ಕನ್ನಡಪ್ರಭ ವಾರ್ತೆ ತುಮಕೂರುಕಳೆದ ಒಂದು ಶತಮಾನದ ಅವಧಿಯಲ್ಲಿ ದೇಶದಾದ್ಯಂತ ತನ್ನ ಬೇರುಗಳನ್ನು ಆಳವಾಗಿ ನೆಟ್ಟಿರುವ, ಸಮಾಜ ಸೇವೆಯಲ್ಲಿ ಮತ್ತು ದೇಶ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಹೆಮ್ಮೆಯ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯನ್ನು ನಿಷೇಧಿಸುವ ಕುರಿತು ರಾಜ್ಯ ಕಾಂಗ್ರೆಸ್ ಪಕ್ಷ ಆಲೋಚಿಸುತ್ತಿರುವುದು ಅದಕ್ಕೆ ಬರಲಿರುವ ಕೇಡುಗಾಲದ ಸೂಚನೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ ಗೌಡರು ಕಿಡಿ ಕಾರಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವುದು ಮತ್ತು ಅದಕ್ಕೆ ಮುಖ್ಯಮಂತ್ರಿ ಕಚೇರಿಯಿಂದ ಶೀಘ್ರ ಕ್ರಮದ ಭರವಸೆ ಸಿಕ್ಕಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ತಿಳಿಸಿದ್ದಾರೆ.
ತಮಗೆ ಅಧಿಕಾರ ಇದ್ದರೆ ಆರ್‌ಎಸ್‌ಎಸ್ ಅನ್ನು ನಿಷೇಧಿಸುತ್ತಿದ್ದೆ ಎಂದು ಖರ್ಗೆಯವರು ಹೇಳಿರುವುದು ಅವರು ಕಾಣುತ್ತಿರುವ ಹಗಲುಗನಸಿನ ಸೂಚನೆ. ಪ್ರಿಯಾಂಕ ಖರ್ಗೆಯವರ ನೆಚ್ಚಿನ ನಾಯಕ ರಾಹುಲ್ ಗಾಂಧಿಯವರ ಅಜ್ಜಿ ಇಂದಿರಾ ಗಾಂಧಿ ಮತ್ತು ಅವರ ತಂದೆ ಜವಾಹರಲಾಲ್ ನೆಹರೂ ಅವರಿಂದಲೇ ಮಾಡಲಾಗದ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಾರೆ ಎಂದು ಊಹಿಸುವುದೂ ಸಾಧ್ಯವಿಲ್ಲ. ಇದೆಲ್ಲ ಹುಡುಗಾಟವಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.1949 ರಲ್ಲಿಯೇ ಆರ್‌ಎಸ್‌ಎಸ್ ಸಂಘಟನೆ ಮೇಲೆ ಹೇರಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ಕಾನೂನು ಬಾಹಿರ, ಸಾಕ್ಷ್ಯಾಧಾರ ಇಲ್ಲದ ನಿರ್ಧಾರ ಎಂದು ತಳ್ಳಿ ಹಾಕಿದ್ದು ಪ್ರಿಯಾಂಕ್ ಖರ್ಗೆ ಅವರಿಗೆ ಗೊತ್ತಿರಲಿಕ್ಕಿಲ್ಲ. ಆರ್‌ಎಸ್‌ಎಸ್ ಅನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಡಿಯಲ್ಲಿಯೇ ಹುಟ್ಟು ಹಾಕಲಾಗಿದೆ. ಇದು ಒಂದು ರಾಜಕೀಯ ಸಂಘಟನೆಯಲ್ಲ. ಇದು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿರುವ ಆರ್‌ಎಸ್‌ಎಸ್ ಅನ್ನು ಯಾವ ಆಧಾರದ ಮೇಲೆ ಖರ್ಗೆಯವರು ನಿಷೇಧಿಸಲು ಹೊರಟಿದ್ದಾರೆ ಎಂಬುದನ್ನು ಈ ನಾಡು ತಿಳಿಯಬಯಸುತ್ತದೆ ಎಂದು ಗೌಡರು ಕೇಳಿದ್ದಾರೆ.