ದರ ಏರಿಕೆ, ನೀಟ್‌ ಅಕ್ರಮ, ನರೇಗಾ ಹೆಸರು ಬದಲಾವಣೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

KannadaprabhaNewsNetwork |  
Published : May 16, 2026, 12:15 AM IST
ಅಅ | Kannada Prabha

ಸಾರಾಂಶ

ಚಿಕ್ಕಮಗಳೂರುಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ, ನೀಟ್‌ ಪರೀಕ್ಷೆ ಅಕ್ರಮ, 15ನೇ ಹಣಕಾಸು ಹಾಗೂ ನರೇಗಾ ಸೇರಿದಂತೆ ಕೇಂದ್ರ ಸರ್ಕಾರದ ಸಹಯೋಗದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ನಿಂದ ಶುಕ್ರವಾರ ನಗರದ ಅಜಾದ್ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಕಾಂಗ್ರೆಸ್‌ನಿಂದ ನಗರದ ಅಜಾದ್ ಪಾರ್ಕ್‌ನಲ್ಲಿ ಹೋರಾಟ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ, ನೀಟ್‌ ಪರೀಕ್ಷೆ ಅಕ್ರಮ, 15ನೇ ಹಣಕಾಸು ಹಾಗೂ ನರೇಗಾ ಸೇರಿದಂತೆ ಕೇಂದ್ರ ಸರ್ಕಾರದ ಸಹಯೋಗದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ನಿಂದ ಶುಕ್ರವಾರ ನಗರದ ಅಜಾದ್ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್‌ ಭಂಡಾರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಪಂಚ ರಾಜ್ಯದ ಚುನಾವಣೆಯಲ್ಲಿ ದೊಡ್ಡ ರ್‍ಯಾಲಿ ಮಾಡಿ ಬೆಂಗಾವಲು ಪಡೆ ಬಳಸಿ ಚುನಾವಣೆ ಫಲಿತಾಂಶ ಬಂದ ಬಳಿಕ ದೇಶದ ಜನರಿಗೆ ಪೆಟ್ರೋಲ್‌, ಡೀಸಲ್‌ ದರ ಏರಿಸಿದ್ದಾರೆ. ಸ್ಪಷ್ಟವಾಗಿ ಅಧಿಕಾರ ದುರ್ಬಳಕೆಯನ್ನು ಜನರ ಮುಂದೆ ಇಟ್ಟಿದ್ದಾರೆ ಎಂದರು.

ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಷಾ ಅವರು ಇದೀಗ, ಇತರೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ರಾಜ್ಯದ ಯೋಜನೆಗಳನ್ನೇ ಕಾಪಿ ಮಾಡಲಾಗಿದೆ. ಆದರೆ, ಕಾಂಗ್ರೆಸ್‌ನ ಮಹಾತ್ಮ ಗಾಂಧಿಜೀ ಅವರ ಮನರೇಗಾ ಯೋಜನೆ ಹೆಸರನ್ನು ಏಕೆ ಬದಲಾವಣೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಗಾಂಧಿಜೀ ಹೆಸರಿರುವ ಒಂದೇ ಕಾರಣಕ್ಕೆ ಇದೀಗ ಮನರೇಗಾ ಯೋಜನೆ ಹೆಸರು ಬದಲಾವಣೆಗೆ ಮುಂದಾಗಿದ್ದೀರಾ? ಹೆಸರು ಬದಲಾಯಿಸಿದರೂ ಯೋಜನೆಗೆ ಒಂದು ಒಂದು ರುಪಾಯಿ ಅನುದಾನ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಗ್ರಾಪಂಗಳಿಗೆ ನೀಡ ಬೇಕಾದ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯದಿಂದ ಜಿಎಸ್‌ಟಿ ಹೆಸರಲ್ಲಿ ₹5-6 ಲಕ್ಷ ಕೋಟಿ ವಾರ್ಷಿಕ ತೆರಿಗೆಯಲ್ಲಿ ನ್ಯಾಯ ಬದ್ಧ ಪಾಲು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಎಚ್‌.ಡಿ. ತಮ್ಮಯ್ಯ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮೊದಲಾದವರು ಇತ್ತೀಚಿಗೆ ನಡೆದ ಪಂಚ ರಾಜ್ಯದ ಚುನಾವಣೆಗೆ ಮೊದಲು ದೇಶದ ಜನರಿಗೆ ನೀಡಿದ್ದ ಒಂದು ರೀತಿ ಹೇಳಿಕೆ, ಭರವಸೆಯನ್ನು ತಿರುಚಿ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬಡವರು ಮತ್ತು ಕೂಲಿಕಾರರ ಮೇಲೆ ಕಾಳಜಿ ಇದ್ದರೆ 2005ರಲ್ಲಿ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಜಾರಿಗೊಳಿಸಿದ ನರೇಗಾ ಯೋಜನೆ ಹೆಸರು ಬದಲಾವಣೆ ಮಾಡುತ್ತಿರಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಜಲಜೀವನ್‌ ಮಿಷನ್‌ (ಜೆಜೆಎಂ), ನರೇಗಾ ಯೋಜನೆ ಒಂದು ರು, ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಯೋಜನೆ ಸಂಪೂರ್ಣ ಅನುದಾನ ರಾಜ್ಯದ ಕಾಂಗ್ರೆಸ್‌ ಸರ್ಕಾರ ನೀಡಿದೆ. ಕೂಡಲೇ ಕೇಂದ್ರ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ನರೇಗಾ ಯೋಜನೆಯಡಿ ರೈತರಿಗೆ ಹಲವು ಸೌಲಭ್ಯ ನೀಡಲಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರ ನರೇಗಾ ಹೆಸರು ಮತ್ತು ಯೋಜನೆಯಲ್ಲಿ ಹಲವು ಮಾರ್ಪಾಡು ಮಾಡಿ ರೈತರಿಗೆ ಯಾವುದೇ ಸೌಲಭ್ಯ ದೊರೆಯದಂತೆ ಮಾಡಲಾಗಿದೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕುತಂತ್ರ ದೇಶದ ಯುವ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಿ, ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿತ್ವಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಆಂಶುಮಂತ್ ಮಾತನಾಡಿ, ಕಾಂಗ್ರೆಸ್‌ ಬಡವರ ಬದುಕು ಕಟ್ಟಿಕೊಡುವ ಪಕ್ಷ. ಆದರೆ, ಬಿಜೆಪಿ ಭಾವನೆಗಳ ಕೆರಳಿಸಿ ಬದುಕನ್ನು ನಾಶ ಮಾಡುತ್ತಿದೆ. ಚಿಕ್ಕಮಗಳೂರು ಜಿಲ್ಲೆಗೆ ಬರಬೇಕಾದ ನರೇಗಾ ಯೋಜನೆ ₹87 ಕೋಟಿ 15ನೇ ಹಣಕಾಸು ಆಯೋಗದ ₹250 ಕೋಟಿ ಬಾಕಿ ಬಿಡುಗಡೆಗೆ ಸಿ.ಟಿ.ರವಿ ಹಾಗೂ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.ಬಿಜೆಪಿ ಬೆಲೆ ಏರಿಕೆ ಮೂಲಕ ಮಹಿಳೆಯರ, ಬಡವರ ಬದುಕನ್ನು ನಾಶ ಮಾಡಲಾಗಿದೆ. ಯುವಕರ ಭವಿಷ್ಯಕ್ಕೆ ಆದ್ಯತೆ ನೀಡ ಬೇಕಾದ ಕೇಂದ್ರ ಸರ್ಕಾರ ನೀಟ್ ಪರೀಕ್ಷೆ ರದ್ದುಪಡಿಸಿ, ನೀಟ್‌ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಬಡ್ತಿ ನೀಡುವ ಮೂಲಕ ಈ ಅಕ್ರಮದಲ್ಲಿ ಬಿಜೆಪಿ ಶಾಮಿಲಾಗಿರುವ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು.ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಕೆಪೆಕ್ ಅಧ್ಯಕ್ಷ ಬಿ.ಎಚ್.ಹರೀಶ್, ಜಿಪಂ ಮಾಜಿ ಸದಸ್ಯ ಅನಂತು, ಪಕ್ಷದ ಮುಖಂಡರಾದ ಎಂ.ಎಲ್.ಮೂರ್ತಿ ಮೊದಲಾದವರಿದ್ದರು.

--ಕೋಟ್‌--

ಪಂಚರಾಜ್ಯದ ಚುನಾವಣೆ ಬಳಿಕ ಕೇಂದ್ರ ಸರ್ಕಾರ ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ದರ, ಪೆಟ್ರೋಲ್‌, ಡೀಸಲ್‌ ಬೆಲೆ ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರಕ್ಕೆ ತಾಕತ್ತು ಇದ್ದಿದ್ದರೆ, ಚುನಾವಣೆ ಪೂರ್ವದಲ್ಲಿ ದರ ಏಕೆ ಮಾಡಬೇಕಿತ್ತು.

- ಎಚ್‌,ಡಿ.ತಮ್ಮಯ್ಯ, ಶಾಸಕ, ಚಿಕ್ಕಮಗಳೂರು

--

ಶಾಸಕ ತಮ್ಮಯ್ಯ ಫೋಟೊ ಕಡ್ಡಾಯ ಬಳಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

7 ವರ್ಷವಾದರೂ ಪೂರ್ಣಗೊಳ್ಳದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ
ಬೇಲೂರು ಪುರಸಭೆ ನೂತನ ಅಧ್ಯಕ್ಷ ಅಕ್ರಂ ಶರೀಫ್ ರಿಗೆ ಗಾಣಿಗರ ಸಂಘದಿಂದ ಸನ್ಮಾನ