- ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಶೆಟ್ಟಿ ಹೇಳಿಕೆ । ವಾರ್ಡ್‌ಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಲು ಸಲಹೆ
ದಾವಣಗೆರೆ ಪಾಲಿಕೆ ಸದಸ್ಯರ ಅವಧಿ ಫೆಬ್ರವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ರಾಜ್ಯ ಸರ್ಕಾರ ಯಾವುದೇ ಸಮಯದಲ್ಲಾದರೂ ಚುನಾವಣೆ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮೆಲ್ಲಾ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಚುನಾವಣೆಗೆ ಸನ್ನದ್ಧವಾಗಿರಬೇಕು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಾಲಿಕೆ ಸದಸ್ಯರು, 2018ರ ಚುನಾವಣೆಯ ಸ್ಪರ್ಧಿಗಳು, ವಾರ್ಡ್ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ-ದಕ್ಷಿಣ ಸೇರಿದಂತೆ ಎಲ್ಲ 45 ವಾರ್ಡ್‌ಗಳಲ್ಲೂ ಪಕ್ಷವು ಚುನಾವಣೆಗೆ ಸಜ್ಜಾಗಿರಬೇಕು ಎಂದರು.ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ನಿರ್ದೇಶನದಂತೆ ನಾವು ಪಾಲಿಕೆ ಚುನಾವಣೆಗೆ ಸಜ್ಜಾಗಿದ್ದೇವೆ. ನಮ್ಮೆಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಮುಖಂಡರೊಂದಿಗೆ ಸೇರಿ, ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ಈಗಾಗಲೇ ದಾವಣಗೆರೆ ಪಾಲಿಕೆ ಚುನಾವಣೆಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಸದಸ್ಯರು ಮತ್ತು ಮುಖಂಡರ ಸಂಘಟನೆಯ ಕಡೆಗೂ ನಿಗಾ ವಹಿಸಲಾಗಿದೆ. ಪಾಲಿಕೆ ಚುನಾವಣೆಯಲ್ಲಿ ಮತ್ತೆ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ನಮ್ಮ ನಾಯಕರ ಕೈಗಳನ್ನು ಮತ್ತಷ್ಟು ಬಲಪಡಿಸೋಣ ಎಂದರು.
- - -
- ಕೆ.ಚಮನ್ ಸಾಬ್, ಮೇಯರ್
ದಾವಣಗೆರೆ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪಕ್ಷದ ದಕ್ಷಿಣ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ದಿನೇಶ ಶೆಟ್ಟಿ ಮಾತನಾಡಿದರು.