ಟಿಎಪಿಸಿಎಂಎಸ್, ಮನ್ಮುಲ್ ಚುನಾವಣೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗದಷ್ಟು ದುರ್ಬಲ, ಟೀಕೆ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಮುಂಬರುವ ಎಂಡಿಸಿಸಿ ಬ್ಯಾಂಕ್ ಚುನಾವಣೆ ಗಮನದಲ್ಲಿರಿಸಿಕೊಂಡು ಕಾಂಗ್ರೆಸ್ ಪಕ್ಷ ಸಹಕಾರ ಸಂಘಗಳ ಚುನಾವಣೆಯಲ್ಲಿ ಅಧಿಕಾರಿಗಳ ಮೂಲಕ ರಾಜಕೀಯ ಮಾಡುತ್ತಿದೆ ಎಂದು ತಾಲೂಕು ಜೆಡಿಎಸ್ ಮುಖಂಡರು ಆರೋಪಿಸಿದರು.
ತಾಲೂಕು ಜೆಡಿಎಸ್ ರೈತಮೋರ್ಚಾ ಘಟಕದ ಅಧ್ಯಕ್ಷ ಬೂಕನಕೆರೆ ಹುಲ್ಲೇಗೌಡ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರು, ಕ್ಷೇತ್ರದ ಶಾಸಕ ಎಚ್.ಟಿ.ಮಂಜು ವಿರುದ್ಧ ಅನಗತ್ಯ ಟೀಕೆ ಮಾಡಿ ಅಪಪ್ರಚಾರ ಮಾಡುತ್ತಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಕಾಂಗ್ರೆಸ್ಸಿಗರ ನಡೆಯನ್ನು ಖಂಡಿಸಿದರು.ಈ ವೇಳೆ ಮಾತನಾಡಿದ ಹುಲ್ಲೇಗೌಡ, ಜೆಡಿಎಸ್ ಪಕ್ಷಕ್ಕೆ ಸೇರಿದ ಹೊಸಹೊಳಲು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರೊಬ್ಬರು ತಾಲೂಕು ಕಚೇರಿಯಿಂದಲೇ ಜಾತಿ ಪ್ರಮಾಣ ಪತ್ರ ಪಡೆದು ಈ ಹಿಂದಿನ ಆಡಳಿತ ಮಂಡಳಿಗೂ ಆಯ್ಕೆಯಾಗಿದ್ದಾರೆ. ಅವರ ಶಾಲಾ ದಾಖಲಾತಿ ಪ್ರಮಾಣ ಪತ್ರದ ಆಧಾರದ ಮೇಲೆ ತಾಲೂಕು ಆಡಳಿತ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದೆ ಎಂದರು.
ಯಾರೋ ದೂರು ನೀಡದರೆಂಬ ಕಾರಣ ಒಡ್ಡಿ ಜಾತಿ ಪ್ರಮಾಣ ಪತ್ರವನ್ನು ರದ್ದು ಪಡಿಸುವ ಅಧಿಕಾರ ಸಹಕಾರ ಇಲಾಖೆಯ ಯಾವುದೇ ಅಧಿಕಾರಿಗಳಿಗೂ ಇಲ್ಲ. ಜಾತಿ ಪ್ರಮಾಣ ಪತ್ರ ಸುಳ್ಳಾಗಿದ್ದರೆ ಅದನ್ನು ಪರಿಶೀಲಿಸಿ ರದ್ದುಪಡಿಸುವ ಅಧಿಕಾರ ತಹಸೀಲ್ದಾರರಿಗೆ ಮಾತ್ರ ಇದೆ. ಆದರೆ ಪಾಂಡವಪುರ ಸಹಕಾರ ಇಲಾಖೆ ಉಪ ನಿಬಂಧಕರು ರಾಜಕೀಯ ಏಜೆಂಟರಂತೆ ಕೆಲಸ ಮಾಡಿ ಅರ್ಹ ವ್ಯಕ್ತಿಯ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ದೂರಿದರು.ಅಲ್ಲದೇ ತಾಲೂಕಿನ ಮುರುಕನಹಳ್ಳಿ ಮತ್ತು ಸೋಮನಹಳ್ಳಿ ಸಹಕಾರ ಸಂಘಗಳ ವಿಚಾರದಲ್ಲೂ ತಪ್ಪು ನಿರ್ಧಾರ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರವಾಗಿ ಕೆಲಸ ಮಾಡಿದ್ದಾರೆ. ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ರಾಜಕೀಯದ ಆಸೆ ಇದ್ದರೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಯಾವುದಾದರೊಂದು ರಾಜಕೀಯ ಪಕ್ಷ ಸೇರಿ ರಾಜಕಾರಣ ಮಾಡಬೇಕು. ಇದನ್ನು ಬಿಟ್ಟು ಸರ್ಕಾರಿ ನಿಯಮಗಳನ್ನು ತಿರುಚಿ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಯ ಅಧಿಕಾರ ದುರ್ಬಳಕೆ ಪ್ರಶ್ನಿಸಿ ಪ್ರತಿಭಟನೆ ಮಾಡಿದ ಶಾಸಕ ಎಚ್.