ಕನ್ನಡಪ್ರಭ ವಾರ್ತೆ ಕಲಬುರಗಿಕಾಂಗ್ರೆಸ್ ಪಕ್ಷದ ತುಷ್ಟೀಕರಣ ರಾಜಕೀಯ, ಅಧಿಕಾರದ ಹಪಾಹಪಿತನ ಭಾರತದ ಲೋಕತಂತ್ರವನ್ನೇ ಅಪಾಯಕ್ಕೆ ತಳ್ಳುತ್ತಿದೆ. ಭಾರತೀಯತೆ, ಲೋಕತಂತ್ರ, ಭಾರತೀಯರ ಮಾನ, ಸಮ್ಮಾನಕ್ಕೆ ಧಕ್ಕೆಯಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಲೋಕತಂತ್ರದ ಬಲ ಕುಗ್ಗಿಸುವವರ ವಿರುದ್ಧ ದೇಶವಾಸಿಗಳು ಧ್ವನಿ ಎತ್ತಿ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಕರೆ ನೀಡಿದರು.ಭಾರತೀಯ ಜನತಾ ಪಕ್ಷ ಕಲಬುರಗಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡು ಬಳಿಕ ಬರಹಿರಂಗ ಸಭೆಯಲ್ಲಿ ಮಾತನಾಡಿದರು.ದೇಶದ ಒಗ್ಗಟ್ಟಿಗೆ, ಭಾರತೀಯತೆಗೆ, ನಮ್ಮ ಸಂಸ್ಕೃತಿಗೆ ಸವಾಲು ಹಾಕುವುದನ್ನು ನಾವು ಸಹಿಸಿಕೊಂಡು ಇರಲಾಗದು. ಅಂತಹವರ ವಿರುದ್ಧ ಧ್ವನಿ ಎತ್ತಲೇಬೇಕು ಎಂದು ಗುಡುಗಿದ ರಕ್ಷಣಾ ಸಚಿವರು ಅಧಿಕಾರಕ್ಕೆ ಬರುವ ಹಪಾಹಪಿಯಲ್ಲಿ ಕಾಂಗ್ರೆಸ್ ಲೋಕತಂತ್ರವನ್ನೇ ಹಾಳುಗೆಡವಲು ಹೊರಟಿದೆ. ಆದರೆ ಆ ಪಕ್ಷದವರ ಪ್ರಯತ್ನವನ್ನು ದೇಶವಾಸಿಗಳು ವಿರೋಧಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.ನ. 26 ರಂದು ಸಂವಿಧಾನ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭ ಬಿಜೆಪಿ ಲೋಕತಂತ್ರ ಉಳಿಸುವ ಅಭಿಯಾನ ಆರಂಭಿಸಿದೆ. ಇದಕ್ಕೆ ದೇಶವಾಸಿಗಳು ಕೈ ಜೋಡಿಸಿ ಬಿಡೆಪಿ ಕೈ ಬಲಪಡಿಸಬೇಕು. ಯಾವ ಲೋಕತಂತ್ರ ವ್ಯವಸ್ಥೆಯಿಂದ ಕಾಂಗ್ರೆಸ್ 60 ವರ್ಷ ಅಧಿಕಾರ ನಡೆಸಿತೋ ಅದೇ ಲೋಕತಂತ್ರವನ್ನು ಕಮ್ಜೋರ್ ಮಾಡಲು ಹೊರಟಿರುವುದು ಬಹುದೊಡ್ಡ ದುರಂತ. ಭಾರತೀಯರ ಕಣಕಣದಲ್ಲಿಯೂ ಲೋಕತಂತ್ರ ವ್ಯವಸ್ಥೆಯ ರಕ್ತವೇ ಹರಿಯುತ್ತಿದೆ ಎಂಬುದನ್ನು ಕಾಂಗ್ರೆಸ್ ಅರಿಯಬೇಕು ಎಂದು ಗುಡುಗಿದರು.ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಲೋಕತಂತ್ರ ವಿರೋಧಿ ಧೋರಣೆಗಳನ್ನು ಎಳೆಎಳೆಯಾಗಿ ಬಿಟ್ಟಿಚ್ಚ ರಾಜನಾಥ ಸಿಂಗ್, ವಿದೇಶಕ್ಕೆ ಹೋಗಿ ಭಾರತದ ಲೋಕತಂತ್ರ ವಿರುದ್ಧ ಮಾತನಾಡುವ, ವಿದೇಶಿಯಯರನ್ನು ಆಮಂತ್ರಿಸಿ ನಮ್ಮ ಪ್ರಧಾನಿಗಳ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿಸುವವರಿಂದ ದೇಶದ ಲೋಕತಂತ್ರ ಹಾಳಾಗಲು ಬಿಡುವುದಿಲ್ಲ ಎಂದು ಸವಾಲು ಹಾಕಿದರು.2013 