- ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ । ಪಕ್ಷದ ಕಾರ್ಯಕರ್ತರಿಗೆ ಪರಸ್ಪರ ಸಿಹಿ ವಿತರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಂದಿನವರೆಗೂ ಸಮಾನತೆ, ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯದ ಸ್ಥಾಪನೆಗೆ ಹೋರಾಡುತ್ತಿರುವುದು ಪಕ್ಷ ಕಾಂಗ್ರೆಸ್ ಎಂದು ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಹೇಳಿದರು.
ನಗರದ ರಾಮನಹಳ್ಳಿ ಸಮೀಪದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಗುರುವಾರ ಏರ್ಪಡಿಸಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಕಾರ್ಯಕರ್ತರಿಗೆ ಪರಸ್ಪರ ಸಿಹಿ ವಿತರಿಸುವ ಮೂಲಕ ಸಂಭ್ರಮಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದ ಮೊದಲೇ 1885 ರಲ್ಲಿ ಕೇವಲ 72 ಮಂದಿ ಸದಸ್ಯತ್ವದಿಂದ ಆರಂಭವಾದ ಕಾಂಗ್ರೆಸ್ ಪಕ್ಷ ಇದೀಗ ಕೋಟಿಗಟ್ಟಲೇ ಮಂದಿ ಸದಸ್ಯತ್ವ ಹೊಂದಿ ಅಭೂತಪೂರ್ವವಾಗಿ ಮುನ್ನಡೆದಿದೆ. ಜವಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ, ಲಾಲ್‌ಬಹದ್ದೂರ್ ಶಾಸ್ತ್ರಿ ಸೇರಿದಂತೆ ಅನೇಕ ಮಂದಿ ಪ್ರಧಾನಿ ಹುದ್ದೆಗೇರಿ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದರು.ದೇಶಕ್ಕಾಗಿ ಪ್ರಾಣದ ಹಂಗುತೊರೆದು ತ್ಯಾಗಗೈದ ಕಾಂಗ್ರೆಸ್ ಮಹಾನುಭಾವರಿಂದ ಇಂದಿಗೂ ಸಮಾಜದಲ್ಲಿ ಶಾಂತಿ, ಸಮೃದ್ಧಿ ಹಾಗೂ ಸಹೋದರತೆ ಬೆಳೆದುಬಂದಿದೆ. ಆದರೆ, ಇಂದಿನ ಬಿಜೆಪಿ ಸರ್ಕಾರಗಳು ಇವುಗಳೆನ್ನೆಲ್ಲಾ ಗಾಳಿಗೆ ತೂರಿ ಕಾನೂನನ್ನು ತಮಗೆ ಬೇಕಾಗುವಂತೆ ಉಪಯೋಗಿಸಿಕೊಂಡಿರುವುದಲ್ಲದೇ ಜನಸಾಮಾನ್ಯರ ದಿನ ನಿತ್ಯದ ಬದುಕನ್ನು ಸರ್ವನಾಶದತ್ತ ಕೊಂಡೊಯ್ಯುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಜನಪರ ಯೋಜನೆಗಳಿಂದ ಹಳ್ಳಿಗಳಿಗೂ ಆಂಬುಲೆನ್ಸ್ ಸೇವೆ, ತಲಾ ಐದು ಕೆಜಿ ಅಕ್ಕಿ ವ್ಯವಸ್ಥೆ ಕಲ್ಪಿಸಿ ನುಡಿ ದಂತೆ ನಡೆದಿದೆ. ಅದಲ್ಲದೇ ಇಂದಿನ ಡಿಜಿಟಲೀಕರಣ ವ್ಯವಹಾರಕ್ಕೆ ಮೂಲ ವಾರಸುದಾರರೇ ಕಾಂಗ್ರೆಸ್‌ನ ರಾಜೀವ್ ಗಾಂಧಿಯವರ ಆಲೋಚನೆಗಳೆಂದ ಅವರು ಸಾಮಾನ್ಯ ಜನರಿಗೂ ಆತ್ಮವಿಶ್ವಾಸ ಮೂಡಿಸುವ ಯೋಜನೆಗಳನ್ನು ಕಾಂಗ್ರೆಸ್ ನೀಡುತ್ತಿದೆ ಎಂದು ತಿಳಿಸಿದರು.ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಕಾರ್ಯಕರ್ತರು ಕೇವಲ ಇಂದು ಸಂಸ್ಥಾಪನಾ ದಿನ ಆಚರಿಸಿದರೆ ಸಾಲದು, ಪ್ರತಿನಿತ್ಯ ಕಾಂಗ್ರೆಸ್ ಬೆಳವಣಿಗೆಗೆ ಪೂರಕ ಚಟುವಟಿಕೆ ನಡೆಸಿದರೆ ಮಾತ್ರ ಸಂಸ್ಥಾಪನಾ ದಿನಕ್ಕೆ ನಿಜ ಅರ್ಥ ಬರಲಿದೆ. ಹೀಗಾಗಿ ಕಾರ್ಯಕರ್ತರು ತತ್ವಸಿದ್ದಾಂತಗಳು ಹಾಗೂ ಪ್ರಾಮಾಣಿಕ ಸೇವಾ ಗುಣ ಬೆಳೆಸಿ ಕೊಳ್ಳಬೇಕು ಎಂದು ಸಲಹೆ ಮಾಡಿದರು.
