲ್ಲಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರ ತೊಲಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮಂಡಳ ಅಧ್ಯಕ್ಷ ಕಾಸಟಿ ಉಮಾಪತಿ, ಮುಖಂಡರಾದ ಜೀವರತ್ನಂ, ಶಂಕರಮೇಟಿ, ಬಿ.ಟಿ. ದಯಾನಂದ, ರಾಘವೇಂದ್ರ, ಮಲ್ಲಿಕಾರ್ಜುನ, ಸೂಗುರು ಚಿದಾನಂದ, ಮಧುಸೂದನ್, ಗೌಳಿ ರುದ್ರಪ್ಪ, ಹೊನ್ನೂರಪ್ಪ, ಚಂದ್ರು ದೇವಲಾಪುರ, ಪಂಪಾಪತಿ, ನಾಗೇಂದ್ರ, ಅನುರಾಧ, ಮಂಜುಳಾ, ಕವಿತಾ, ಭಾರತಿ ಮತ್ತಿತರಿರದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