ಶಿರಸಿ:
ಕಾಂಗ್ರೆಸ್ಸಿನವರಿಗೆ, ಸಿದ್ದರಾಮಯ್ಯನವರಿಗೆ ಇಲ್ಲದ ಸಭ್ಯತೆಯ ಪಾಠ ಬಿಜೆಪಿಗೊಂದೇ ಏಕೆ? ಸಿದ್ದರಾಮಯ್ಯ ನನ್ನೆದುರು ಡಿಬೆಟ್‌ಗೆ ಬರಲಿ. ಸಂಸ್ಕೃತಿ ಎಂದರೇನು, ಯಾವುದು ಸಭ್ಯತೆ ಎಂಬ ಬಗ್ಗೆ ಸಾರ್ವಜನಿಕರ ಎದುರೇ ಅವರೊಂದಿಗೆ ನಾನು ಚರ್ಚಿಸಲು ಸಿದ್ಧ ಎಂದು ಸಂಸದ ಅನಂತಕುಮಾರ ಹೆಗಡೆ ಸವಾಲು ಹಾಕಿದ್ದಾರೆ.ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ನಮ್ಮ ಸಂಸ್ಕೃತಿ, ದೇವಸ್ಥಾನಗಳ ಬಗ್ಗೆ ಅಸಭ್ಯವಾಗಿ ಮೊದಲು ನಡೆದುಕೊಂಡವರು ಯಾರು ಎಂದು ಅವರಿಗೆ ತಿಳಿಸುತ್ತೇನೆ. ನಮ್ಮ ಬಗ್ಗೆ ಅಷ್ಟೆಲ್ಲ ಕೀಳಾಗಿ, ಎಲ್ಲೆ ಮೀರಿ ಮಾತನಾಡುವುದು ಏನಿತ್ತು? ಎಂದು ಪ್ರಶ್ನಿಸಿದರು.ಅಜಿತ್ ಸಿಂಗ್ ಪ್ರಧಾನಿಯನ್ನು ಕುರಿ, ಅಭಿಷೇಕ ಸಿಂಗ್ ಮಾನ್ವಿ ಹಾನಿ ಮಾಡುವ ಮನುಷ್ಯ, ಅಜಂ ಖಾನ್ ಜಾತಿವಾದಿ, ಬೇನ್ ಪ್ರತಾಪ ವರ್ಮಾ ಕೊಲೆಗೆಡುಕ, ಸಲ್ಮಾನ್ ಖುರ್ಷಿದ್ ಕಪ್ಪೆ, ಮಂಗ ಎಂದು ನರೇಂದ್ರ ಮೋದಿ ಅವರನ್ನು ಕರೆದರು. ಪಿ. ಚಿದಂಬರಂ ಅತ್ಯಂತ ದೊಡ್ಡ ಸುಳ್ಳುಗಾರ, ಜೈರಾಮ ರಮೇಶ ಭಸ್ಮಾಸುರ ಎಂದು ಕರೆದರೆ ಕಾಂಗ್ರೆಸ್ ಬಹುತೇಕ ನಾಯಕರು ಮೋದಿಯನ್ನು ಹಿಟ್ಲರ್ ಎಂದು ಕರೆದರು. ಇದೆಲ್ಲಕ್ಕೂ ದಾಖಲೆ ಇವೆ. ಸಿದ್ದರಾಮಯ್ಯನವರೇ ಪ್ರಧಾನಿ ಅವರನ್ನು ಮಾಸ್ ಮರ್ಡರರ್ ಎಂದಿದ್ದಾರೆ. ಆವಾಗ ಏಕೆ ಸಿದ್ದರಾಮಯ್ಯ ಮಾತನಾಡಲಿಲ್ಲ ? ಎಲ್ಲರೂ ಏಕವಚನದಲ್ಲಿಯೇ ಕರೆದಿದ್ದಾರೆ. ಯಾರು ಒಪ್ಪುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದರೆ, ನನ್ನ ದೇಶ, ನನ್ನ ಪ್ರಧಾನಿ, ನನ್ನ ನಿಲುವು. ಇದರಲ್ಲಿ ಯಾವುದೇ ಹಿಂಜರಿಕೆ ಇಲ್ಲ. ಈ ರೀತಿ ಇನ್ನೆಷ್ಟು ನಾವು ಹೇಳಿಸಿಕೊಳ್ಳಬೇಕು ? ಇದು ಸಂಸ್ಕೃತಿಯಾ? ನನಗೂ ಸಭ್ಯತೆ, ಸಂಸ್ಕೃತಿ ಗೊತ್ತಿದೆ. ಆದರೆ, ಯಾರಿಗೆ ಯಾವ ಭಾಷೆಯಲ್ಲಿ ಮಾತನಾಡಬೇಕೋ, ಅದೇ ಭಾಷೆಯಲ್ಲಿಯೇ ಮಾತನಾಡಬೇಕು ಎಂದು ತಮ್ಮ ಹಿಂದಿನ ಮಾತುಗಳನ್ನು ಸಮರ್ಥಿಸಿಕೊಂಡರು.