ರಲ್ಲಿ ಪಾಕ್ ಪ್ರದಾನಿ ನವಾಜ್ ಷರೀಫ್ ಭಾರತದ ಆಗಿನ ಪ್ರಧಾನಿ ಮನಮೋಹನ ಸಿಂಗ್ ಬಗ್ಗೆ ಸಲ್ಲದ ಮಾತನ್ನಾಡಿದಾಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅದನ್ನು ಉಗ್ರವಾಗಿ ಖಂಡಿಸಿದ್ದರು. ಆದರೀಗ ಮೋದಿಯವರೇ ಪ್ರಧಾನಿಯಾಗಿದ್ದಾಗ ಇಟಲಿ ನೇತಾರನನ್ನು ಭಾರತಕ್ಕೆ ಕರೆಯಿಸಿ ಅವರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡುವಂತೆ ಕಾಂಗ್ರೆಸ್ ಪಿತೂರಿ ಮಾಡುತ್ತಿದೆ. ಇಟಲಿ ನೇತಾರ ಮಾತಿಗೆ ರಾಹುಲ್ ಗಾಂಧಿ ಚಪ್ಪಾಳೆ ತಟ್ಟುತ್ತಾರೆ. ಇದು ಕಾಂಗ್ರೆಸ್ ಸಂಸ್ಕೃತಿಗೆ ಕನ್ನಡಿ ಎಂದರು. ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಜಾರಿಗೆ ತಂದು ಲೋಕತಂತ್ರ ಕಮ್ಜೋರ್ ಮಾಡಲು ಮುಂದಾಗಿತ್ತು. ಇದೀಗ ಅಧಿಕಾರ ಪಡೆಯಲು ಲೋಕತಂತ್ರವನ್ನು ಮತ್ತೆ ಅಶಕ್ತಮಾಡಲು ಮುಂದಾಗುತ್ತಿದೆ. ಲೋಕತಂತ್ರವನ್ನ ಹಾಳು ಮಾಡುವ ಕಾಂಗ್ರೆಸ್ ಪ್ರಯತ್ನಗಳು ಹೊಸತೇನಲ್ಲ. ಆದರೆ ನಾವೆಲ್ಲರೂ ಒಗ್ಗಟ್ಟಾಗಿ ಈ ಪ್ರಯತ್ನಗಳನ್ನು ವಿರೋಧಿಸಬೇಕಿದೆ ಎಂದು ದೇಶದ ಜನತೆಗೆ ರಾಜನಾಥ ಸಿಂಗ್ ಕರೆ ನೀಡಿದರು.
ಬಿಜೆಪಿ ಅಭಿಯಾನದಲ್ಲಿ ಪ್ರಮುಖರಾದ ಪಿ. ರಾಜೀವ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಸವರಾಜ ಮತ್ತಿಮಡು, ಶಾಸಕ ಶರಣು ಸಲಗರ್, ಅರುಣ ಶಹಾಪೂರಕರ್, ರಾಜುಗೌಡ ಸುರಪೂರ, ಎಂಎಲ್ಸಿಗಳಾದ ಶಶಿಲ್ ನಮೋಶಿ, ಬಿಜಿ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ನಗರಾಧ್ಯಕ್ಷ ಚಂದು ಪಾಟೀಲ್, ಮಾಜಿ ಸಂಸದ ಡಾ. ಉಮೇಶ ಜಾಧವ್, ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ರೇವೂರ್, ಅಮರನಾಥ ಪಾಟೀಲ್ ಇತರರಿದ್ದರು.
2028ರಲ್ಲಿ ಬಿಜೆಪಿ ಸರ್ಕಾರ: ವಿಜಯೇಂದ್ರ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ರಾಹುಲ್ ದೇಶದ ಪ್ರಧಾನಿಯಾಗಲು ಇನ್ನೂ 3 ದಶಕದ ತನಕ ಈ ದೇಶದ ಜನ ಬಿಡುವುದಿಲ್ಲ. 2028ರ ಅಸೆಂಬ್ಲಿ ಹಣಾಣಿಯಲ್ಲಿ ರಾಜ್ಯದಲ್ಲಿ ಕಮಲ ಅರಳಲಿದೆ. ಎನ್ಡಿಎ ಅಭ್ಯರ್ಥಿಗಳು 150ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜಯಭೇರಿ ಬಾರಿಸಿ ಅದಿಕಾರಕ್ಕೆ ಬರುತ್ತೇವೆಂದು ರಾಜನಾಥ ಸಿಂಗ್ ಸಮ್ಮುಖದಲ್ಲಿ ವಿಜಯೇಂದ್ರ ಸಂಕಲ್ಪ ಮಾಡಿದರು.