ಬ್ಯಾಡಗಿ ರಸ್ತೆ ಅಗಲೀಕರಣ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ

KannadaprabhaNewsNetwork |  
Published : Jun 03, 2025, 12:06 AM IST
ಮ | Kannada Prabha

ಸಾರಾಂಶ

ಮುಖ್ಯರಸ್ತೆ ಯಾರೊಬ್ಬರ ಸ್ವತ್ತಲ್ಲ. ಇದು ನಮ್ಮ ಹಕ್ಕು. ಮುಖ್ಯರಸ್ತೆಯಲ್ಲಿನ ಅಗಲೀಕರಣವಾಗದೇ ಉಳಿದಿರುವ ಕೇವಲ 750 ಮೀ. ರಸ್ತೆ ಪಟ್ಟಣಕ್ಕೆ ಬಹುದೊಡ್ಡ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.

ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣದ ಹಿನ್ನೆಲೆ ಅಗಲೀಕರಣ ಹೋರಾಟ ಸಮಿತಿ ಜೂ. 5ರಿಂದ ಹಮ್ಮಿಕೊಂಡಿರುವ ಬೃಹತ್ ಅನಿರ್ದಿಷ್ಟ ಅವಧಿಯ ಧರಣಿ ಹಾಗೂ ಬ್ಯಾಡಗಿ ಬಂದ್‌ಗೆ ತಾಲೂಕು ಕಾಂಗ್ರೆಸ್ ಘಟಕ ಸಂಪೂರ್ಣ ಬೆಂಬಲ ನೀಡುವ ಮೂಲಕ ಸೈದ್ಧಾಂತಿಕ ಹೋರಾಟಕ್ಕೆ ನೈತಿಕ ಬಲ ತುಂಬಲಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ ಘೋಷಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯರಸ್ತೆ ಯಾರೊಬ್ಬರ ಸ್ವತ್ತಲ್ಲ. ಇದು ನಮ್ಮ ಹಕ್ಕು. ಮುಖ್ಯರಸ್ತೆಯಲ್ಲಿನ ಅಗಲೀಕರಣವಾಗದೇ ಉಳಿದಿರುವ ಕೇವಲ 750 ಮೀ. ರಸ್ತೆ ಪಟ್ಟಣಕ್ಕೆ ಬಹುದೊಡ್ಡ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಅಭಿವೃದ್ಧಿ ಕಾಣದ ಬ್ಯಾಡಗಿ ಮುಖ್ಯರಸ್ತೆಯಿಂದ ವಿಶ್ವಾದ್ಯಂತ ಪಟ್ಟಣದ ಖ್ಯಾತಿ ಮಣ್ಣು ಪಾಲಾಗುತ್ತಿದೆ ಎಂದರು.

ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಪ್ರತಿದಿನ ಸಾವಿರಾರು ವಾಹನ ಸಂಚಾರ ಮಾಡುವ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಒಂದು ರಸ್ತೆಯಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. 14 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮುಖ್ಯರಸ್ತೆ ಅಗಲೀಕರಣ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ. ಅಧಿಕಾರದಲ್ಲಿ ಯಾರಿದ್ದಾರೆ ಅನ್ನುವುದು ಮುಖ್ಯವಲ್ಲ. ಜನರ ಸಮಸ್ಯೆಗಳು ಪರಿಹಾರವಾಗಬೇಕು. ಆದ್ದರಿಂದ ಅಳುಕಿಲ್ಲದೇ ಹೋರಾಟದಲ್ಲಿ ಭಾಗವಹಿಲಿದ್ದೇವೆ ಎಂದರು.

ಹೋರಾಟಕ್ಕೆ ತಾರ್ಕಿಕ ಅಂತ್ಯ: ಕಾರ್ಯದರ್ಶಿ ರಮೇಶ ಸುತ್ತಕೋಟಿ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿಯನ್ನಿಟ್ಟುಕೊಂಡು ಕಳೆದ 14 ವರ್ಷದಿಂದ ಅಗಲೀಕರಣ ಹೋರಾಟ ಸಮಿತಿ ಬೀದಿಗಿಳಿದು ನಡೆಸುತ್ತಿರುವ ಹೋರಾಟಕ್ಕೆ ನೈತಿಕ ಬೆಂಬಲದ ತುಂಬುವ ಅವಶ್ಯಕತೆ ಇದೆ. ಹೀಗಾಗಿ ಕಾಂಗ್ರೆಸ್‌ನ ಎಲ್ಲ ಮುಖಂಡರು, ಕಾರ‍್ಯಕರ್ತರು ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ನೀಡಲಿದ್ದೇವೆ ಎಂದರು. ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಶೀಮಿ ಮಾತನಾಡಿ, ಕಳೆದ 14 ವರ್ಷದಿಂದ ನಡೆಯುತ್ತಿರುವ ನ್ಯಾಯಸಮ್ಮತ ಹೋರಾಟಕ್ಕೆ ಇಂದಿಗೂ ಬೆಲೆ ಸಿಕ್ಕಿಲ್ಲ. ಗುಣಮಟ್ಟದ ರಸ್ತೆಯಾದಲ್ಲಿ ಎಲ್ಲರಿಗೂ ಅನೂಕೂಲವಾಗಲಿದೆ ಎಂದರು.

ರಾಜೀನಾಮೆಗೆ ಸಿದ್ಧ: ಪುರಸಭೆ ಸದಸ್ಯ ಶಂಕರ ಕುಸಗೂರ ಮಾತನಾಡಿ, ಅಧಿಕಾರ ಶಾಶ್ವತವಲ್ಲ. ಆದರೆ ನಾವು ಮಾಡುವ ಕೆಲಸಗಳು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿವೆ. 4 ಜನ ಶಾಸಕರು 10 ಜನ ಮುಖ್ಯಮಂತ್ರಿಗಳು ಬಂದು ಹೋದರೂ ಕೇವಲ 750 ಮೀಟರ್ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ ಎನ್ನುವುದು ತೀರಾ ನೋವಿನ ಸಂಗತಿ. ಸಂದರ್ಭ ಎದುರಾದರೆ ಪುರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಯಾದರೂ ಹೋರಾಟದಲ್ಲಿ ಭಾಗಿಯಾಗಲು ಸಿದ್ಧನಿದ್ದೇನೆ ಎಂದರು.

ಈ ವೇಳೆ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರಾದ ರಫೀಕ್ ಮುದ್ಗಲ್, ಸೋಮಣ್ಣ ಸಂಕಣ್ಣನವರ ಮಾಜಿ ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ನಜೀರಅಹ್ಮದ ಶೇಖ್, ಮುಖಂಡರಾದ ಖಾದರಸಾಬ್ ದೊಡ್ಮನಿ, ಬಾಬು ಓಲೇಕಾರ, ಶಂಭನಗೌಡ ಪಾಟೀಲ, ಗಿರೀಶ ಇಂಡಿಮಠ, ಮಂಜೂರ್ ಹಕೀಂ, ಮಾರುತಿ ಅಚ್ಚಿಗೇರಿ, ಜೈಭೀಮ್ ರಾರಾವಿ, ಹನುಮಂತ ಕಾಟೇನಹಳ್ಳಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