ಈ ಸರ್ಕಾರರದ ಮೂಗಿನ ಅಡಿಯಲ್ಲಿಯೇ ಕೆಲವು ಸಂಘಟನೆಗಳು ದೇಶದ್ರೋಹದ, ಕೋಮು ಹಿಂಸೆಯ ಕಾರ್ಯುಗಳಲ್ಲಿ ತೊಡಗಿದ್ದರೂ ಸಿದ್ದರಾಮಯ್ಯನವರು ಮತ್ತು ಖರ್ಗೆಯವರು ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಸುಮ್ಮನಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ವ್ಯಕ್ತಿಯ ವಿರುದ್ಧ ಮತ್ತು ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ ವ್ಯಕ್ತಿಗಳನ್ನು ಪಾಲಿಸಿಕೊಂಡು, ಪೋಷಿಸಿಕೊಂಡು ಬಂದಿರುವ ಈ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಆರ್‌ಎಸ್‌ಎಸ್ ಇಂಥ ಗೊಡ್ಡು ಬೆದರಿಕೆಗಳನ್ನು ಅನೇಕ ಸಾರಿ ನೋಡಿದೆ. 1948, 1975 ಮತ್ತು 1992 ರಲ್ಲಿ (ಅಲ್ಪಕಾಲ) ನಿಷೇಧ ಎದುರಿಸಿದ್ದ ಈ ಸಂಘಟನೆ ಪ್ರತಿ ಸಾರಿಯೂ ಕಾನೂನಿನ ಸಮರದಲ್ಲಿ ಗೆಲುವು ಸಾಧಿಸಿ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಿದೆ. ಆದರೂ ಖರ್ಗೆಯವರು ಯಾವ ಹುಂಬ ಧೈರ್ಯದ ಮೇಲೆ ಇಂಥ ಮಾತು ಆಡುತ್ತಾರೆ ಎನ್ನುವುದು ತಿಳಿಯದು. ಇತಿಹಾಸ ತಿಳಿದವರು ಇಂಥ ಆಲೋಚನೆಯನ್ನು ಕನಸಿನಲ್ಲಿಯೂ ಮಾಡಲು ಸಾಧ್ಯವಿಲ್ಲ. ಆದರೆ, ಅಧಿಕಾರ ಶಾಶ್ವತ ಎಂಬ ದುರಹಂಕಾರದಲ್ಲಿ ಮತ್ತು ತಮ್ಮ ತಂದೆ ಎಐಸಿಸಿ ಅಧ್ಯಕ್ಷರು ಎಂಬ ಭಂಡತನದಲ್ಲಿ ಪ್ರಿಯಾಂಕ್ ಖರ್ಗೆ ಹೀಗೆ ಮಾತನಾಡುತ್ತಿದ್ದಾರೆ. ಅವರು ತಮ್ಮ ಇಲಾಖೆಯಲ್ಲಿ ಏನು ಕೆಲಸ ಆಗಿದೆ ಎಂದು ಒಂದು ಕ್ಷಣ ನೋಡಿದ್ದಾರೆ ಇಂಥ ಅವಿವೇಕದ ಮಾತು ಅವರ ಬಾಯಿಯಿಂದ ಬರುತ್ತಿರಲಿಲ್ಲ ಎಂದು ಸುರೇಶಗೌಡರು ಚುಚ್ಚಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ದೇಶಪ್ರೇಮವೂ ಇಲ್ಲ. ಹಿಂದೂಗಳನ್ನು ಕಂಡರೆ ಅವರಿಗೆ ಆಗುವುದೂ ಇಲ್ಲ. ಅದಕ್ಕಾಗಿಯೇ ಆರ್.ಎಸ್.ಎಸ್ ಸಂಘಟನೆಯನ್ನು ನಿಷೇಧಿಸುವ ಕುರಿತು ಅವರು ಮತ್ತೆ ಮತ್ತೆ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷ ಲಾಗಾಯತಿನಿಂದ ಮಾಡಿಕೊಂಡು ಬಂದಿರುವ ಮುಸ್ಲಿಂ ತುಷ್ಟೀಕರಣದ ಮುಂದುವರಿದ ಕಥೆಯಾಗಿದೆ. ಇಂಥ ನಡೆಗಳಿಂದ ಸಮಾಜ ವಿಘಟನೆಯಾಗುತ್ತದೆ, ಹಿಂದೂಗಳು ಒಗ್ಗಟ್ಟಾಗುತ್ತಾರೆ ಎಂಬ ಕನಿಷ್ಠ ಜ್ಞಾನವೂ ಪ್ರಿಯಾಂಕ್ ಅವರಿಗಾಗಲೀ ಅವರ ನೇತಾರರಾದ ಸಿದ್ದರಾಮಯ್ಯ ಅವರಿಗಾಗಲೀ ಇದ್ದಂತೆ ಇಲ್ಲ ಎಂದು ಅವರು ನುಡಿದಿದ್ದಾರೆ.ಕಾನೂನಿನ ಬೆಂಬಲವೇ ಇಲ್ಲದ ಇಂಥ ವಿಚಾರಗಳನ್ನು ಮಾಡಬಾರದು ಎಂದು ಇದನ್ನು ತಮ್ಮ ಪುತ್ರ ಪ್ರಿಯಾಂಕ್ ಅವರಿಗೆ ಮಲ್ಲಿಕಾರ್ಜನ ಖರ್ಗೆ ಅವರು ಕಿವಿಮಾತು ಹೇಳಬೇಕು. ಇಲ್ಲವಾದರೆ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಗಂಟು ಮೂಟೆ ಕಟ್ಟಿ ಬಂಗಾಲ ಉಪಸಾಗರಕ್ಕೆ ಹಾಕುವುದು ಗ್ಯಾರಂಟಿ ಎಂದು ಸುರೇಶಗೌಡರು ಭವಿಷ್ಯ ನುಡಿದಿದ್ದಾರೆ.