ಶಾಸಕ ಹೇಳಿಕೆ, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ರಾಜ್ಯದ ಕಾಂಗ್ರೆಸ್ ಸರ್ಕಾರ ಆಡಳಿತ ಅವಧಿಯಲ್ಲಿ ಬಿಜೆಪಿ ಶಾಸಕರಿಗೆ ಅಷ್ಟೇ ಅಲ್ಲ, ಆಡಳಿತ ಪಕ್ಷದ ಶಾಸಕರಿಗೂ ಅನುದಾನವಿಲ್ಲದೇ, ಅವರಿಗೂ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ತಾಲೂಕಿನ ಇಟಿಗಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಪಂ ಹಾಗೂ ಎಂ.ಪಿ. ಪ್ರಕಾಶ ಕುಟುಂಬದವರ ಸಹಯೋಗದಲ್ಲಿ ನಿರ್ಮಾಣಗೊಂಡ ಶುದ್ಧ ಗಂಗಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಜನ ಫ್ಲೋರೈಡ್‌ಯುಕ್ತ ನೀರು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಲು ಸರ್ಕಾರದಿಂದ ಆಗುತ್ತಿಲ್ಲ. ಗ್ರಾಮಾಂತರ ಪ್ರದೇಶದ ಜನರ ಆರೋಗ್ಯ ಕಾಪಾಡಬೇಕು ಎಂಬ ಉದ್ದೇಶದಿಂದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇಟಿಗಿಯಲ್ಲಿ ₹5 ಲಕ್ಷ ವೆಚ್ಚದ ಶುದ್ಧ ಗಂಗಾ ನೀರಿನ ಘಟಕ ಅನುಷ್ಠಾನ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಮುಂಬರುವ ದಿನಗಳಲ್ಲಿ ಕುಡಿವ ನೀರಿನ ಘಟಕಕ್ಕೆ ಜಾಗ, ಕಟ್ಟಡ ನೀಡುತ್ತೇವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧ ಗಂಗಾ ಘಟಕಗಳನ್ನು ನೀಡಬೇಕು ಎಂದು ಮನವಿ ಮಾಡಿದರು.ಉತ್ತಂಗಿ ಗ್ರಾಮದ ಜನ ಕಳೆದ 2 ವರ್ಷಗಳಿಂದ ಮುದೇನೂರು ಕೆರೆಯ ನೀರನ್ನು ಶುದ್ಧೀಕರಿಸದೇ ನೇರವಾಗಿ ಕುಡಿಯುತ್ತಿದ್ದಾರೆ. ಈ ಗ್ರಾಮಕ್ಕೆ ಮುಂಬರುವ ದಿನಗಳಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡುತ್ತೇನೆ. ಧರ್ಮಸ್ಥಳ ಸಂಘದಿಂದ ಹತ್ತು ಹಲವು ಜನಪರ ಯೋಜನೆಗಳನ್ನು ಡಾ. ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿದ್ದಾರೆ ಎಂದರು.
ಎಂ.ಪಿ. ಪ್ರಕಾಶ ಸಚಿವರಾಗಿದ್ದ ಸಂದರ್ಭದಲ್ಲಿ ನಿರ್ಮಲ ಕರ್ನಾಟಕ ಎಂಬ ಯೋಜನೆ ಜಾರಿಗೆ ತಂದು, ಹಳ್ಳಿ ಜನಕ್ಕೆ ಶೌಚಾಲಯ ನಿರ್ಮಿಸಿಕೊಟ್ಟರು. ಕ್ಷೇತ್ರದ ಬಹುಪಾಲು ಭಾಗಕ್ಕೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆ ಮಾಡಿದ್ದರು. ಧರ್ಮಸ್ಥಳ ಸಂಘದವರು ಶುದ್ಧ ಗಂಗಾ ಘಟಕ ನಿರ್ಮಿಸಿದ್ದಾರೆ ಎಂದರು.