ಸಂಸ್ಕೃತಿ ಎಂದರೆ ಏನು ಎಂದು ಮೊದಲು ಸಿದ್ದರಾಮಯ್ಯನವರೇ ಕಲಿತುಕೊಳ್ಳಿ, ಕಾಂಗ್ರೆಸ್‌ನವರು ಸಭ್ಯತೆ, ಮಾತನಾಡುವ ರೀತಿ ಮೊದಲು ಕಲಿತುಕೊಳ್ಳಬೇಕು. ನಮಗೆ ಪಾಠ ಮಾಡಲು ಬರಬೇಡಿ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವಾ? ಇದು ಯಾವ ಸೀಮೆ ನ್ಯಾಯ ಎಂದ ಅನಂತ್, ನಾವು ನಮ್ಮ ನಾಯಕತ್ವ, ನಮ್ಮ ಧರ್ಮ ಪ್ರೀತಿಸುವ ಜನ. ಅಯೋಧ್ಯೆ ರಾಮ ಮಂದಿರದ ಬಗ್ಗೆ ಏನೆಲ್ಲ ಅವಹೇಳನಕಾರಿ ಮಾತನಾಡಿದರು. ಹಿಂದೂ ಸಮಾಜ ಎಂದರೆ ಬೇವರ್ಸಿ ಸಮಾಜವಾ? ನಮ್ಮ ಜನಕ್ಕೆ ಮತಗಳೇ ಇಲ್ಲವಾ? ಶೇ. 15-20 ರಷ್ಟಿರುವ ಸಮಾಜದ ಮತಕ್ಕಾಗಿ ಜೊಲ್ಲು ಸುರಿಸಿಕೊಂಡು ಮಾತನಾಡುವವರು ಹಿಂದೂ ಸಮಾಜಕ್ಕೆ ಗೌರವ ಕೊಟ್ಟು ಮಾತನಾಡುವುದನ್ನು ಮೊದಲು ಕಲಿತುಕೊಳ್ಳಲಿ ಎಂದರು.ಜ್ಯಾತ್ಯತೀತ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇದೆ. ಆದರೆ, ಹಿಂದೂಗಳಿಗೆ ಒಂದು, ಮುಸಲ್ಮಾನರಿಗೆ ಒಂದು ಎಂಬುದು ಯಾವ ರೀತಿಯ ನ್ಯಾಯ? ಸಿದ್ದರಾಮಯ್ಯ ಏಕವಚನದಲ್ಲಿ ಕರೆಯುವುದು ಸರಿ ಎಂದಾದರೆ ನಾನೂ ಅವರನ್ನು ಏಕವಚನದಲ್ಲಿ ಕರೆದಿದ್ದು ಸರಿ, ದೇವರು ಒಪ್ಪಿಕೊಳ್ತಾನೆ. ಕಾಂಗ್ರೆಸ್‌ನಲ್ಲಿಯೂ ರಾಮ ಭಕ್ತರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವವರು ಅನೇಕರಿದ್ದಾರೆ. ಆದರೆ, ಸಂಸ್ಕೃತಿಯ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ನನ್ನ ಮುಂದೆ ಬರಲಿ ಎಂದು ಅನಂತಕುಮಾರ ಸವಾಲೆಸೆದರು.
ಪಕ್ಷದ ಅಧ್ಯಕ್ಷ ವಿಜಯೇಂದ್ರ ಹೇಳಿದ್ದು ಸರಿ ಇದೆ. ನಾನು ಮಾತನಾಡಿದ್ದು ಬಿಜೆಪಿಯ ನಿಲುವು ಅಥವಾ ಅಭಿಪ್ರಾಯ ಅಲ್ಲ, ಅದು ನನ್ನ ವೈಯಕ್ತಿಕ ನಿಲುವು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.ನನ್ನ ಆರೋಗ್ಯ ಅತ್ಯಂತ ಉತ್ತಮವಾಗಿದೆ. ಆರೋಗ್ಯದಲ್ಲಿ ಯಾವುದೇ ಏರುಪೇರು ಇಲ್ಲ. ಮುಂದಿನ ದಿನದಲ್ಲಿ ಬಿಜೆಪಿಯೇ ಗೆಲ್ಲುತ್ತದೆ. ನಾನು ಟಿಕೆಟ್ ಆಕಾಂಕ್ಷಿಯಾಗಿದ್ದರೆ ನಾನು ಚಿಂತೆ ಮಾಡಬೇಕೇ ಹೊರತೂ ಬೇರೆಯವರಿಗೇಕೆ? ಟಿಕೆಟ್ ಬಗ್ಗೆ ಮಾತನಾಡುವವರು ಅವರವರ ಕೆಲಸ ನೋಡಿಕೊಂಡಿರಲಿ ಎಂದು ಅನಂತಕುಮಾರ ಹೆಗಡೆ ಹೇಳಿದರು.