ಮಾಜಿ ಜಿಲ್ಲಾಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಕಾಂಗ್ರೆಸ್ ದೇಶದಲ್ಲಿ ಕುಸಿಯುತ್ತಿದೆ ಎಂಬ ಬಿಜೆಪಿಗರ ಹೇಳಿಕೆಗೆ ರಾಜ್ಯದ ಜನ ತಕ್ಕ ಉತ್ತರ ನೀಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ದೇಶದಲ್ಲಿ ಅಧಿಕಾರ ಹಿಡಿದು ಜಾತ್ಯಾತೀತವಾಗಿ ಅಧಿಕಾರ ನಡೆಸಲಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಎದೆಗುಂದದೇ ರಾಹುಲ್ ಗಾಂಧಿಯವರ ಕೈಬಲಪಡಿಸಬೇಕು ಎಂದು ಹೇಳಿದರು.ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಪಕ್ಷ ಸ್ಥಾಪನೆ ದಿನದಿಂದಲೂ ಹಲವಾರು ಆಗು-ಹೋಗುಗಳ ದಾರಿಯಲ್ಲಿ ಸಾಗಿ ಇಂದು ಮುಗಿಲೆತ್ತರಕ್ಕೆ ಬೆಳೆದಿದೆ. ದೇಶದ ಮೊದಲ ಪ್ರಧಾನಿ ನೆಹರು ಮಾರ್ಗ ದರ್ಶನದಲ್ಲಿ ಇಂದಿಗೂ ಪಕ್ಷದ ಮುಖಂಡರು ಕಾರ್ಯನಿರ್ವಹಿಸಿರುವುದಲ್ಲದೇ ರಾಜ್ಯದ ಮೇಲೆ ವಿಶೇಷ ಅಭಿಮಾನದಿಂದ ರಾಷ್ಟ್ರಾಧ್ಯಕ್ಷ ಹುದ್ದೆಯನ್ನು ಖರ್ಗೆಯವರಿಗೆ ನೀಡಿದೆ ಎಂದರು.
ಸಮುದಾಯ ಭವನದ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜಾರೋಹಣ ನೆರವೇರಿಸಿ ವಂದೇ ಮಾತರಂ ಗೀತೆ ಹಾಡಿ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಿಡಿಎ ಮಾಜಿ ಅಧ್ಯಕ್ಷ ಹನೀಫ್, ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಬಿ.ಎಚ್. ಹರೀಶ್, ನಗರ ಅಧ್ಯಕ್ಷ ತನೋಜ್‌ಕುಮಾರ್, ನಗರಸಭಾ ಸದಸ್ಯರಾದ ಲಕ್ಷ್ಮಣ್, ಮಂಜುಳಾ, ಓಬಿಸಿ ಜಿಲ್ಲಾಧ್ಯಕ್ಷ ಪುಟ್ಟೇಗೌಡ, ಮುಖಂಡರಾದ ಸಿ.ಸಿ.ಮಧು, ಅನ್ಸರ್ ಆಲಿ, ಪ್ರಕಾಶ್ ರೈ, ನಾಗಭೂಷಣ್, ಜಯರಾಜ್ ಅರಸ್, ಕೆ.ಭರತ್, ಜೇಮ್ಸ್ ಡಿಸೋಜಾ, ತೇರೇಸಾ ಉಪಸ್ಥಿತರಿದ್ದರು. 28 ಕೆಸಿಕೆಎಂ 1
ಚಿಕ್ಕಮಗಳೂರಿನ ರಾಮನಹಳ್ಳಿ ಸಮುದಾಯ ಭವನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಅಂಶುಮಂತ್ ಮಾತನಾಡಿದರು.