ಕನ್ನಡಪ್ರಭ ವಾರ್ತೆ ಬೆಳಗಾವಿ
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊಂಡ ಸರ್ಕಾರವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೇ ಕಾಂಗ್ರೆಸ್ ಸಾಧನೆಯಾಗಿದೆ ಎಂದು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆರೋಪಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್ ಶೀಟ್ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹಾಲಿನಿಂದ ಹಿಡಿದು ಮದ್ಯದವರೆಗೆ ಬೆಲೆ ಏರಿಕೆ ಮಾಡಲಾಗಿದೆ. ಇತ್ತ ಹಾಲಿನ ದರ, ಅತ್ತ ಮದ್ಯದ ದರ ಹೆಚ್ಚಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪ್ರತಿಯೊಂದು ವಿಧಾನಸಭೆ ಕ್ಷೇತ್ರಗಳಿಗೆ ತಲಾ ₹50 ಲಕ್ಷ ಅನುದಾನ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ₹5 ಲಕ್ಷ ಅನುದಾನವನ್ನು ನೀಡಿಲ್ಲ. ಇದು ಬೇಜವಾಬ್ದಾರಿ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನಿಲುವು ಖಂಡಿಸಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಹಳ ಸಾಧನೆ ಮಾಡಿದೆ. ಜೀವಂತ ಇದ್ದವರ ಮೇಲೂ, ಸತ್ತವರ ಮೇಲೂ ತೆರಿಗೆ ಹಾಕುತ್ತಿದೆ. ಹುಟ್ಟಿನಿಂದ ಸಾವಿನವರೆಗೊ ಸರ್ವವ್ಯಾಪಿ ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತಿದೆ. ಜನ್ಮ ಪ್ರಮಾಣ ಪತ್ರ ಬೆಲೆ ಏರಿಕೆಯಿಂದ ಸ್ಮಶಾನದ ಸೌಧೆಯವರೆಗೂ ಜನರನ್ನು ಕಾಡುತ್ತಿದೆ. ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರದಿಂದಾಗಿ ನೆಮ್ಮದಿಯಿಂದ ಸಾಯಲು ಬಿಡುತ್ತಿಲ್ಲ. ತೆರಿಗೆ ಹೆಚ್ಚಳ ಮಾಡಿರುವುದು ಕಾಂಗ್ರೆಸ್ ಸಾಧನೆಯಾಗಿದೆ ಎಂದರು.ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ತನ್ನ ಎರಡು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಮಾಡಿದೆ. ಇದು ಸಾಧನಾ ಸಮಾವೇಶವಲ್ಲ. ಇದು ಸಂಪಾದನಾ ಸಮಾವೇಶವಾಗಿದೆ. ಕಾಂಗ್ರೆಸ್ ದುರಾಡಳಿತದಲ್ಲಿ ಬೆಲೆ ಏರಿಕೆ ಭಾಗ್ಯ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್ ಶೀಟ್ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ನೀತಿ ವಿರುದ್ಧ ವಿಧಾನಸಭಾ ಒಳಗೂ, ಹೊರಗೂ ಹೋರಾಟ ಮಾಡಲಾಗುತ್ತಿದೆ. ಇದು ಮೊಂಡ ಸರ್ಕಾರ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು.
ಸಂತಿಬಸ್ತವಾಡ ಕುರಾನ ಸುಟ್ಟ ಪ್ರಕರಣದಲ್ಲಿ ಒಂದು ಕೋಮಿನ ಜನರ ಶಾಂತಿ ಸಭೆ ನಡೆಸಲಾಗಿದೆ. ಅಮಾಯಕ ಹಿಂದೂ ಯುವಕರನ್ನು ಬಂಧಿಸಿ, ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ , ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕರಾದ ವಿಶ್ವನಾಥ್ ಪಾಟೀಲ್, ಅರವಿಂದ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ, ರಾಜಶೇಖರ್ ಡೋಣಿ, ಈರಯ್ಯ ಖೋತ್, ಮುರಗೇಂದ್ರಗೌಡ ಪಾಟೀಲ, ಸಚಿನ್ ಕಡಿ, ಹನುಮಂತ ಕೊಂಗಾಲಿ ಮತ್ತಿತರರು ಉಪಸ್ಥಿತರಿದ್ದರು.