ಸಚಿವ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

KannadaprabhaNewsNetwork |  
Published : Sep 11, 2026, 02:15 AM IST
ಹಾವೇರಿ ನಗರದ ಎಂ.ಎಂ. ವೃತ್ತದಲ್ಲಿ ಸಚಿವ ಸತೀಶ ಜಾರಕಿಹೊಳಿ ಮನೆ ಹಾಗೂ ವಿವಿಧೆಡೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲಿನ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಖಂಡಿಸಿ ಗುರುವಾರ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲಿನ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಖಂಡಿಸಿ ಗುರುವಾರ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಕಾಗಿನೆಲೆ ರಸ್ತೆಯ ಮುರುಘರಾಜೇಂದ್ರ ಮಠದಿಂದ ಪ್ರತಿಭಟನಾ ಮೆರವಣಿಗೆ ಕಾಗಿನೆಲೆ ಕ್ರಾಸ್, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗವಾಗಿ ಎಂ.ಎಂ. ವೃತ್ತವನ್ನು ತಲುಪಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಇಡಿ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ, ದ್ವೇಷದ ರಾಜಕಾರಣ ಕೊನೆಗೊಳ್ಳಲಿ, ಪ್ರಜಾಪ್ರಭುತ್ವದ ಆಶಯ ಉಳಿಯಲಿ, ಅಹಿಂದ ನಾಯಕನ ವಿರುದ್ಧ ನಡೆಯುತ್ತಿರುವ ರಾಜಕೀಯ ಕುತಂತ್ರ ನಿಲ್ಲಿಸುವುದು ಸೇರಿದಂತೆ ಕೇಂದ್ರ ಸರ್ಕಾರ ಹಾಗೂ ಇಡಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುತ್ತಿದೆ. ಜನಪರವಾಗಿ ಕೆಲಸ ಮಾಡುತ್ತಿರುವ ಅಹಿಂದ ನಾಯಕರನ್ನು ರಾಜಕೀಯವಾಗಿ ಹಣಿಯುವ ಉದ್ದೇಶದಿಂದ ಇಡಿ ದಾಳಿ ನಡೆಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ನಡೆ. ರಾಜಕೀಯ ದ್ವೇಷ ಸಾಧನೆಗಾಗಿ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವ ಪ್ರವೃತ್ತಿ ನಿಲ್ಲಬೇಕು ಎಂದು ಆಗ್ರಹಿಸಿದರು.

ಸತೀಶ ಜಾರಕಿಹೊಳಿ ಅವರು ಜನರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ನಾಯಕರು. ಅವರ ವಿರುದ್ಧ ಯಾವುದೇ ರೀತಿಯ ರಾಜಕೀಯ ಕುತಂತ್ರ ನಡೆಸಿದರೂ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ. ಇಂತಹ ದಾಳಿಗಳ ಮೂಲಕ ನಾಯಕರನ್ನು ಬೆದರಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುವುದು ಸರಿಯಲ್ಲ ಎಂದು ಎಚ್ಚರಿಸಿದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿ, ಇಡಿ ದಾಳಿಯನ್ನು ಉಗ್ರವಾಗಿ ಖಂಡಿಸುತ್ತೇವೆ. ಬಡವರು, ದೀನದಲಿತರು ಹಾಗೂ ಶೋಷಿತರ ಪರವಾಗಿ ಸದಾ ಧ್ವನಿ ಎತ್ತುವ ಸತೀಶ ಜಾರಕಿಹೊಳಿ ಅವರನ್ನು ಗುರಿಯಾಗಿಸಿಕೊಂಡು ಸುಮಾರು 18 ಕಡೆಗಳಲ್ಲಿ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಕ್ರಮವಾಗಿದೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಆನವಟ್ಟಿ ಮಾತನಾಡಿ, ವಿರೋಧ ಪಕ್ಷದ ನಾಯಕರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದವರು ಇಡಿ, ಐಟಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಕಾಂಗ್ರೆಸ್ ಪಕ್ಷ ಇಂತಹ ಬೆದರಿಕೆಗಳಿಗೆ ಎಂದಿಗೂ ಬಗ್ಗುವುದಿಲ್ಲ. ಜನರ ಹಕ್ಕು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದರು.

ಪಕ್ಷದ ಜಿಲ್ಲಾ ವಕ್ತಾರ ಡಾ. ಸಂಜಯ ಡಾಂಗೆ, ಪ್ರೇಮಾ ಪಾಟೀಲ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಶಹರ ಕಾಂಗ್ರೆಸ್ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ಶಂಕರ ಮೆಹರವಾಡೆ, ಶ್ರೀಧರ ದೊಡ್ಡಮನಿ, ಮುನ್ನಾಖಾನ್ ಪಠಾಣ, ಸಿ.ಎಸ್. ಲಕ್ಷ್ಮೇಶ್ವರಮಠ, ನಾಗರಾಜ ಬಡೆಮ್ಮನವರ, ನಾಗರಾಜ ತಳವಾರ, ಬಸವರಾಜ ತಳವಾರ, ಏಳುಕೋಟೆಪ್ಪ ಪಾಟೀಲ, ಬಾಬುಸಾಬ್ ಮೋಮಿನಗಾರ, ಶಿವರಾಜ ಮತ್ತಿಹಳ್ಳಿ, ಶೆಟ್ಟಿ ವಿಭೂತಿ, ಪ್ರಕಾಶ ಬಣಕಾರ, ಪುಟ್ಟಪ್ಪ ಮರಿಯಮ್ಮನವರ, ಬಿ.ಎಸ್. ಪಾಟೀಲ, ಜಮೀರ ಜಿಗರಿ, ಅತಾವುಲ್ಲಾ ಖಾಜಿ, ರಮೇಶ ಹರಿಜನ, ಗುಡ್ಡಪ್ಪ ಜಲದಿ, ರಾಧಾ ಸವಣೂರ, ವೈಶಾಲಿ ಹಿರೇಮಠ, ರತ್ನಾ ಶಿಡಗನಾಳ, ಗೀತಾ ಪ್ರಕಾಶ, ಸುಮಂಗಲಾ ಇಪ್ಪಿಕೊಪ್ಪ, ಲಲಿತಮ್ಮ ಹುಗ್ಗಿ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಎಸ್‌ನಿಂದ ಹಾವೇರಿ ಜಿಲ್ಲೆ ಬರಗಾಲ ಘೋಷಣೆಗೆ ಒತ್ತಾಯಿಸಿ೨೧ರಂದು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ, ಬೈಕ್ ರ‍್ಯಾಲಿ
ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿಯಲ್ಲಿ ಮಹಿಳೆ ಸಹಭಾಗಿತ್ವ ಅತ್ಯುತ್ತಮ ಬೆಳವಣಿಗೆ