ಅಹಿಂದ ಮುಖಕ್ಕೆ ಮಸಿ ಬಳಿದ ಕಾಂಗ್ರೆಸ್‌: ವಿನಯ ಕುಮಾರ

KannadaprabhaNewsNetwork |  
Published : Mar 31, 2026, 01:30 AM IST
30ಕೆಡಿವಿಜಿ1-ದಾವಣಗೆರೆಯಲ್ಲಿ ಸೋಮವಾರ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮೊದಲ ಸಲ ಸಿಎಂ ಆಗಿದ್ದಾಗ ತಾವು ಆದರ್ಶ ವ್ಯಕ್ತಿ ಅಂದುಕೊಂಡಿದ್ದ ಸಿದ್ದರಾಮಯ್ಯ ಈಗ ಸೋಲ್ಡ್ ಔಟ್ ಆಗಿದ್ದು, ಶ್ರೀಮಂತ ಕುಟುಂಬಕ್ಕೆ ಮಣೆ ಹಾಕುವ ಮೂಲಕ ಅಹಿಂದ ವರ್ಗಗಳ ಮುಖಕ್ಕೆ ಕಾಂಗ್ರೆಸ್ ಪಕ್ಷ ಮಸಿ ಬಳಿದಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ ಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಆದರ್ಶ ವ್ಯಕ್ತಿ ಅಂದುಕೊಂಡಿದ್ದ ಸಿಎಂ ಸಿದ್ದರಾಮಯ್ಯ ಸೋಲ್ಡ್‌ ಔಟ್‌ ಆಗಿದ್ದಾರೆಂದು ಟೀಕೆ - ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಗೆಲುವು ನಿಶ್ಚಿತ, 34 ಹಳ್ಳಿಗೆ ನನ್ನ ಪಾದಯಾತ್ರೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೊದಲ ಸಲ ಸಿಎಂ ಆಗಿದ್ದಾಗ ತಾವು ಆದರ್ಶ ವ್ಯಕ್ತಿ ಅಂದುಕೊಂಡಿದ್ದ ಸಿದ್ದರಾಮಯ್ಯ ಈಗ ಸೋಲ್ಡ್ ಔಟ್ ಆಗಿದ್ದು, ಶ್ರೀಮಂತ ಕುಟುಂಬಕ್ಕೆ ಮಣೆ ಹಾಕುವ ಮೂಲಕ ಅಹಿಂದ ವರ್ಗಗಳ ಮುಖಕ್ಕೆ ಕಾಂಗ್ರೆಸ್ ಪಕ್ಷ ಮಸಿ ಬಳಿದಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ ಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜು ವರದಿಯನ್ನು ಕಸದ ಬುಟ್ಟಿಗೆ ಹಾಕಿರುವ ಸಿದ್ದರಾಮಯ್ಯ ದಿವಂಗತ ದೇವರಾಜು ಅರಸು ಅವರಿಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳುತ್ತಾರೆ. ಆದರೆ, ಅರಸುರವರು ಶೋಷಿತ ವರ್ಗಗಳ ಹೆಗಲ ಮೇಲೆ ಕೈಹಾಕಿ, ಕೂಲಿ ಮಾಡುತ್ತಿದ್ದವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಳ್ಳುತ್ತಿದ್ದರು ಎಂದರು.

ಕಾಂಗ್ರೆಸ್ ಪಕ್ಷವು ಸಂಪ್ರದಾಯದ ಹೆಸರಿನಲ್ಲಿ ಅಹಿಂದ ವರ್ಗಕ್ಕೆ ಘೋರ ಅನ್ಯಾಯ ಮಾಡಿದೆ. ಇದೀಗ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಐತಿಹಾಸಿಕ ಉಪ ಚುನಾವಣೆ ನಡೆಯಲಿದೆ. ಇದುವರೆಗೂ ದಕ್ಷಿಣ ಕ್ಷೇತ್ರವನ್ನು ಇಲ್ಲಿ ಬಿಜೆಪಿ ಗೆದ್ದಿಲ್ಲ. ಆದರೆ, ಈ ಸಲ ಬಿಜೆಪಿ ಜಯ ಗಳಿಸುವುದು ನಿಶ್ಚಿತವಾಗಿವೆ. ಕಾಕತಾಳೀಯ ಎಂಬಂತೆ ಮೇ 4ರಂದು ಫಲಿತಾಂಶದ ದಿನವೇ ತಮ್ಮ ಜನ್ಮದಿನವಿದೆ. ಬಿಜೆಪಿ ಗೆದ್ದ ಖುಷಿಯ ವಿಷಯ ಕೇಳಿದ ನಂತರವೇ ಕೇಕ್ ಕತ್ತರಿಸಿ, ಜನ್ಮ ದಿನ ಆಚರಿಸಿಕೊಳ್ಳುವೆ ಎಂದು ತಿಳಿಸಿದರು.

ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪಗೆ ಗೆಲ್ಲಿಸಲು ಬಿಜೆಪಿಯ ರಾಜ್ಯ, ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರಲಿದ್ದಾರೆ. ಸ್ವಾಭಿಮಾನಿ ಬಳಗದ ತಾವು ಮಾನಸಿಕವಾಗಿ ಬಿಜೆಪಿಗೆ ಬಂದಿದ್ದೇನೆ. ಯಾವುದೇ ಒಂದು ಚುನಾವಣೆಯಲ್ಲಿ ಸಾಂಘಿಕ ಹೋರಾಟ ಮಾಡಬೇಕಾಗುತ್ತದೆ. ಹಾಗಾಗಿ, 3 ದಿನಗಳ ಕಾಲ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಿಂದ ಪಾದಯಾತ್ರೆ ಮೂಲಕ ದಕ್ಷಿಣ ಕ್ಷೇತ್ರದ 34 ಹಳ್ಳಿಗಳಿಗೆ ಸುತ್ತಾಡಿ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪರ ಮತಯಾಚಿಸುತ್ತೇನೆ ಎಂದು ಅವರು ಹೇಳಿದರು.

ಒಂದೇ ಕುಟುಂಬಕ್ಕೆ ಇನ್ನೂ ಎಷ್ಟು ದಿನ ಅಧಿಕಾರ ಕೊಡುತ್ತೀರಾ? ಸಚಿವರು, ಸಂಸದರು ಒಂದೇ ಮನೆಯವರಾಗಿದ್ದು, ಇದೀಗ ಉಪ ಚುನಾವಣೆಯಲ್ಲೂ ಅದೇ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ಪ್ರಜಾಪ್ರಭುತ್ವಕ್ಕೆ ಅರ್ಥವೆಲ್ಲಿದೆ? ಈಗ ಅನುಕಂಪ ಅಂತಾ ಸಂಪ್ರದಾಯದಲ್ಲಿ ಟಿಕೆಟ್ ಕೊಟ್ಟ ಕಾಂಗ್ರೆಸ್ 2028ರ ಚುನಾವಣೆಯಲ್ಲಿ ಹೊಸ ಸಂಪ್ರದಾಯವೆಂದು ಅದೇ ಕುಟುಂಬಕ್ಕೆ ಟಿಕೆಟ್ ನೀಡುವುದನ್ನು ಕಾಂಗ್ರೆಸ್ ಮುಂದುವರಿಸುವ ಹುನ್ನಾರ ನಡೆಸಿದೆ. ಆದರೆ, ಬಿಜೆಪಿ ಪರಿಶಿಷ್ಟ ಪಂಗಡದ ಓರ್ವ ಸಾಮಾನ್ಯ ಕಾರ್ಯಕರ್ತ ಶ್ರೀನಿವಾಸಗೆ ಟಿಕೆಟ್ ನೀಡಿದ್ದು ಬದಲಾವಣೆಯ ಸೂಚಕವಾಗಿದೆ ಎಂದು ವಿವರಿಸಿದರು.

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ನನ್ನ ಸ್ವಂತ ಸಹೋದರನಂತಿದ್ದು, ಸ್ವಯಂ ಪ್ರೇರಣೆಯಿಂದ ಶ್ರೀನಿವಾಸ ಪರ ಪ್ರಚಾರ ಮಾಡುತ್ತಿದ್ದೇನೆ. ಗಾಡ್ ಫಾದರ್ ಇಲ್ಲದಿದ್ದರೆ ರಾಜಕೀಯದಲ್ಲಿ ಯಾರೂ ಸಹ ಬೆಳೆಯುವುದಕ್ಕೆ ಆಗುವುದಿಲ್ಲ. ಅಡೆತಡೆಗಳು ಸಹಜ. ಆದರೆ, ಕಾಂಗ್ರೆಸ್ಸಿನಲ್ಲಿ ಒಂದು ಕುಟುಂಬ ಬಿಟ್ಟರೆ ಉಳಿದವರಿಗೆ ಅವಕಾಶವೇ ಇಲ್ಲ. ದೊಡ್ಡ ಕೂಟ ವ್ಯವಸ್ಥೆಯನ್ನು ಒಡೆದು ಹಾಕಲು ಶ್ರೀನಿವಾಸಗೆ ಗೆಲ್ಲಿಸುವ ಅವಶ್ಯಕತೆ ಇದೆ. ಇಲ್ಲಿ ಬಿಜೆಪಿ ಗೆದ್ದರೆ ಅದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧದ ಗಟ್ಟಿ ಸಂದೇಶವಾಗುತ್ತದೆ. ಅಭಿವೃದ್ಧಿಯೆಂದರೆ ಸಿಸಿ ರಸ್ತೆ ಅಂತಾರೆ ಎಂದು ಅವರು ಕುಟುಕಿದರು.