ಟಿ.ಮಂಜು ಅವರನ್ನು ಟೀಕಿಸುವ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ದುರಾಡಳಿತ ಮಾಡುತ್ತಿರುವುದನ್ನು ಒಪ್ಪಿಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ನಮ್ಮ ಶಾಸಕರು ಪಾಂಡವಪುರ ಉಪ ನಿಬಂಧಕರ ಕಚೇರಿ ಮುಂದೆ ಶಾಂತಿಯುತ ಪ್ರತಿಭಟನೆ ಮಾಡಿದ್ದಾರೆಯೇ ವಿನಹಃ ಯಾವುದೇ ರೀತಿಯ ದಾಂದಲೆ ಮಾಡಿಲ್ಲ ಎಂದು ತೀರುಗೇಟು ನೀಡಿದರು.ಮನ್ಮುಲ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದನ್ನು ಮುಂದಿಟ್ಟು ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಶಾಸಕ ಎಚ್.ಟಿ.ಮಂಜು ಅವರ ವರ್ಚಸ್ಸು ಕುಸಿದಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಮನ್ಮುಲ್ ಚುನಾವಣೆ ಅನಂತರ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಕ್ಷೇತ್ರದ ಮತದಾರರು ಜೆಡಿಎಸ್ ಅಭ್ಯರ್ಥಿ ಕೇಂದ್ರ ಸಚಿವ ಕುಮಾರಣ್ಣನಿಗೆ ಅಧಿಕ ಮತ ನೀಡಿ ಆಶೀರ್ವದಿಸುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ವರ್ಚಸ್ಸು ಮತ್ತಷ್ಟು ಹೆಚ್ಚಿದೆ ಎನ್ನುವುದನ್ನು ಕಾಂಗ್ರೆಸ್ಸಿಗರಿಗೆ ತೋರಿಸಿಕೊಟ್ಟಿದ್ದಾರೆ ಎಂದರು.
ಈ ಹಿಂದೆ ನಡೆದ ಟಿಎಪಿಸಿಎಂಎಸ್ ಚುನಾವಣೆ, ಮನ್ಮುಲ್ ಚುನಾವಣೆಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗದಷ್ಟು ದುರ್ಬಲಗೊಂಡಿರುವ ಕಾಂಗ್ರೆಸ್ಸಿಗರು, ಜೆಡಿಎಸ್ ಬಗ್ಗೆ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ ಅಧ್ಯಕ್ಷರು ಜಿಲ್ಲಾ ಕೇಂದ್ರದಲ್ಲಿದ್ದು ಪಕ್ಷದ ಕೆಲಸ ಮಾಡುವ ಬದಲು ವಾರಕ್ಕೆ ಮೂರ್‍ನಾಲ್ಕು ದಿನ ಕೆ.ಆರ್.ಪೇಟೆಗೆ ಬರುವುದಾದರೂ ಏಕೆ? ಮೊದಲು ತಮ್ಮ ಪಕ್ಷದ ಕಾರ್ಯಕರ್ತರ ಕಷ್ಟ- ಸುಖ ಕೇಳಲಿ ಎಂದು ಸಲಹೆ ನೀಡಿದರು.ಸುದ್ಧಿಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯರಾದ ಮಲ್ಲೇನಹಳ್ಳಿ ಮೋಹನ್, ವಳಗೆರೆಮೆಣಸ ಮಹಾದೇವೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ಮಹಾದೇವು, ಜೆಡಿಎಸ್ ವಕ್ತಾರ ಅಲೋಕ್ ಚಂದ್ರ, ಮುಖಂಡರಾದ ಮಾಂಬಳ್ಳಿ ಕಾಂತರಾಜು, ಬ್ಯಾಲದಕೆರೆ ಮರೀಗೌಡ, ಸಿಂದಘಟ್ಟ ಗಿರೀಶ್, ಶಾಸಕರ ಮಾಧ್ಯಮ ಕಾರ್ಯದರ್ಶಿ ಮೊಸಳೇಕೊಪ್ಪಲು ದಿನೇಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿ ನೂರಾರು ಮುಖಂಡರು ಇದ್ದರು.