24ರಂದು ಬಿ.ಪಿ.ಹರೀಶ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

KannadaprabhaNewsNetwork |  
Published : Jan 22, 2026, 02:00 AM IST
21 HRR. 01 ಹರಿಹರದ ಪತ್ರಿಕಾ ಭವನದಲ್ಲಿ ಕಾಂಗ್ರೆಸ್‌ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಧಿಕಾರಿಗಳ ವಿರುದ್ಧ ವಿನಾಕಾರಣ ನಿಂದನೆ ಮಾಡುತ್ತಿರುವ ಶಾಸಕ ಬಿ.ಪಿ. ಹರೀಶ್ ವರ್ತನೆ ಖಂಡಿಸಿ, ಕಾಂಗ್ರೆಸ್ ಪಕ್ಷದಿಂದ ಜ.24ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್.ಎಚ್. ಶ್ರೀನಿವಾಸ್ ನಂದಿಗಾವಿ ಹೇಳಿದ್ದಾರೆ.

- ಜಿಲ್ಲಾ ಸಚಿವ, ಅಧಿಕಾರಿಗಳ ವಿರುದ್ಧ ವಿನಾಕಾರಣ ನಿಂದನೆ: ಶ್ರೀನಿವಾಸ್‌ ಆರೋಪ

- - -

ಕನ್ನಡಪ್ರಭ ವಾರ್ತೆ ಹರಿಹರ

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಧಿಕಾರಿಗಳ ವಿರುದ್ಧ ವಿನಾಕಾರಣ ನಿಂದನೆ ಮಾಡುತ್ತಿರುವ ಶಾಸಕ ಬಿ.ಪಿ. ಹರೀಶ್ ವರ್ತನೆ ಖಂಡಿಸಿ, ಕಾಂಗ್ರೆಸ್ ಪಕ್ಷದಿಂದ ಜ.24ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್.ಎಚ್. ಶ್ರೀನಿವಾಸ್ ನಂದಿಗಾವಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಮಾತನಾಡಿದ ಅವರು, ಬೃಹತ್‌ ಹೋರಾಟದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಅಂದು ಬೆಳಗ್ಗೆ 11 ಗಂಟೆಗೆ ಪಕ್ಕೀರ್ ಸ್ವಾಮಿ ಮಠದಿಂದ ಗಾಂಧಿ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ ಎಂದರು.

ಕಳೆದ 30 ವರ್ಷಗಳಿಂದ ರಾಜಕಾರಣದಲ್ಲಿರುವ ಹರೀಶ್ ಅವರಿಗೆ ನಗರಕ್ಕೆ ಶಾಶ್ವತ ಕುಡಿಯುವ ನೀರು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತರಲಾಗಲಿಲ್ಲ. ಸಚಿವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸಬೇಕಾದ ಜನಪ್ರತಿನಿಧಿಗಳು ಕೇವಲ ರಾಜಕಾರಣ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಇವರ ನಡೆಯಿಂದ ಮತದಾರರು ವ್ಯಥೆಪಡುವಂತಾಗಿದೆ ಎಂದರು.

ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ ಮಾತನಾಡಿ, ಶಾಸಕರ ನಡವಳಿಕೆ ಒಬ್ಬ ಗ್ರಾ.ಪಂ. ಸದಸ್ಯನಿಗಿಂತ ಕೀಳಾಗಿದ್ದು, ಅಧಿಕಾರಿಗಳನ್ನು ಬೆದರಿಸುವ ತಂತ್ರ ಬಿಟ್ಟು ಅಭಿವೃದ್ಧಿ ಕಡೆ ಗಮನಹರಿಸಲಿ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ಇನ್ನೊಬ್ಬರ ತಟ್ಟೆಯ ಇಲಿ ಬಗ್ಗೆ ಮಾತನಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜನರೇ ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಕುಮಾರ್ ಮಾತನಾಡಿ, ದಾವಣಗೆರೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿದ ಶಾಮನೂರು ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಅವರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಸಿ.ಎನ್. ಹುಲಿಗೇಶ ಮಾತನಾಡಿ, ಈ ಹಿಂದೆ ಬಿಜೆಪಿ ಸಂಸದರ ಸಹೋದರರ ಮೇಲೆ ಮೈನಿಂಗ್ ಹಗರಣದ ಆರೋಪ ಕೇಳಿಬಂದಾಗ ಹರೀಶ್ ಎಲ್ಲಿದ್ದರು? ಅಕ್ರಮ ಮಣ್ಣಿನ ಬಗ್ಗೆ ಶಾಸಕರ ಹೇಳಿಕೆ, ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಾಗಿದೆ. ಶಾಸಕರು ಹರಿಹರ ಕ್ಷೇತ್ರಕ್ಕೆ ಶಾಪವಾಗಿದ್ದಾರೆ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಎಂ.ಬಿ. ಆಬಿದ್ ಅಲಿ, ಮುಖಂಡರಾದ ಮಂಜುನಾಥ್ ಪಟೇಲ್, ರಜನಿಕಾಂತ್, ಗಂಗಾಧರ್ ಪೂಜಾರ್, ಹನಗವಾಡಿ ಮಂಜುನಾಥ್, ರಾಜಣ್ಣ ಗೋವಿನಹಾಳ್, ನಾಗಣ್ಣ, ವಿಜಯ್‌ಕುಮಾರ್, ಬಿ.ಬಿ. ಮಲ್ಲೇಶ್, ರಾಘವೇಂದ್ರ, ತಿಪ್ಪೇಶಿ, ನಜೀರ್ ಹುಸೇನ್‌ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

- - -

-21HRR.01: ಹರಿಹರದ ಪತ್ರಿಕಾ ಭವನದಲ್ಲಿ ಕಾಂಗ್ರೆಸ್‌ ಮುಖಂಡರು ಸುದ್ದಿಗೋಷ್ಠಿ ನಡೆಸಿ, ಹರಿಹರ ಶಾಸಕರ ವರ್ತನೆ ವಿರುದ್ಧ ಪ್ರತಿಭಟನೆ ನಡೆಸುವ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