ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ । ಡಿಸಿ ಸತ್ಯಭಾಮಗೆ ಮನವಿ ಸಲ್ಲಿಕೆಕನ್ನಡಪ್ರಭ ವಾರ್ತೆ ಹಾಸನ
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಅವರು, ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತ್ ಕುಮಾರ್ ಹೆಗಡೆ ಸಭೆಯೊಂದರಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ. ರಾಜ್ಯದ ಶಿರಸಿ, ಶ್ರೀರಂಗಪಟ್ಟಣ ಹಾಗೂ ಇತರ ಕಡೆ ಇರುವ ಮಸೀದಿಗಳನ್ನು ಕೆಡವಿ, ಮಂದಿರ ಕಟ್ಟುತ್ತೇವೆ. ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಉದ್ದಟತನದಿಂದ ಕಾನೂನು ಬಾಹಿರ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದರು.
ಇವರ ಹೇಳಿಕೆಗಳು ದೇಶದ ಹಾಗೂ ರಾಜ್ಯದ ದಲಿತರ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆದ ಗಧಾಪ್ರಹಾರವಾಗಿದ್ದು, ಮುಂದಿನ ದಿನದಲ್ಲಿ ದೇಶದಲ್ಲಿ ಮತ್ತು ರಾಜ್ಯಗಳಲ್ಲಿ ಅಶಾಂತಿ ತಲೆದೋರಿ ಕೋಮು ಗಲಭೆಗಳಾಗುವ ಸಂಭವವಿದೆ ಎಂದು ಎಚ್ಚರಿಸಿದರು.ದೇಶದ ಸಂವಿಧಾನಕ್ಕೆ ಮತ್ತು ರಾಜ್ಯದ ಮುಖ್ಯಮಂತ್ರಿಗೆ ಇವರ ಹೇಳಿಕೆಗಳು ಬಹಳ ಮುಜುಗರ ಉಂಟುಮಾಡಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಪಕ್ಷದ ಮುಖಂಡರಾದ ಶ್ರೇಯಾಸ್ ಪಟೇಲ್, ಬನವಾಸೆ ರಂಗಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯರ್ಶಿ ಎಸ್. ಮಂಜುನಾಥ್ ಶರ್ಮ, ತಾರಚಂದನ್, ಅಮ್ಜಾದ್, ಖಡಾಕಡಿ ಫೀರ್ ಸಾಹೇಬ್, ಮಲ್ಲಿಗೆವಾಳ್ ದೇವಪ್ಪ, ಅಶೋಕ್, ಅಬ್ದೂಲ್ ಸಮಾದ್, ಅಬ್ದೂಲ್ ಕಯಿಂ ಉಪಸ್ಥಿತರಿದ್ದರು.ಅನಂತ್ ಕುಮಾರ್ ಹೆಗಡೆ ವಿರುದ್ಧ ಡಿಸಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.