ಹಳ್ಳಿಗಳಲ್ಲಿ ಜನರು ಈ ಸಲ ಬಿಜೆಪಿ ಎನ್ನುತ್ತಿದ್ದಾರೆ. ಯಾವ ಸಿದ್ದರಾಮಯ್ಯನ ಮಾತು ಕೇಳಲ್ಲ. ಅಹಿಂದ ವರ್ಗಗಳ ಹೆಸರಿನಲ್ಲಿ ಶೋಷಣೆ ಆಗುತ್ತಿದೆ ಎಂದು ಸಾಮಾನ್ಯ ಜನ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ಸಿನವರು ದಕ್ಷಿಣ ಕ್ಷೇತ್ರದಲ್ಲಿ ಈ ಸಲ ಹಣದ ಹೊಳೆಯನ್ನೇ ಹರಿಸುತ್ತಾರೆ. ಓಟಿಗೆ ₹5ರಿಂದ ₹10 ಸಾವಿರ ಹಂಚುತ್ತಾರೆಂಬ ಮಾತು ಕೇಳಿಬರುತ್ತಿವೆ. ಬೂತ್ ಮಟ್ಟದಲ್ಲಿ ಬಿಜೆಪಿಗೆ ಸಂಪೂರ್ಣ ಬೆಂಬಲ ಕಂಡುಬರುತ್ತಿದೆ. ನಾವೆಲ್ಲರೂ ಇನ್ನಷ್ಟು ಪ್ರಯತ್ನಪಟ್ಟರೆ ಬಿಜೆಪಿ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಬಡವರಿಗೆ, ಅಹಿಂದ ವರ್ಗದವರಿಗೆ ಕಾಂಗ್ರೆಸ್‌ನಲ್ಲಿ ಅವಕಾಶವೇ ಇಲ್ಲ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಶಿವನಗೌಡ ನಾಯಕ, ಬಿ.ಎಂ. ಸತೀಶ ಕೊಳೇನಹಳ್ಳಿ, ಶರತ್, ಹೇಮಂತ್‌, ವಿನಯ್ ಪಾಳೇಗಾಡ, ನಿಜಲಿಂಗಪ್ಪ ಇತರರು ಇದ್ದರು.

- - -

(ಕೋಟ್‌) ಕಾಂಗ್ರೆಸ್ ಅಭ್ಯರ್ಥಿಯು ಬಿಜೆಪಿ ಅಭ್ಯರ್ಥಿ ತಮಗಿಂತ ಶ್ರೀಮಂತನೆಂಬ ಮಾತುಗಳನ್ನಾಡಿದ್ದಾರೆ. ಚುನಾವಣಾಧಿಕಾರಿಗಳಿಗೆ ಸಲ್ಲಿಸದ ಅಫಿಡವಿಟ್ ಮೇಲೆಯೇ ಕೇಸ್ ಮಾಡಿದರೆ ಯಾರ ಆಸ್ತಿ ಎಷ್ಟು ಇದೆಯೆಂಬುದು ಗೊತ್ತಾಗುತ್ತದೆ. ದಾವಣಗೆರೆಯಲ್ಲಿ ಅರ್ಧಕ್ಕರ್ಧ ಲೇಔಟ್‌ಗಳೇ ಕಾಂಗ್ರೆಸ್ ಅಭ್ಯರ್ಥಿಯ ಕುಟುಂಬದ್ದು. ಅಲ್ಲದೇ, ಕಾಂಗ್ರೆಸ್ ಅಭ್ಯರ್ಥಿ ಬಿಸಿನೆಸ್ ಪದವಿ ಪಡೆದಿದ್ದು, ರಾಜಕೀಯ ಬಿಸಿನೆಸ್ ಮಾಡೋಕೆ ಬಂದಿದ್ದಾರೆ. ಹಳ್ಳಿಗಳ ಅಭಿವೃದ್ಧಿ ವಿಚಾರಕ್ಕೆ ಅಲ್ಲ.

- ಜಿ.ಬಿ. ವಿನಯ ಕುಮಾರ, ರಾಜ್ಯಾಧ್ಯಕ್ಷ, ಸ್ವಾಭಿಮಾನಿ ಬಳಗ.

- - -

-30ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಸೋಮವಾರ ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ. ವಿನಯ ಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಿವನಗೌಡ ನಾಯಕ, ಸತೀಶ ಕೊಳೇನಹಳ್ಳಿ, ಶರತ್, ಹೇಮಂತ್‌ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೃಹಬಳಕೆ ಅಡುಗೆ ಅನಿಲಕ್ಕೆ ಭಾರೀ ಡಿಮ್ಯಾಂಡ್...!
ಡಾ.ಜೆ.ಪಾಪೇಗೌಡರಿಗೆ ಎಂ.ಶಿವಲಿಂಗಯ್ಯ ಸಮಾಜಸೇವಾ ಪ್ರಶಸ್ತಿ